ಒಪ್ಪಿತ ಲೈಂಗಿಕ ಕ್ರಿಯೆ ಹಿನ್ನೆಲೆ ಪ್ರಕರಣ ವಜಾಕ್ಕೆ ಕೋರಿದ್ದ ಆರೋಪಿ | ಶಿವಮೊಗ್ಗದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿ

ವರದಿ: ರಮೇಶ್‌ ಬನ್ನಿಕುಪ್ಪೆ, ಕನ್ನಡಪ್ರಭ

ಬೆಂಗಳೂರು: ವಿದ್ಯಾರ್ಥಿನಿಗೆ ಮಾಡಿದ ಸಹಾಯಕ್ಕೆ ಬದಲಾಗಿ ಲೈಂಗಿಕ​ವಾಗಿ ಬಳಸಿಕೊಂಡ ಆರೋಪಿ ವಿರುದ್ಧ ಪ್ರಕರಣದ ವಿಚಾರಣೆ ಮುಂದುವರಿಸಿದರೆ ಸಂತ್ರಸ್ತ ವಿದ್ಯಾರ್ಥಿನಿ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿ ಆದೇಶಿಸಿದೆ. 

ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ವಸತಿ ನಿಲಯದಲ್ಲಿ ಸೀಟು ಕೊಡಿಸಿದ್ದಕ್ಕೆ ಬದಲಾಗಿ ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿ ಸಿಕ್ಕಿಬಿದ್ದ ವಸತಿ ನಿಲಯದ ಮೇಲ್ವಿಚಾರಕ (ವಾರ್ಡನ್‌)ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ಇತ್ತೀಚೆಗೆ ರದ್ದು ಮಾಡಿ ಆದೇಶಿಸಿದೆ.

ವಿದ್ಯಾರ್ಥಿನಿಯನ್ನು ಒತ್ತಾಯಪೂರ್ವಕವಾಗಿ ಕರೆ​ತಂದು ವ್ಯಭಿಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಸಾಕ್ಷಿಗಳಿಲ್ಲ. ವಿದ್ಯಾರ್ಥಿನಿಯು ಅರ್ಜಿದಾರ ಆರೋಪಿಯೊಂದಿಗೆ ತಾನಾಗಿಯೇ ಬಂದಿದ್ದಾರೆ. ಹೀಗಿರುವಾಗ ಇದು ಒಪ್ಪಿತ ಲೈಂಗಿಕ ಕ್ರಿಯೆಯಾಗಿದೆ. ಇದನ್ನು ವ್ಯಭಿಚಾರ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ, ಸಂತ್ರಸ್ತೆಯಾಗಿರುವವರು ಕಾಲ್‌'ಗರ್ಲ್ (ಕರೆವೆಣ್ಣು) ಅಲ್ಲ. ಈ ಸಂಬಂಧ ಅರ್ಜಿದಾ​ರರು ಮತ್ತು ಸಂತ್ರಸ್ತೆಯ ಖಾಸಗಿ ಸಂಬಂಧವಾಗಿದೆ. ಆರೋಪಿಗೆ ಶಿಕ್ಷೆಯನ್ನಾಗಿ ನೈತಿಕ ದೃಷ್ಟಿಯಿಂದ ವಾರ್ಡನ್‌ ಹುದ್ದೆಯಿಂದ ವಜಾ ಮಾಡಲಾಗಿದೆ. ಹಾಗಾಗಿ ಪ್ರಕರಣ ಮುಂದುವರಿಸಿದರೆ ಸಂತ್ರಸ್ತೆಯ ಹೆಸರಿಗೆ ಧಕ್ಕೆಯಾಗಲಿದೆ. ಆದ್ದರಿಂದ ಪ್ರಕರಣ ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಪಡಿಸಿದೆ. 

ಏನಿದು ಪ್ರಕರಣ?: ವ್ಯಭಿಚಾರ ನಡೆಯುತ್ತಿದೆ ಎಂಬ ಬಲ್ಲ ಮೂಲಗಳ ಮಾಹಿತಿಯಿಂದಾಗಿ ಶಿವಮೊಗ್ಗದ ಮಥುರಾ ಪ್ಯಾರಡೈಸ್‌ ಹೋಟೆಲ್‌ ಮೇಲೆ ಸ್ಥಳೀಯ ಪೊಲೀಸರು ಸೆ. 10ರ ಸಂಜೆ ದಾಳಿ ನಡೆಸಿರುತ್ತಾರೆ. ಈ ವೇಳೆ ವಿದ್ಯಾರ್ಥಿಗಳ ವಸತಿ ನಿಲಯದ ಮೇಲ್ವಿಚಾರಕ​ನಾಗಿದ್ದ ಪವಿತ್ರಾನಂದ ರಾಜು ಎಂಬುವರು ವಿದ್ಯಾರ್ಥಿ​ನಿಯೊಬ್ಬರ ಜತೆ ಕೊಠಡಿಯಲ್ಲಿರುವುದು ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ವಿಚಾ​ರಣೆ ನಡೆಸಿದಾಗ, ವಸತಿ ನಿಲಯದಲ್ಲಿ ಸೀಟು ಕೊಡಿಸಿದ್ದು ಮತ್ತು ಅಗತ್ಯವಿದ್ದಾಗ ಹಣ ಸಹಾಯ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಲೈಂಗಿಕವಾಗಿ ಬಳಸಿಕೊಳ್ಳುವುದಾಗಿ ಹೇಳಿದ್ದ. ಆದ ಕಾರಣ ಅವರ ಜತೆಯಲ್ಲಿ ಬಂದಿರುವುದಾಗಿ ತಿಳಿಸಿರುತ್ತಾಳೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀ​ಸರು ಮಾನವ ಕಳ್ಳ ಸಾಗಣೆ ಕಾಯಿದೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ಶಿವಮೊಗ್ಗದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು.

‘‘ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವವರು ತನ್ನ ಜತೆ ಬರುವುದಕ್ಕೆ ಒಪ್ಪಿಕೊಂಡಿದ್ದರು. ಅವರನ್ನು ಒತ್ತಾಯ​ಪೂರ್ವಕ​ವಾಗಿ ಕರೆತಂದಿಲ್ಲ. ಅಲ್ಲದೆ, ಅಕ್ರಮವಾಗಿ ವ್ಯಭಿ​ಚಾರ ನಡೆಸುತ್ತಿಲ್ಲ. ಹೀಗಿದ್ದರೂ ತಮ್ಮ ವಿರುದ್ಧ ಮಾನವ ಕಳ್ಳ​ಸಾಗಣೆ ಆರೋಪದಲ್ಲಿ ಪ್ರಕರಣ ದಾಖಲಿಸಿ ತೊಂದರೆ ನೀಡು​ತ್ತಿ​ದ್ದಾರೆ. ಆದ್ದರಿಂದ ಪ್ರಕರಣ ರದ್ದು ಮಾಡ​ಬೇಕು,'' ಎಂದು ಆರೋಪಿ ನ್ಯಾಯಾಪೀಠವನ್ನು ಕೋರಿ​ದ್ದ​ರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆನಂದಬೈರಾರೆಡ್ಡಿ ಅವ​Üರಿದ್ದ ನ್ಯಾಯಪೀಠ, ಪ್ರಕರಣದ ವಿಚಾರಣೆ ಮುಂದು​ವರಿ​ದರೆ ಸಂತ್ರಸ್ತೆಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಪಡಿಸಿದೆ. 

ತನಿಖೆ ವೇಳೆ ಸಂತ್ರಸ್ತ ಮಹಿಳೆ ನೀಡಿರುವ ಹೇಳಿಕೆ ಪರಿಗಣಿಸಿದರೆ ಈ ಪ್ರಕರಣ ಮಾನವ ಕಳ್ಳ ಸಾಗಣೆ ಕಾಯ್ದೆಯಡಿ ಬರುವುದಿಲ್ಲ. ಪ್ರಕರಣದ ಮುಂದುವರಿಸುವುದಕ್ಕೆ ಸಂತ್ರಸ್ತೆಯ ಒತ್ತಾಯವೂ ಇಲ್ಲ. ಆದರೆ, ಪ್ರಕರಣ ಮುಂದುವರೆದು ವಿಚಾರಣೆ ನಡೆಸಲು ಸಂತ್ರಸ್ತೆ ಒತ್ತಾಯಿಸಿದಲ್ಲಿ ಮಾತ್ರ ಮುಂದುವರಿಸಬಹುದು. 
- ವಿವೇಕ್‌ ಸುಬ್ಬಾರೆಡ್ಡಿ, ಹಿರಿಯ ವಕೀಲ

ಪ್ರಕರಣದ ಸಂತ್ರಸ್ತೆಯಾಗಿರುವವರು ಒತ್ತಾಯಿಸಿದಲ್ಲಿ ವಿಚಾರಣೆ ಮುಂದು​ವರೆಸಲು ಅವಕಾಶವಿದೆ. ಅಲ್ಲದೆ, ಈ ರೀತಿಯಲ್ಲಿ ಪೊಲೀಸ್‌ ಇಲಖೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಸಂತ್ರಸ್ತ ಮಹಿಳೆ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರಕರಣ ರದ್ದು ಮಾಡಿದರೆ ಆತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಅನ್ಯಾಯವಾಗಲಿದೆ.
- ಪ್ರಮಿಳಾ ನೇಸರ್ಗಿ, ಹಿರಿಯ ವಕೀಲೆ

(epaper.kannadaprabha.in)