ಬೆಂಗಳೂರು [ಜೂ.27] :  ರಾಜ್ಯದಲ್ಲಿ ವರುಣ ಕೈ ಕಟ್ಟಿದ್ದು ಕಾವೇರಿ ಕಣಿವೆ ಭಾಗದಲ್ಲಿ ಶೇ.50 ರಷ್ಟುಮಳೆ ಕೊರತೆ ಉಂಟಾಗಿದೆ. ಹೀಗಾಗಿ ಈವರೆಗೂ ಜೂನ್‌ನಲ್ಲಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಾಗಿದ್ದ 9.19 ಟಿಎಂಸಿ ನೀರು ಬಿಡುಗಡೆ ಮಾಡಲೂ ರಾಜ್ಯಕ್ಕೆ ಸಾಧ್ಯವಾಗಿಲ್ಲ. ಮುಂದಿನ ಒಂದು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಂಗಳೂರು ನಗರ ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ನಾಗರೀಕರು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.

ಜೂನ್‌ ತಿಂಗಳು ಕಳೆಯುತ್ತಾ ಬಂದಿದ್ದರೂ ಈ ತಿಂಗಳು ಪೂರ್ತಿ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಜಲಾಶಯಗಳ ಒಡಲು ಬರಿದಾಗಿದ್ದು, ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದ್ದ ನೀರನ್ನೂ ಬಿಡುಗಡೆ ಮಾಡಿಲ್ಲ. ಕಾವೇರಿಯ ನಾಲ್ಕೂ ಜಲಾಶಯಗಳಲ್ಲಿ ಕಳೆದ ವರ್ಷ ಜೂ.26ರ ವೇಳೆಗೆ 59 ಟಿಎಂಸಿಯಷ್ಟಿದ್ದ ನೀರಿನ ಸಂಗ್ರಹ ಪ್ರಸ್ತುತ 13.53 ಟಿಎಂಸಿಯಷ್ಟುಮಾತ್ರ ಇದೆ. ಹೀಗಾಗಿ ಒಂದು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಂಗಳೂರು ಜನರಿಗೆ ಜೀವಜಲದ ಕೊರತೆ ಖಚಿತ.

ಏಕೆಂದರೆ, ಪ್ರತಿ ತಿಂಗಳು ಬೆಂಗಳೂರಿಗೆ 1.5 ಟಿಎಂಸಿ ನೀರು ಬೇಕು. ಜೊತೆಗೆ ಹಾಸನ, ಮೈಸೂರು, ಮಂಡ್ಯ ಸೇರಿದಂತೆ ಕುಡಿಯುವ ಬಳಕೆಗೆ ಕಾವೇರಿ ನೀರು ಅವಲಂಬಿಸಿರುವವರಿಗೆ ಒಟ್ಟು 2.25 ಟಿಎಂಸಿ ನೀರು ಬೇಕಾಗುತ್ತದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ರಾಜ್ಯವು ಕಾವೇರಿಯ 9.19 ಟಿಎಂಸಿ ನೀರನ್ನು ಜೂನ್‌ ತಿಂಗಳಲ್ಲಿ ಹಾಗೂ 31.24 ಟಿಎಂಸಿ ನೀರನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಮಳೆ ಪ್ರಮಾಣ ಕ್ಷೀಣಿಸಿ ಕಾವೇರಿಯ ನಾಲ್ಕೂ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕುಸಿದಿದೆ. ಒಳ ಹರಿವಿನ ಪ್ರಮಾಣವೂ ತೀರಾ ಕಡಿಮೆ ಇದೆ. ಈ ಅಂಶಗಳನ್ನು ಪರಿಗಣಿಸಿ ಈವರೆಗೆ ರಾಜ್ಯವು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 1.72 ಟಿಎಂಸಿ ನೀರು ಮಾತ್ರ ಬಿಡುಗಡೆ ಮಾಡಿದ್ದರೂ ವಿನಾಯಿತಿ ನೀಡಿದೆ.

ಅಲ್ಲದೆ, ಮಳೆಯ ಆಧಾರದ ಮೇಲೆ ಜೂನ್‌ ತಿಂಗಳಲ್ಲಿ 9.19 ಟಿಎಂಸಿ ಹಾಗೂ ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಪುನರುಚ್ಛರಿಸಿದೆ. ಇದರಿಂದ ರಾಜ್ಯವು ಪ್ರಸಕ್ತ ತಿಂಗಳಲ್ಲಿ ಬಾಕಿ ಇರುವ 4 ದಿನದಲ್ಲಿ ತಮಿಳುನಾಡಿಗೆ 7.47 ಟಿಎಂಸಿ ನೀರು ಹರಿಸಬೇಕಾಗಿದೆ. ಇನ್ನು ನಾಲ್ಕು ದಿನದಲ್ಲಿ ಮಳೆ ಬಾರದಿದ್ದರೆ ಮುಂದಿನ ತಿಂಗಳು 38.71 ಟಿಎಂಸಿಯಷ್ಟುನೀರನ್ನು ಬಿಡುಗಡೆ ಮಾಡಬೇಕು.

ಜುಲೈ ತಿಂಗಳಲ್ಲಿ ಸಾಧಾರಣ ಮಳೆಯಾದರೆ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿರುವ ನೀರು ಬಿಡುಗಡೆ ಮಾಡಿ, ರಾಜ್ಯದ ಕುಡಿಯುವ ನೀರಿನ ಅಗತ್ಯತೆ ಪೂರೈಸುವುದು ಕಷ್ಟಸಾಧ್ಯ. ಹೀಗಾಗಿ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾವೇರಿ ನೀರು ಕುಡಿಯುತ್ತಿರುವವರು ಬಚಾವಾಗಬಲ್ಲರು ಎಂದು ನೀರಾವರಿ ತಜ್ಞ ಕ್ಯಾಪ್ಟನ್‌ ರಾಜಾರಾಂ ಹೇಳುತ್ತಾರೆ.

ಜಲಾಶಯಗಳ ಸಂಗ್ರಹ 13.53 ಟಿಎಂಸಿ:

ಕಾವೇರಿ ವ್ಯಾಪ್ತಿಗೆ ಬರುವ ಕೆಆರ್‌ಎಸ್‌, ಹಾರಂಗಿ, ಕಬಿನಿ, ಹೇಮಾವತಿ ನೀರಿನ ಮಟ್ಟಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜತೆಗೆ ಒಳ ಹರಿವಿನ ಪ್ರಮಾಣವೂ ತೀರಾ ಕಡಿಮೆ ಇರುವುದರಿಂದ ತೀವ್ರ ಆತಂಕ ಎದುರಾಗಿದೆ. ಜೂನ್‌ 1ರಿಂದ 26ರವರೆಗೆ ಹಾರಂಗಿಯಲ್ಲಿ ಸರಾಸರಿ 351 ಎಂಸಿಎಫ್‌ಟಿ (ಮಿಲಿಯನ್‌ ಕ್ಯೂಬಿಕ್‌ ಫೀಟ್‌) ಒಳ ಹರಿವು ಹಾಗೂ 167 ಎಂಸಿಎಫ್‌ಟಿ ಹೊರ ಹರಿವು ದಾಖಲಾಗಿದೆ. ಹೇಮಾವತಿಯಲ್ಲಿ 518 ಒಳ ಹರಿವು, 1,673 ಹೊರ ಹರಿವು, ಕೆಆರ್‌ಎಸ್‌ನಲ್ಲಿ 341 ಒಳ ಹರಿವು, 700 ಹೊರ ಹರಿವು, ಕಬಿನಿಯಲ್ಲಿ 1,364 ಒಳ ಹರಿವು, 1651 ಹೊರ ಹರಿವು ದಾಖಲಾಗಿದೆ. ಜತೆಗೆ ನೀರಿನ ಸಂಗ್ರಹವೂ ಕುಸಿದಿದ್ದು, ಕಳೆದ ವರ್ಷ ಈ ವೇಳೆಗೆ 22.99 ಟಿಎಂಸಿಯಷ್ಟಿದ್ದ ನೀರಿನ ಪ್ರಮಾಣ ಕೇವಲ 6.27 ಟಿಎಂಸಿಗೆ ಕುಸಿದಿದೆ. ಮತ್ತೊಂದೆಡೆ ಮಂಡ್ಯದಲ್ಲಿ ರೈತರು ನೀರಾವರಿಗೆ ನೀರು ಬಿಡುಗಡೆ ಮಾಡಲು ಹೋರಾಟ ನಡೆಸಿರುವುದು ಸರ್ಕಾರಕ್ಕೆ ಮತ್ತೊಂದು ತಲೆ ನೋವಾಗಿ ಪರಿಣಮಿಸಿದೆ.

ಉಳಿದ ಜಲಾಶಯಗಳೂ ಖಾಲಿ:

ಉಳಿದಂತೆ ಲಿಂಗನಮಕ್ಕಿ, ಸೂಪಾ, ವರಾಹಿ, ಭದ್ರಾ, ತುಂಗಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಪರಿಸ್ಥಿತಿಯೂ ಇದೇ ರೀತಿ ಇದೆ. ಕಳೆದ ವರ್ಷದ ಜೂ.26 ರ ವೇಳೆಗೆ 35.41 ಟಿಎಂಸಿಯಷ್ಟುನೀರಿನ ಸಂಗ್ರಹಣೆಯಿದ್ದ ಜಲಾಶಯದಲ್ಲಿ 13.35 ಟಿಎಂಸಿಯಷ್ಟುನೀರು ಮಾತ್ರ ಲಭ್ಯವಿದೆ.

ಕಾವೇರಿ ಜಲಾಶಯಗಳ ಮಟ್ಟ: (ಜೂ.26ರ ವೇಳೆಗೆ)

ಜಲಾಶಯ    ಜೂ.26ರ ಲಭ್ಯ ನೀರಿನ ಮಟ್ಟ    ಜೂ.26, 2018ರ ಸಂಗ್ರಹ

ಕೆಆರ್‌ಎಸ್‌    6.27 ಟಿಎಂಸಿ    22.99 ಟಿಎಂಸಿ

ಕಬಿನಿ    2.49 ಟಿಎಂಸಿ    13.96 ಟಿಎಂಸಿ

ಹೇಮಾವತಿ    3.54 ಟಿಎಂಸಿ    20.26 ಟಿಎಂಸಿ

ಹಾರಂಗಿ    1.23 ಟಿಎಂಸಿ    3.58 ಟಿಎಂಸಿ