ಭಾರಿ ಮಳೆಯಿಂದ ರಾಜ್ಯ ತತ್ತರ : ಎಚ್ಚರ

First Published 14, Jul 2018, 7:39 AM IST
Heavy Rains Forcast In Karnataka
Highlights

 ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ  ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆ ಪ್ರಭಾವ ಶುಕ್ರವಾರವೂ ಮುಂದುವರಿದಿರುವುದರಿಂದ ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. 

ಬೆಂಗಳೂರು :  ಕಳೆದ ಕೆಲವು ದಿನಗಳಿಂದ ರಾಜ್ಯದ ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆ ಪ್ರಭಾವ ಶುಕ್ರವಾರವೂ ಮುಂದುವರಿದಿರುವುದರಿಂದ ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ ಕೆಆರ್‌ಎಸ್‌ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು ಇನ್ನು ಕೇವಲ ಮೂರು ಅಡಿಗಳಷ್ಟೇ ಬಾಕಿ ಇದೆ. ಇದೇ ವೇಳೆ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಟ್ಟುಬಿಟ್ಟು ಮಳೆಯಾಗುತ್ತಿದ್ದು, ಕೆಲವೆಡೆ ಕಡತ್ಕೊರೆತ ಆರಂಭಗೊಂಡಿದೆ.

ಖಾನಾಪುರ ತಾಲೂಕಿನ ಅರಣ್ಯಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು ತುಂಬಿ ಹರಿಯುತ್ತಿವೆ. ಗುರುವಾರದವರೆಗೆ ಮಲಪ್ರಭಾ ನದಿಯಲ್ಲಿ ಭಾಗಶಃ ಮುಳುಗಡೆಯಾಗಿದ್ದ ತಾಲೂಕಿನ ಇಟಗಿಯ ಮರುಳಶಂಕರ ಮತ್ತು ಹಬ್ಬನಹಟ್ಟಿಯ ಆಂಜನೇಯ ದೇಗುಲಗಳು ಶುಕ್ರವಾರ ಸಂಪೂರ್ಣ ಜಲಾವೃತಗೊಂಡಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಚಿಕ್ಕೋಡಿ ತಾಲೂಕಿನಲ್ಲಿ ಮುಳುಗಡೆಯಾಗಿರುವ ಆರು ಸೇತುವೆಗಳು ಇನ್ನೂ ಜಲಾವೃತವಾಗಿವೆ. ದೂಧಗಂಗಾ, ವೇದಗಂಗಾ ಮತ್ತು ಕೃಷ್ಣಾ ನದಿಗಳ ನೀರು ಏರಿಕೆಯಾಗುತ್ತಿದ್ದು, ಪಕ್ಕದ ಹೊಲಗದ್ದೆಗಳಲ್ಲಿ ನೀರು ನುಗ್ಗಲಾರಂಭಿಸಿದೆ.

ಅಪಾಯದ ಸ್ಥಿತಿಯಲ್ಲಿ ನದಿಗಳು:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ಭಾಗಗಳಲ್ಲಿ ಮಳೆ ಬಿಟ್ಟೂಬಿಟ್ಟೂಸುರಿಯುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳಾದ ತುಂಗಭದ್ರಾ, ಶರಾವತಿ ನದಿಗಳು ಅಪಾಯದ ಮಟ್ಟದಲ್ಲಿಯೇ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಮಳೆ ಮುಂದುವರೆದಿದ್ದು ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತ್ತಗೊಂಡಿದ್ದು ಲಕ್ಷಾಂತರ ಮೌಲ್ಯದ ನಾಟಿ ಸಸಿ ನೀರುಪಾಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಹಲವೆಡೆ ಹಾಗೂ ಬಿಸ್ಲೆಘಾಟ್‌ನ ಕೆಲವೆಡೆ ಭೂಕುಸಿತ ಸಂಭವಿಸಿದೆ. ತಾಲೂಕಿನ ಅತ್ತಿಹಳ್ಳಿ ಗ್ರಾಮ ಸಮೀಪದ ಹೊಳೆಗೆ ಅಡ್ಡಲಾಗಿ ಗುಡ್ಡ ಕುಸಿದ ಪರಿಣಾಮ ಹೊಳೆಯ ಹರಿವಿನ ದಿಕ್ಕೇ ಬದಲಾಗಿದೆ.

ರಾಫ್ಟಿಂಗ್‌ ದೋಣಿ ಬಳಕೆ:  ಕೊಡಗು ಜಿಲ್ಲೆಯ ನಾಪೋಕ್ಲು, ಸಂಪಾಜೆ, ವಿರಾಜಪೇಟೆ, ಸೋಮವಾರಪೇಟೆ ತಾಲೂಕಿನ ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಭಾಗಮಂಡಲದಲ್ಲಿ ಉಂಟಾಗಿರುವ ಪ್ರವಾಹ ಇನ್ನೂ ಇಳಿಮುಖವಾಗಿಲ್ಲ ಹೀಗಾಗಿ. ಸಾರ್ವಜನಿಕರನ್ನು ಅತ್ತಿಂದಿತ್ತ ಸಾಗಿಸಲು ಅಗ್ನಿಶಾಮಕ ಇಲಾಖೆಯ ರಾರ‍ಯಫ್ಟಿಂಗ್‌ ದೋಣಿ ಬಳಸಲಾಗುತ್ತಿದೆ. ರಾಜಾಸೀಟ್‌ ಕೆಳಭಾಗದಲ್ಲಿರುವ ಮಡಿಕೇರಿ- ಮಂಗಳೂರು ಹೆದ್ದಾರಿಯಲ್ಲಿ ಬಿರುಕು ಬಿಟ್ಟಿದ್ದು ಕುಸಿಯುವ ಆತಂಕ ಎದುರಾಗಿದೆ.

ದ.ಕ.ದಲ್ಲಿ ಕಡಲ್ಕೊರೆತ: ಕರಾವಳಿ ಭಾಗದ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಬಿಟ್ಟುಬಿಟ್ಟು ಮಳೆ ಸುರಿದಿದ್ದು ಉಳ್ಳಾಲ, ಉಚ್ಚಿಲ ಹಾಗೂ ಬೆಟ್ಟಂಪಾಡಿಯಲ್ಲಿ ಕಡತ್ಕೊರೆತ ಆರಂಭಗೊಂಡಿದೆ. ಪಶ್ಚಿಮಘಟ್ಟಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವ ಕಾರಣ ದಕ್ಷಿಣ ಕನ್ನಡದ ಗುಂಡ್ಯ ಹೊಳೆ ಹರಿಯುವ ಹೊಸಮಠ ಸೇತುವೆ ಸತತ ಮೂರು ದಿನಗಳಿಂದ ಮುಳುಗಡೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 5ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಉತ್ತರ ಕನ್ನಡದ ಯಲ್ಲಾಪುರ, ಶಿರಸಿ, ಜೋಯಿಡಾ, ಗದಗ ಜಿಲ್ಲೆಯ ರೋಣ, ನರಗುಂದ, ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌, ಹುಣಸಗಿ, ವಡಗೇರಾ ತಾಲೂಕಿನ ಎಲ್ಲ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ನವಲಗುಂದ ಪ್ರದೇಶದಲ್ಲಿ ಆಗಾಗ ಜಿಟಿ ಜಿಟಿ ಮಳೆ ಸುರಿದಿದೆ.

loader