Asianet Suvarna News Asianet Suvarna News

ಅರ್ಹ ಸಚಿವರ ಪಟ್ಟಿ ಸಿದ್ಧಪಡಿಸಿದ ಕಾಂಗ್ರೆಸ್ : ಯಾರಿಗೆ ಯಾವ ಖಾತೆ..?

ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ನಾಯಕತ್ವ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿ, ಅದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Heres Congress list of ministers

ಬೆಂಗಳೂರು : ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ನಾಯಕತ್ವ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿ, ಅದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಪ್ರಮುಖ ಖಾತೆಗಳಿಗೆ ಜೆಡಿಎಸ್ ಬೇಡಿಕೆಯಿಟ್ಟಿರುವ ಕಾರಣ ಯಾರಿಗೆ ಯಾವ ಖಾತೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಜತೆಗೆ, ಪೈಪೋಟಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬ ಮಾಹಿತಿಯನ್ನು ಪಕ್ಷದ ಐದು ಪ್ರಮುಖ ನಾಯಕರ ಹೊರತಾಗಿ ಯಾರಿಗೂ ಮಾಹಿತಿ ನೀಡಲಾಗಿಲ್ಲ. ಹೀಗಾಗಿ, ಖಚಿತವಾಗಿ ಯಾರ‌್ಯಾರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆದರೆ, ಮೂಲಗಳ ಪ್ರಕಾರ ಕಾಂಗ್ರೆಸ್ ತನ್ನ ಬಳಿಯಿರುವ 22  ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಪಕ್ಷೇತರರಾದ ಆರ್. ಶಂಕರ್ ಹಾಗೂ ನಾಗೇಶ್ ಅವರಿಗೆ ನೀಡಲಿದೆ. ಉಳಿದ ಇಪ್ಪತ್ತು ಸ್ಥಾನಗಳ ಪೈಕಿ ಈಗಾಗಲೇ ಡಾ.ಜಿ.ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ ಯಾಗಿದ್ದಾರೆ. ಇನ್ನು  ಎರಡರಿಂದ ಮೂರು ಸ್ಥಾನ ಖಾಲಿ ಉಳಿಸಿಕೊಳ್ಳಲಿ  ಬಹುತೇಕ ಕಾಂಗ್ರೆಸ್ 16- 17  ಸ್ಥಾನಗಳನ್ನು  ತುಂಬಿ ಕೊಳ್ಳಲಿದೆ. ಅವುಗಳ ಪೈಕಿ, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಕೆ.ಜೆ.ಜಾರ್ಜ್, ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ ಹಾಗೂ ಎಸ್.ಆರ್. ಪಾಟೀಲ್ ಅವರು ಸಂಪುಟ ಸೇರುವ ಅವಕಾಶ ಹೆಚ್ಚು.

ಲಿಂಗಾಯತ ಕೋಟಾದಲ್ಲಿ ಶಾಮನೂರು ಶಿವಶಂಕರಪ್ಪ, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲ್ ಹೆಸರಿದೆ. ಒಕ್ಕಲಿಗರ ಪೈಕಿ ಡಿ.ಕೆ. ಶಿವಕುಮಾರ್ ಹೊರತುಪಡಿಸಿ , ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ಡಾ. ಸುಧಾಕರ್ ಅವರ ಹೆಸರುಗಳು ಪರಿಗಣನೆಯಲ್ಲಿದೆ. ಕೃಷ್ಣ ಬೈರೇಗೌಡ ಹಾಗೂ ಎಂ.ಕೃಷ್ಣಪ್ಪ ಅವರ ಪೈಕಿ ಒಬ್ಬರಿಗೆ ಅವಕಾಶವಿದೆ ಎನ್ನಲಾಗಿದ್ದು, ಕೃಷ್ಣ ಬೈರೇಗೌಡರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರೆ ಆಗ ಎಂ. ಕೃಷ್ಣಪ್ಪ ಅವರಿಗೆ ಸ್ಥಾನ ದೊರೆಯಬಹುದು. ಮುಸ್ಲಿಮರ ಪೈಕಿ ರೋಷನ್ ಬೇಗ್, ರಹೀಂ ಖಾನ್ ಅವರ ಹೆಸರು ಪ್ರಬಲವಾಗಿದೆ. ಅಲ್ಲದೆ, ತನ್ವೀರ್ ಸೇಠ್ ಹಾಗೂ ಯು.ಟಿ. ಖಾದರ್ ನಡುವೆ ಪೈಪೋಟಿಯಿದೆ ಎನ್ನಲಾಗಿದೆ.

ಯುವಕರ ಪೈಕಿ ಪ್ರಿಯಾಂಕ್ ಖರ್ಗೆ ಅಥವಾ ಅಜಯಸಿಂಗ್ ಅವರ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ. ಮಹಿಳೆಯರ ಪೈಕಿ ಲಕ್ಷ್ಮೀ ಹೆಬ್ಬಾಳಕರ್ ಅಥವಾ ರೂಪಾ ಶಶಿಧರ್ ಅವರಿಬ್ಬರಿಗ ಅವಕಾಶ ದೊರೆಯಬಹುದು. ಕುರುಬ ಜನಾಂಗದ ಪೈಕಿ ಸಿ.ಎಸ್. ಶಿವಳ್ಳಿ, ಎಂ.ಟಿ.ಬಿ ನಾಗರಾಜು ಅವರ ಹೆಸರು ಚಾಲ್ತಿಯಲ್ಲಿದೆ. ಪರಿಶಿಷ್ಟ ವರ್ಗದವರ ಪೈಕಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ನಾಗೇಂದ್ರ, ಆನಂದ್‌ಸಿಂಗ್ ಅವರ ಹೆಸರು ಕೇಳಿ ಬರುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಿವಶಂಕರರೆಡ್ಡಿ ಹಾಗೂ ಡಾ. ಸುಧಾಕರ್ ಅವರ ಪೈಕಿ  ಒಬ್ಬರಿಗೆ ಅವಕಾಶ ದೊರೆಯಬಹುದು. ಹಿಂದುಳಿದವರ ಪೈಕಿ ಚಾಮರಾಜನಗರ ಜಿಲ್ಲೆಯಿಂದ ನರೇಂದ್ರ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ರಘು ಆಚಾರ್ ಅವರು ಹೆಸರು ಪ್ರಬಲವಾಗಿದೆ.

Follow Us:
Download App:
  • android
  • ios