ಮಲೆನಾಡ ಹೆಣ್ಣಿನ ಪುಷ್ಟ ಸಾಧನೆ: ಇಲ್ಲಿ ಬೆಳೆದ ದಾಸವಾಳಕ್ಕೆ ಎಲ್ಲೆಡೆ ಬೇಡಿಕೆ

First Published 15, Jan 2018, 1:40 PM IST
Hibiscus Cultivation
Highlights

ಅದು ಅಂತಾರಾಷ್ಟ್ರೀಯ ಮಟ್ಟದ ದಾಸವಾಳ ಪುಷ್ಪ ಸ್ಪರ್ಧೆ. ವಿಶ್ವಾದ್ಯಂತದ ಅದ್ಭುತ ವಿನ್ಯಾಸದ ಹೈಬಿಸ್ಕಸ್‌ಗಳು ಅಲ್ಲಿ ನಳನಳಿಸುತ್ತಿದ್ದವು. ಅದರಲ್ಲಿ ಭಾರತದ ಸುರೇಶ್ ಪುಷ್ಪಾ ಎಂಬುವರು ಅಭಿವೃದ್ಧಿ ಪಡಿಸಿದ ದಾಸವಾಳವೂ ಇತ್ತು. ವಿಶಿಷ್ಟ ಬಣ್ಣ, ವಿನ್ಯಾಸ ಹೊಂದಿದ ಆ ದಾಸವಾಳಕ್ಕೆ ಮೊದಲ ಬಹುಮಾನ ಬಂತು. ಅದನ್ನು ಅನೌನ್ಸ್ ಮಾಡಿದವರು ಹೈಬಿಸ್ಕಸ್ ಜಗತ್ತಿನ ದೊಡ್ಡ ಹೆಸರು ಬಾಬ್ ಕ್ಯಾರನ್.

ಬೆಂಗಳೂರು (ಜ.15): ಅದು ಅಂತಾರಾಷ್ಟ್ರೀಯ ಮಟ್ಟದ ದಾಸವಾಳ ಪುಷ್ಪ ಸ್ಪರ್ಧೆ. ವಿಶ್ವಾದ್ಯಂತದ ಅದ್ಭುತ ವಿನ್ಯಾಸದ ಹೈಬಿಸ್ಕಸ್‌ಗಳು ಅಲ್ಲಿ ನಳನಳಿಸುತ್ತಿದ್ದವು. ಅದರಲ್ಲಿ ಭಾರತದ ಸುರೇಶ್ ಪುಷ್ಪಾ ಎಂಬುವರು ಅಭಿವೃದ್ಧಿ ಪಡಿಸಿದ ದಾಸವಾಳವೂ ಇತ್ತು. ವಿಶಿಷ್ಟ ಬಣ್ಣ, ವಿನ್ಯಾಸ ಹೊಂದಿದ ಆ ದಾಸವಾಳಕ್ಕೆ ಮೊದಲ ಬಹುಮಾನ ಬಂತು. ಅದನ್ನು ಅನೌನ್ಸ್ ಮಾಡಿದವರು ಹೈಬಿಸ್ಕಸ್ ಜಗತ್ತಿನ ದೊಡ್ಡ ಹೆಸರು ಬಾಬ್ ಕ್ಯಾರನ್.

ಪುಷ್ಪಾಗೆ ಬಹುಮಾನದ ಬಂದದ್ದೊಂದು ಖುಷಿಯಾದರೆ, ಹೆಚ್ಚು ಬಾಬ್ ಕ್ಯಾರನ್ ಅವರಿಂದ ತಾನು ಅಭಿವೃದ್ಧಿಪಡಿಸಿದ ದಾಸವಾಳ ಗುರುತಿಸಲ್ಪಟ್ಟಿತಲ್ಲ ಅನ್ನೋದು ದೊಡ್ಡ ಹೆಮ್ಮೆ. ಆ ಸಂತಸದಲ್ಲಿ ಬಹುಮಾನ ಬಂದ ಆ ದಾಸವಾಳಕ್ಕೆ ಬಾಬ್ ಕ್ಯಾರನ್ ಅವರ ಹೆಸರನ್ನೇ ಇಟ್ಟುಬಿಟ್ಟರು.

‘ಇದು ನನ್ನ ಬದುಕಲ್ಲಿ ಮರೆಯಲಾಗದ ಘಟನೆ’ ಅಂತಾರೆ ಪುಷ್ಪಾ ಸುರೇಶ್. ಪುಷ್ಪಾ ಮೂಲತಃ ಸಾಗರದವರು. ಈಗ ಅಂತಾರಾಷ್ಟ್ರೀಯ ಹೈಬಿಸ್ಕಸ್ ಸೊಸೈಟಿಯ ಭಾರತದ ಪ್ರತಿನಿಧಿ. ಬೆಂಗಳೂರಿನ ತಲಘಟ್ಟಪುರದಲ್ಲಿರುವ ತಮ್ಮ ಮನೆಯ ಪುಟ್ಟ ಜಾಗದಲ್ಲೇ ಎಂಟು ಸಾವಿರಕ್ಕೂ ಅಧಿಕ ದಾಸವಾಳವನ್ನು ಅಭಿವೃದ್ಧಿಪಡಿಸಿದ್ದಾರೆ.

ಇವರು ಅಭಿವೃದ್ಧಿಪಡಿಸಿದ ದಾಸವಾಳ ಬೀಜಗಳು ಅಮೆರಿಕಾ, ಜಪಾನ್, ಬ್ರೆಜಿಲ್, ಇಂಗ್ಲೆಂಡ್, ತೈವಾನ್, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರವಾನೆಯಾಗಿದೆ. ಅಂತಾರಾಷ್ಟ್ರೀಯ ಹೈಬಿಸ್ಕಸ್ ಸೊಸೈಟಿಯ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಇವರ ಪುಷ್ಪಕ್ಕೆ ಮೊದಲ ಬಹುಮಾನ ಬಂದಿದೆ.

ಅಜ್ಜಿ ಕೊಟ್ಟ ದಾಸವಾಳವೇ ಪ್ರೇರಣೆ: ‘ನಾನಾಗ ಪುಟ್ಟ ಹುಡುಗಿ. ನಮ್ಮ ಮನೆಯಲ್ಲಿ ದಾಸವಾಳ ಗಿಡ ಇತ್ತು. ಬಿಳಿ ಮಧ್ಯ ನಸುಗುಲಾಬಿ ಬಣ್ಣವಿದ್ದ ಅಪರೂಪದ ದಾಸವಾಳವದು. ಅಜ್ಜಿ ಅದನ್ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ನನಗೆ ಕಿತ್ತು ಕೊಡುತ್ತಿದ್ದರು. ನಾನದನ್ನು ಮುಡಿದು ಸ್ಕೂಲ್‌ಗೆ ಹೋಗ್ತಿದ್ದೆ. ಆವಾಗಿಂದಲೇ ನನಗೆ ದಾಸವಾಳದ ಬಗ್ಗೆ ಪ್ರೀತಿ ಹುಟ್ಟಿತು. ನಂತರ ಬೆಂಗಳೂರಿಗೆ ಬಂದ ಮೇಲೂ ಇದು ಮುಂದುವರಿಯಿತು.

ಇಂಟರ್‌ನೆಟ್ ಮೂಲಕ ನನಗೆ ತಿಳಿಯದ ದಾಸವಾಳದ ಹೊಸ ಪ್ರಪಂಚವೊಂದು ತೆರೆದುಕೊಂಡಿತು. ಪ್ರಾರಂಭದಲ್ಲಿ ದಾಸವಾಳಗಳನ್ನು ನೋಡಿಕೊಳ್ಳುವುದಕ್ಕೋಸ್ಕರ ಮನೆಯಲ್ಲೇ ಇದ್ದುಬಿಡುತ್ತಿದ್ದೆ. ಹೊರಗೆಲ್ಲೋ ಹೋಗುತ್ತಲೇ ಇರಲಿಲ್ಲ’ ಎನ್ನುವ ಪುಷ್ಪಾ ದಾಸವಾಳಗಳ ಪ್ರಯೋಗಕ್ಕಿಳಿದು ದಶಕಗಳೇ ಕಳೆದಿವೆ. ಈ ವೇಳೆ ಅವರಿಗೆ ಸಹಕಾರಿಯಾಗಿ ಸ್ನೇಹಿತೆ ಶ್ಯಾಮಲಾ ಕೂಡ ನಿಂತಿದ್ದಾರೆ.

ನೂರಾರು ಗಿಡಗಳಲ್ಲಿ ಕೈಗೆ ಬರೋದು ಐದಾರಷ್ಟೇ!: ನಾನಾ ದಾಸವಾಳಗಳನ್ನು ಕಂಡು ಅವುಗಳನ್ನು ಸಂಗ್ರಹಿಸಿ ಪರಾಗಸ್ಪರ್ಶ ಮಾಡಿದರೆ ಅದರಲ್ಲಿ ಗಿಡಗಳೇನೋ ಬಹಳ ಬರುತ್ತವೆ. ಗಿಡಗಳು ಬೆಳೆದು ಹೂವಾಗುವವರೆಗೂ ಆರೈಕೆ ಮಾಡಿ ಅತ್ಯುತ್ತಮವಾದದ್ದನ್ನಷ್ಟೇ ಮುಂದುವರಿಸುತ್ತಾರೆ. ಹಾಗಾದಾಗ ಕೈಗೆ ಬರೋದು ಐದೋ ಆರೋ ಗಿಡಗಳಷ್ಟೇ. ಗಿಡಗಳನ್ನು ನೆಟ್ಟು ಬೆಳೆಸೋದು ಸುಲಭ. ಆದರೆ ಬೀಜಗಳಿಂದ ಹೊಸದೊಂದು ತಳಿ ಹುಟ್ಟುಹಾಕಿ ಅದನ್ನು ಬೆಳೆಸೋದಕ್ಕೆ ಅಪಾರ ತಾಳ್ಮೆ, ಶ್ರಮ ಬೇಕು.

ಅದನ್ನು ಸೂಕ್ಷ್ಮವಾಗಿ ನಿರ್ವಹಿಸುವ ಕಲೆ ಪುಷ್ಪಾ ಅವರಲ್ಲಿದೆ. ದಾಸವಾಳದ ಹೈಬ್ರಿಡ್ಸ್ ಅನ್ನು ತಯಾರು ಮಾಡೋದು ಅಷ್ಟು ಸುಲಭ ಅಲ್ಲ. ಬೇರೆ ಬೇರೆ ದೇಶದಲ್ಲಿ ಅದರಲ್ಲೂ ಅಮೆರಿಕಾದಲ್ಲಿ ಬಹಳ ವೆರೈಟಿ ಇದೆ. ನಮ್ಮ ಹತ್ರ ಕೆಲವೇ ಕೆಲವು ವೈವಿಧ್ಯಗಳಿವೆ. ಕಸಿ ಮಾಡಲಿಕ್ಕೆ ಬೇಕು ಅಂದರೆ ಅಲ್ಲಿ ತಕ್ಷಣ ಸಿಕ್ಕಿಬಿಡುತ್ತೆ, ನಮ್ಮಲ್ಲಿ ಸಿಗಲ್ಲ. ಸಿಗುವ ಕೆಲವೇ ವೆರೈಟಿಯಲ್ಲಿ ವಿಶ್ವಮಟ್ಟದ ಸಸಿ ಅಭಿವೃದ್ಧಿಪಡಿಸೋದು ಕಷ್ಟವೇ. ಹೀಗಾಗಿ ಅತ್ಯುತ್ತಮ ಪ್ರಭೇದ ಸೃಷ್ಟಿಸೋದು ಸವಾಲು. ನಾನದನ್ನು ಮಾಡಬೇಕು ಅಂದುಕೊಂಡಿದ್ದೇನೆ. ಇದರ ಜೊತೆ ಜೊತೆಯಲ್ಲಿಯೇ ಸಾವಯವ ಕೃಷಿ ಮತ್ತು ಮರ ನೆಡಬೇಕು ಅನ್ನುವ ಕನಸಿದೆ ಎಂದು ಪುಷ್ಪಾ ಸುರೇಶ್ ಹೇಳಿದ್ದಾರೆ.

loader