ಬೆಂಗಳೂರು[ಆ.27]  ಯುಕೆಗೆ ತೆರಳಬೇಕು ಎಂದುಕೊಂಡಿದ್ದ ಮೊಹಮದ್ ನಲಪಾಡ್ ಗೆ ಸದ್ಯಕ್ಕೆ ಫಾರಿನ್ ಟೂರ್ ಸಾಧ್ಯವಾಗುತ್ತಿಲ್ಲ. 15 ದಿನ ಲಂಡನ್ ಪ್ರವಾಸಕ್ಕೆ ಅನುಮತಿ ಕೋರಿದ್ದ  ಆಸೆಗೆ ಹೖಕೋರ್ಟ್ ತಣ್ಣೀರು ಎರಚಿದೆ.

 ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್ ಏಕಸದಸ್ಯ ಪೀಠ,  ಸೆಷನ್ಸ್ ನ್ಯಾಯಾಲಯಲ್ಲಿಯೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.  ನ್ಯಾ. ಜಾನ್ ಮೈಕೆಲ್ ಡಿ. ಕುನ್ಹಾ ವಿಚಾರಣೆ ನಡೆಸಿ ಈ ತೀರ್ಮಾನ ನೀಡಿದ್ದಾರೆ. ಫೆ. 17ರಂದು ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನಲಪಾಡ್ ಜೈಲು ಸೇರಿದ್ದರು.

ನನ್ನ ಸಹೋದರ ಲಂಡನ್‌ನಲ್ಲಿ ನೆಲೆಸಿದ್ದಾನೆ. ಆತನನ್ನು ಭೇಟಿ ಮಾಡುವುದಕ್ಕಾಗಿ 15 ದಿನಗಳ ಕಾಲ ಲಂಡನ್‌ಗೆ ತೆರಳಲು ಉದ್ದೇಶಿಸಿದ್ದೇನೆ. ಆದ್ದರಿಂದ ಜಾಮೀನು ಷರತ್ತು ಸಡಿಲಿಸಿ ಲಂಡನ್‌ಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ನಲಪಾಡ್ ತನ್ನ ಅರ್ಜಿಯಲ್ಲಿ ಕೋರಿದ್ದರು.

2018ರ ಫೆ.17ರಂದು ರಾತ್ರಿ ಮೊಹಮದ್ ನಲಪಾಡ್ ಹ್ಯಾರಿಸ್ ಮತ್ತು ಅವರ ಸಹಚರರು ನಗರದ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ವಿದ್ವತ್ ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಲಪಾಡ್ ಅವರನ್ನು ಮೊದಲನೆ ಆರೋಪಿಯನ್ನಾಗಿಸಿ ಅಧೀನ ನ್ಯಾಯಾಲಯಕ್ಕೆ 2018ರ ಮೇ 1ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.