ಬೆಂಗಳೂರು (ಆ. 23): ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ. ದೇಶದಲ್ಲಿ ಘಟಾನುಘಟಿ ರಾಜಕೀಯ ಮುತ್ಸದ್ದಿಗಳು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದ ಕೆಲವೇ ಅಪರೂಪದ ಪ್ರಕರಣಗಳಲ್ಲಿ ಇದೂ ಒಂದು. ಚಿದಂಬರಂ ಮಾಡಿದ ತಪ್ಪೇನು? ಅವರ ಸಾಧನೆ, ರಾಜಕೀಯ ಜೀವನ, ಅವರ ಮೇಲಿರುವ ಹಗರಣದ ಆರೋಪಗಳು ಮುಂತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ತಮಿಳುನಾಡು ಮೂಲದ ಜನಪ್ರಿಯ ಆರ್ಥಿಕ ತಜ್ಞ

ದೇಶದ ಹಣಕಾಸು ಖಾತೆಯಂತಹ ಪ್ರಭಾವಿ ಖಾತೆಯನ್ನು ಸುದೀರ್ಘ ಕಾಲ ನಿರ್ವಹಿಸಿರುವ ಪಿ.ಚಿದಂಬರಂ ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರು. ಮತ್ತು ಜನಪ್ರಿಯ ಆರ್ಥಿಕ ತಜ್ಞ ಕೂಡ. 1945ರ ಸೆಪ್ಟೆಂಬರ್‌ 16ರಂದು ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕನದುಕಾತನ್‌ನಲ್ಲಿ ಚಿದಂಬರಂ ಜನಿಸಿದರು.

ಒಳಗಿರುವ ಚಿದಂಬರಂ ಆಸ್ತಿ ಎಷ್ಟು?: ಹೊರಗಿರುವುದು ತುಂಬಿ ತುಳುಕುವಷ್ಟು!

ತಂದೆ ಎಲ್‌ ಪಳನಿಯಪ್ಪ ಚೆಟ್ಟಿಯಾರ್‌ ಮತ್ತು ತಾಯಿ ಲಕ್ಷ್ಮೇ ಆಚಿ. ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿರುವ ಚಿದು, ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ, ಮದ್ರಾಸ್‌ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಬಳಿಕ ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ 1968ರಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿದ್ದಾರೆ. ಅದರ ಜೊತೆಗೆ ಲಯೋಲಾ ಕಾಲೇಜಿನಲ್ಲಿ ಮಾಸ್ಟರ್‌ ಡಿಗ್ರಿಯನ್ನೂ ಪಡೆದಿದ್ದಾರೆ.

‘ಡ್ರೀಮ್‌ ಬಜೆಟ್‌’ ನೀಡಿದ ಚಾಣಾಕ್ಷ ವಿತ್ತ ಮಂತ್ರಿ

ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ 1984ರ ಲೋಕಸಭೆ ಚುನಾವಣೆಗೆ ಮೊಟ್ಟಮೊದಲ ಬಾರಿ ಸ್ಪರ್ಧಿಸಿ ಚಿದಂಬರಂ ರಾಜಕೀಯ ಜೀವನವನ್ನು ಆರಂಭಿಸಿದರು. ಬಳಿಕ ತಮಿಳುನಾಡು ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಹಾಗೂ ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ‍್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜೀವ್‌ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮೊದಲ ಬಾರಿ ಸಚಿವರಾಗಿದ್ದರು. ಆಗ ಟೀ ಬೆಲೆಯನ್ನು ಕಡಿಮೆ ಮಾಡಿದ್ದರು.

ಇದಕ್ಕೆ ಟೀ ವ್ಯಾಪಾರಿಗಳನ್ನು ಮುಗಿಸಲು ಹೊರಟಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಪ್ರತಿರೋಧ ವ್ಯಕ್ತಪಡಿಸಿತ್ತು. ಅದೇ ವರ್ಷ ಗೃಹ ಸಚಿವಾಲಯದ ರಾಜ್ಯ ದರ್ಜೆ ಸಚಿವರಾಗಿ ನೇಮಕಗೊಂಡಿದ್ದರು. ಅದಾದ ಬಳಿಕ ಪಿ.ವಿ. ನರಸಿಂಹರಾವ್‌ ಸರ್ಕಾರದಲ್ಲೂ 1 ವರ್ಷ ರಾಜ್ಯ ದರ್ಜೆಯ ವಾಣಿಜ್ಯ ಸಚಿವರಾಗಿದ್ದರು. 1995ರಲ್ಲಿ ಮತ್ತೊಮ್ಮೆ ಇದೇ ಇಲಾಖೆಗೆ ಪುನರಾಯ್ಕೆಯಾದರು. 1996ರಲ್ಲಿ ಚಿದಂಬರಂ ಕಾಂಗ್ರೆಸ್‌ ತೊರೆದು ತಮಿಳುನಾಡು ಸ್ಟೇಟ್‌ ಯೂನಿಟ್‌ ಕಾಂಗ್ರೆಸ್‌ ಪಕ್ಷ (ತಮಿಳ್‌ ಮನಿಲಾ ಕಾಂಗ್ರೆಸ್‌) (ಟಿಎಂಸಿ) ಸೇರಿದರು.

ಕಾನೂನು ಆದಾಗ ಗರಂ: ಆ.26ರ ವರೆಗೆ ಸಿಬಿಐ ಕಸ್ಟಡಿಗೆ ಚಿದಂಬರಂ!

ಅದೇ ವರ್ಷ ಟಿಎಂಸಿ ಮತ್ತಿತರ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಒಗ್ಗೂಡಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದ್ದವು. ಆಗ ಚಿದು ವಿತ್ತ ಸಚಿವರಾಗಿದ್ದರು. 1997ರಲ್ಲಿ ಚಿದಂಬರಂ ಮಂಡಿಸಿದ್ದ ಬಜೆಟ್‌ ಈಗಲೂ ‘ಡ್ರೀಮ್‌ ಬಜೆಟ್‌’ ಎಂತಲೇ ಹೆಸರಾಗಿದೆ. ಆದರೆ ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಬಿದ್ದುಹೋಯಿತು. 2004ರಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಮತ್ತೊಮ್ಮೆ ಹಣಕಾಸು ಸಚಿವರಾದ ಚಿದಂಬರಂ, 2008ರಲ್ಲಿ ಕೇಂದ್ರ ಗೃಹ ಸಚಿವರಾದರು. 2012ರಲ್ಲಿ ಮತ್ತೊಮ್ಮೆ ವಿತ್ತ ಸಚಿವರಾಗಿ ನೇಮಕಗೊಂಡಿದ್ದರು.

ಚಿದಂಬರಂ ಮಾಡಿದ ತಪ್ಪೇನು?

1. ಐಎನ್‌ಎಕ್ಸ್‌ ಮೀಡಿಯಾ ಹಗರಣ

2. ಏರ್‌ಸೆಲ್‌ ಮ್ಯಾಕ್ಸಿಸ್‌ ಡೀಲ್‌

ಚಿದಂಬರಂ ಎದುರಿಸುತ್ತಿರುವ ಇನ್ನೊಂದು ದೊಡ್ಡ ಹಗರಣ ಏರ್‌ಸೆಲ್‌-ಮ್ಯಾಕ್ಸಿಸ್‌ ಹಗರಣ. ಇದು 3500 ಕೋಟಿ ರು. ಹಗರಣ. ಮ್ಯಾಕ್ಸಿಸ್‌ ಎನ್ನುವುದು ಮಲೇಷಿಯಾ ಮೂಲದ ಕಂಪನಿ. ಉದ್ಯಮಿ ಟಿ.ಆನಂದ ಕೃಷ್ಣ ಇದರ ಮಾಲಿಕರು. ಸೆಲ್‌ ಟೆಲಿಕಾಂ ಕಂಪನಿಯ ಮೊದಲ ಮಾಲಿಕ ಸಿ.ಶಿವಶಂಕರನ್‌ ತಮಿಳುನಾಡು ಮೂಲದ ಅನಿವಾಸಿ ಭಾರತೀಯ. 2006ರಲ್ಲಿ ಮ್ಯಾಕ್ಸಿಸ್‌ ಕಂಪನಿಯು ಏರ್‌ಸೆಲ್‌ನ 74% ಷೇರನ್ನು ಖರೀದಿಸುತ್ತದೆ.

ಉಳಿದ ಷೇರನ್ನು ಮತ್ತೊಂದು ಭಾರತೀಯ ಕಂಪನಿ ಖರೀದಿಸುತ್ತದೆ. ಆದರೆ 2ಜಿ ಸ್ಪೆಕ್ಟ್ರಂ ಹಗರಣ ಬಯಲಾದ ನಂತರ ಇದು ವಿವಾದಕ್ಕೀಡಾಗುತ್ತದೆ. ಪ್ರಕರಣದ ತನಿಖೆ ಸಿಬಿಐಗೆ ಹೋಗುತ್ತದೆ. ಎ.ರಾಜಾಗಿಂತ ಮೊದಲು ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್‌ ಏರ್‌ಸೆಲ್‌ ಷೇರನ್ನು ಮಾರಲು ಬಲವಂತ ಮಾಡಿದ್ದರು ಎಂದು ಶಿವಶಂಕರನ್‌ ಆರೋಪಿಸುತ್ತಾರೆ. ನಂತರ ಮ್ಯಾಕ್ಸಿಸ್‌ಗೆ ಏರ್‌ಸೆಲ್‌ನ ಷೇರು ಮಾರಾಟ ಮಾಡಲು ಸಹಕರಿಸಿದ್ದಾರೆಂದು ಕಳಾನಿಧಿ ಮಾರನ್‌, ಮ್ಯಾಕ್ಸಿಸ್‌ನ ಆನಂದ್‌ ಕೃಷ್ಣನ್‌ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತದೆ.

ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!

ಇದಕ್ಕೆ ಪ್ರತಿಯಾಗಿ ದಯಾನಿಧಿ ಮಾರನ್‌ 600 ಕೋಟಿ ಪಡೆದಿದ್ದಾರೆ ಎಂದು ಸಿಬಿಐ ಪ್ರತಿಪಾದಿಸಿತ್ತು. ಆದರೆ ದೆಹಲಿ ಹೈಕೋರ್ಟ್‌ ಈ ಆರೋಪವನ್ನು ತಿರಸ್ಕರಿಸಿತ್ತು. ಇದಾದ ಬಳಿಕ ಸುಬ್ರಮಣಿಯನ್‌ ಸ್ವಾಮಿ ಈ ಪ್ರಕರಣದಲ್ಲಿ ಚಿದಂಬರಂ ಪಾತ್ರ ಇದೆ ಎಂದು ಆರೋಪ ಮಾಡಿ ತನಿಖೆಗೆ ಪಟ್ಟುಹಿಡಿದ್ದರು. ಅದರಂತೆ ಚಿದಂಬರಂ ವಿರುದ್ಧ ಸಿಬಿಐ ಆರೋಪಪಟ್ಟಿಸಲ್ಲಿಸಿದೆ.

3. ಏರ್‌ ಇಂಡಿಯಾ ವಿಮಾನ ಖರೀದಿ

ಏರ್‌ ಇಂಡಿಯಾಕ್ಕೆ ವಿಮಾನಗಳ ಖರೀದಿಯಲ್ಲೂ ಚಿದಂಬರಂ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ. ಇದರ ಸಂಬಂಧ ಜಾರಿ ನಿರ್ದೇಶನಾಲಯ ಚಿದಂಬರಂ ಅವರಿಗೆ ಈಗಾಗಲೇ ಸಮನ್ಸ್‌ ಜಾರಿ ಮಾಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದಾಗ 111 ವಿಮಾನಗಳ ಖರೀದಿಯಲ್ಲಿ ಚಿದು ಅವ್ಯವಹಾರ ಮಾಡಿದ್ದಾರೆ ಎಂಬುದು ಆರೋಪ.

4. ಅಕ್ರಮ ಆಸ್ತಿ ಗಳಿಕೆ

ಐಎನ್‌ಎಕ್ಸ್‌ ಮೀಡಿಯಾ ಮತ್ತು ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣಗಳಲ್ಲಿ ಮಾತ್ರವಲ್ಲದೆ, ಇತರೆ ನಾಲ್ಕು ಕಂಪನಿಗಳಿಗೆ ವಿದೇಶದಿಂದ ಹೂಡಿಕೆ ಪಡೆಯಲು ಅಕ್ರಮವಾಗಿ ‘ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ’ಯಿಂದ ಅನುಮೋದನೆ ನೀಡಿದ ಆರೋಪವೂ ಚಿದಂಬರಂ ವಿರುದ್ಧ ಕೇಳಿಬಂದಿದೆ. ಡಿಯಾಜಿಯೊ ಸ್ಕಾಟ್ಲೆಂಡ್‌ ಲಿಮಿಟೆಡ್‌, ಕಟಾರಾ ಹೋಲ್ಡಿಂಗ್ಸ್‌ , ಎಸ್ಸಾರ್‌ ಸ್ಟೀಲ್‌ ಲಿಮಿಟೆಡ್‌, ಎಲ್‌ಫೋಜ್‌ರ್‍ ಲಿಮಿಟೆಡ್‌ ಸಂಸ್ಥೆಗಳಿಂದಲೂ ಚಿದಂಬರಂ ಅವರು ಹಲವು ಕೋಟಿಗಳ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಈ ಹಣವನ್ನು ಖೊಟ್ಟಿಕಂಪನಿಗಳಲ್ಲಿ ತೊಡಗಿಸಿದ್ದಾರೆ ಎಂದು ಇ.ಡಿ. ಮೂಲಗಳು ಹೇಳಿವೆ.

5. ಕಪ್ಪು ಹಣ ದಂಧೆ

ಚಿದಂಬರಂ ಮತ್ತು ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಚಿದಂಬರಂ ಮತ್ತು ಸೊಸೆ ಶ್ರೀನಿಧಿ ಕಾರ್ತಿ ಅವರು ಕಪ್ಪು ಹಣ ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ ತಮಿಳುನಾಡಿನಲ್ಲಿ ಹೋಟೆಲ್‌ ಖರೀದಿಗೆ ಸಂಬಂಧಿಸಿದಂತೆ ಚಿದಬಂಬರಂ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಮೇಲೆ ಪ್ರಾಥಮಿಕ ತನಿಖೆಯನ್ನು ಸಿಬಿಐ ಆರಂಭಿಸಿದೆ. ಇಶ್ರತ್‌ ಜಹಾನ್‌ ಪ್ರಕರಣದಲ್ಲಿ ದಾಖಲೆ ತಿದ್ದಿದ ಆರೋಪವೂ ಚಿದಂಬರಂ ಮೇಲಿದೆ.

ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಪತ್ನಿ

ಪಶ್ಚಿಮ ಬಂಗಾಳ ಸೇರಿದಂತೆ 5 ರಾಜ್ಯಗಳಲ್ಲಿ ವ್ಯಾಪಿಸಿರುವ ಬಹುಕೋಟಿ ಹಗರಣ ಇದು. ಆಪಾದಿತರ ಪರವಾಗಿ ವಾದ ಮಂಡಿಸಲು 1.4 ಕೋಟಿ ರು. ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಪತ್ನಿ, ಖ್ಯಾತ ಕಾರ್ಪೊರೇಟ್‌ ವಕೀಲೆಯಾಗಿರುವ ನಳಿನಿ ಚಿದಂಬರಂ ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿದೆ.

ಕೊಲ್ಕತ್ತಾ ಹೈಕೋರ್ಟ್‌ ನಳಿನಿಗೆ ಸದ್ಯ ಮಧ್ಯಂತರ ಜಾಮೀನು ನೀಡಿದೆ. ಶಾರದಾ ಗ್ರೂಪ್‌ನ ಮಾಲಿಕ ಸುದೀಪ್ತ ಸೇನ್‌ ಜತೆಗೂಡಿ ಇವರು ವಂಚನೆಯ ಸೂತ್ರಧಾರಿಗಳಾಗಿದ್ದಾರೆ ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಹೇಳಿದೆ.

ಜೈಲಿಗೆ ಹೋಗಿ ಬಂದಿದ್ದ ಪುತ್ರ ಕಾರ್ತಿ

ಚಿದಂಬರಂ ಅವರ ಮೇಲಿರುವ ಎಲ್ಲಾ ಪ್ರಕರಣಗಳಲ್ಲೂ ಅವರ ಪುತ್ರ, ಸಂಸದ ಕಾರ್ತಿ ಹೆಸರೂ ಕೇಳಿಬಂದಿದೆ. ಐಎನ್‌ಎಕ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್‌ ಮುಖರ್ಜಿ, ಇಂದ್ರಾಣಿ ಮುಖರ್ಜಿ ಒಡೆತನದ ಐಎನ್‌ಎಕ್ಸ್‌ ಮೀಡಿಯಾ ಕಂಪನಿ ವಿದೇಶದಿಂದ 305 ಕೋಟಿ ರು. ಬಂಡವಾಳ ಸ್ವೀಕರಿಸಲು ಹಣಕಾಸು ಸಚಿವ ಚಿದಂಬರಂ ಅವರ ವ್ಯಾಪ್ತಿಯಲ್ಲಿ ಬರುವ ‘ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿ’ಯಿಂದ ಅನುಮತಿ ಕೋರಿತ್ತು.

ಈ ಕೋರಿಕೆಯನ್ನು ಸರ್ಕಾರ ಮಾನ್ಯ ಮಾಡಿತ್ತು. ಆದರೆ ಹೀಗೆ ಅನುಮತಿ ಪಡೆಯುವುದಕ್ಕೆ ಸಂಸ್ಥೆಯು ಚಿದಂಬರಂ ಅವರ ಪುತ್ರ ಕಾರ್ತಿಗೆ ಲಂಚ ನೀಡಿತ್ತು ಎಂಬ ಆರೋಪ ಕೇಳಿಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ 23 ದಿನ ಕಾರ್ತಿ ಚಿದಂಬರಂ ಕೂಡ ಜೈಲುವಾಸ ಅನುಭವಿಸಿದ್ದರು. ಇನ್ನು ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣದಲ್ಲೂ ಚಿದು ಪುತ್ರನ ಹೆಸರಿದೆ.

ಎಡೆಬಿಡದೆ ಕಾಡುತ್ತಿರುವ ಸುಬ್ರಮಣಿಯನ್‌ ಸ್ವಾಮಿ!

3500 ಕೋಟಿ ರು. ಮೊತ್ತದ ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವ ಸ್ಥಾನಕ್ಕೆ ದಯಾನಿಧಿ ಮಾರನ್‌ ರಾಜೀನಾಮೆ ಸಲ್ಲಿಸಿದ್ದರು. ನಂತರ ಅವರ ಮೇಲಿನ ಆರೋಪವನ್ನು ದೆಹಲಿ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ ಪ್ರಕರಣ ಇಷ್ಟಕ್ಕೇ ಮುಕ್ತಾಯವಾಗಲಿಲ್ಲ.

ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಏರ್‌ಸೆಲ್‌-ಮ್ಯಾಕ್ಸಿಸ್‌ ವಿವಾದಕ್ಕೆ ಸಂಬಂಧಪಟ್ಟಂತೆ ಮತ್ತೆ ಕೋರ್ಟ್‌ಗೆ ಹೋಗಿದ್ದರು. ಅಲ್ಲಿ, ಏರ್‌ಸೆಲ್‌-ಮ್ಯಾಕ್ಸಿಸ್‌ ಷೇರು ಖರೀದಿ ವ್ಯವಹಾರ ಹಾಗೂ ಚಿದಂಬರಂ ಮಾಲಿಕತ್ವದ ಕಂಪನಿ ನಡುವೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಅವರ ಪ್ರಕಾರ ಮ್ಯಾಕ್ಸಿಸ್‌ ಸಂಸ್ಥೆಯ ನಿಯಂತ್ರಣ ಇದ್ದಿದ್ದು ಕಾರ್ತಿ ಚಿದಂಬರಂ ಕೈಯಲ್ಲಿ. 2006ರಲ್ಲಿ ಈ ಕಂಪನಿಯ 5% ಷೇರು ಅವರಿಗೆ ಸಿಕ್ಕಿತ್ತು.

ಪುತ್ರನಿಗೆ ಪಾಲು ಸಿಗುವವರೆಗೂ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ ಅನುಮತಿ ನಿರಾಕರಿಸಲು ಚಿದಂಬರಂ ಪ್ರಧಾನ ಪಾತ್ರ ವಹಿಸಿದ್ದರು ಎಂದು ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿದ್ದರು. ಈ ಪ್ರಕರಣದಲ್ಲೀಗ ಸಿಬಿಐ ಆರೋಪಪಟ್ಟಿದಾಖಲಿಸಿದೆ. ಚಿದಂಬರಂ ಭ್ರಷ್ಟಾಚಾರ ಎಸಗಿದ್ದಾರೆಂದು ನಾನಾ ಪ್ರಕರಣಗಳಲ್ಲಿ ಸುಬ್ರಮಣಿಯನ್‌ ಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿ ಹೋರಾಟ ನಡೆಸುತ್ತಿದ್ದಾರೆ.