ರೈತರಿಗೆ ನೀಡುವ ಪರಿಹಾರದ ನೆರವನ್ನು ಬ್ಯಾಂಕ್‌ಗಳು ಸಾಲಕ್ಕೆ ಜಮೆ ಮಾಡಿಕೊಳ್ಳುವ ಉದ್ಧಟತವನ್ನು ಬ್ಯಾಂಕ್‌ಗಳು ಅನೇಕ ಕಡೆ ಮಾಡುತ್ತಿದೆ. ಇದನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಬ್ಯಾಂಕರ್ಸ್‌ ಕಮಿಟಿಯಲ್ಲೂ ಚರ್ಚೆ ನಡೆಸಲಾಗಿದೆ. ಆದರೂ ಬ್ಯಾಂಕ್‌ಗಳು ತಮಗೆ ಇಚ್ಛೆ ಬಂದಂತೆ ಮಾಡುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು(ಏ.17: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಮತ್ತು ಇತರ ಸಬ್ಸಿಡಿ ಹಣವನ್ನು ಬ್ಯಾಂಕ್ಗಳು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಭಾನುವಾರ ‘ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ' ಆಯೋಜಿಸಿದ್ದ ‘ಹಲೋ ಮಿನಿಸ್ಟರ್' ಎಂಬ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ, ‘ಹುಬ್ಬಳ್ಳಿ ಸೇರಿ ದಂತೆ ಅನೇಕ ಕಡೆ ರೈತರಿಗೆ ಸಿಗುವ ಬೆಳೆ ಪರಿಹಾರ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಂಡಿರುವ ಪ್ರಸಂಗ ನಡೆದಿದೆ. ಈ ಬಗ್ಗೆ ರೈತರಿಗೆ ನೋಟಿಸ್ ನೀಡಲಾಗಿದೆ' ಎಂದು ದೂರಿದರು.
ಮೈಸೂರಿನ ಬಸವಣ್ಣ ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇನ್ನೊಂದು ವಾರದಲ್ಲಿ 10 ಲಕ್ಷ ರೈತರಿಗೆ ಇನ್ಪುಟ್ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬೆಳೆ ಪರಿಹಾರ ಅನುಭವಿಸಿದ 10 ಲಕ್ಷ ರೈತರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೆ 10 ಲಕ್ಷ ರೈತರಿಗೆ ಪರಿಹಾರ ನೀಡಲಾಗುತ್ತದೆ. ಸರ್ಕಾರ ನೀಡುವ ನೆರವು ನೇರವಾಗಿ ರೈತರಿಗೆ ತಲುಪಿಸುವಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲಾಗುತ್ತಿದೆ. ಕೆಳ ಮಟ್ಟದ ಅಧಿಕಾರಿಗಳಿಂದ ಸಮಸ್ಯೆ ಆಗುತ್ತಿರುವುದನ್ನು ತಪ್ಪಿಸಲು ಹೊಸ ಮೊಬೈಲ್ ತಂತ್ರಾಂಶ ರೂಪಿಸಲಾಗಿದೆ. ಇದರಲ್ಲಿ ರೈತರ ಜಮೀನು ಮತ್ತು ಬೆಳೆ ನಷ್ಟದ ವಿವರ ಸೇರಿದಂತೆ ಶಾಶ್ವತ ಮಾಹಿತಿ ಇರುವಂತೆ ನೋಡಿಕೊಳ್ಳಲಾಗುವುದು. ಆನಂತರ ಪರಿಹಾರ, ನೆರವು ನೀಡಬೇಕಾದಾಗ ಅದನ್ನು ಬಳಸಿಕೊಂಡು ತಕ್ಷಣ ಹಣ ಹೋಗುವಂತೆ ಮಾಡಲಾಗುವುದು ಎಂದರು.
‘ಸಾಲ ಮನ್ನಾ ಬಗ್ಗೆ ರೈತರು ಕಾಯುತ್ತಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ' ಎಂದು ಚಿತ್ರದುರ್ಗದ ಮಂಜುನಾಥ ಕೇಳಿದರು. ‘ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ' ಎಂದು ಹೇಳಿದ ಕೃಷ್ಣಭೈರೇಗೌಡ, ಮುಖ್ಯಮಂತ್ರಿಗಳು ಈ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆ ಪ್ರಕಾರ ರಾಜ್ಯಕ್ಕಿಂತ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲ ಎಂದರು.
ಫೇಸ್ ಬುಕ್ನಲ್ಲಿ ಮೈಸೂರು ಮಂಜು ಎಂಬುವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೃಷಿ ಇಲಾಖೆಯಲ್ಲಿ 607 ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಆದರೆ ಕೃಷಿ ಎಂಜಿನಿಯರ್ ಕಾಲೇಜು ನಡೆಸುವ ಪ್ರೊಫೆಸರ್ಗಳಿರುವ ಸಮಿತಿ ರಚಿಸಲಾಗಿದೆ. ಸಮಿತಿ ಶಿಫಾರಸು ನಂತರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಲಬುರಗಿಯ ದಯಾನಂದ ಪಾಟೀಲ್, ತೊಗರಿ ಖರೀದಿ ಕೇಂದ್ರವನ್ನು ಏಕಾಏಕಿ ಬಂದ್ ಮಾಡಲಾಗಿದೆ ಎಂದು ದೂರಿದರು. ಇದನ್ನು ಒಪ್ಪಿಕೊಂಡ ಸಚಿವರು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
