Asianet Suvarna News Asianet Suvarna News

ಇನ್ನೂ 5 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಮುಂದುವರಿದಿದೆ. ಇನ್ನೂ ಐದು ದಿನಗಳ ಕಾಲ ಹಲವು ರಾಜ್ಯಗಳ್ಲಲಿ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. 

Heavy Rain To Continue in Karnataka Next 5 Day
Author
Bengaluru, First Published Aug 11, 2019, 7:47 AM IST

ಬೆಂಗಳೂರು [ಆ.11]:  ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಆ.15ರ ವರೆಗೂ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯಲಿದೆ.

ಕೇರಳ ಮತ್ತು ಕರ್ನಾಟಕ ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾದ ಪರಿಣಾಮ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಈಗಾಗಲೇ ಮಳೆಯ ಪ್ರಯಾಣ ಕಡಿಮೆಯಾಗಿದೆ. ಆದರೆ, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆ.15ರ ವರೆಗೆ ಭಾರೀ ಮಳೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಎರಡು ದಿನ ಭಾರಿ ಮಳೆ ಎಚ್ಚರಿಕೆ:

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆ.11ರ ಭಾನುವಾರ 205 ಮಿ.ಮೀ.ಗೂ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವ ಕಾರಣ ರೆಡ್‌ ಅರ್ಲಟ್‌ ಮುಂದುವರೆಸಲಾಗಿದೆ. ಜತೆಗೆ ಆ.12ರಿಂದ ಆ.15ರ ವರೆಗೆ 115ರಿಂದ 205 ಮಿ.ಮೀ.ವರೆಗೆ ಭಾರೀ ಮಳೆಯಾಗುವ ಸಂಭವವಿದೆ ಎಂದ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಮಳೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನದಲ್ಲಿ ಆ.11 ಮತ್ತು 12ರಂದು 205 ಮಿ.ಮೀ.ಗೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂದಿನ ಎರಡು ದಿನಗಳಿಗೆ ರೆಡ್‌ ಅಲರ್ಟ್‌ ವಿಸ್ತರಣೆ ಮಾಡಲಾಗಿದೆ. ಜತೆಗೆ ಆ.13 ರಿಂದ ಮೂರು ದಿನ 115 ರಿಂದ 205 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮತ್ತೆ 2 ದಿನ ಬೆಳಗಾವಿಯಲ್ಲಿ ಮಳೆ:

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸ್ವಲ್ಪ ಮಳೆಯ ಅಬ್ಬರ ಕಡಿಮೆ ಆಗಿದ್ದು, ನೆರೆ ಪರಿಹಾರ ಕಾರ್ಯಕ್ಕೆ ಸ್ವಲ್ಪ ವೇಗ ಸಿಕ್ಕಿದೆ. ಆದರೆ, ಮತ್ತೆ ಭಾನುವಾರ ಮತ್ತು ಸೋಮವಾರ ಎರಡು ದಿನ ಬೆಳಗಾವಿಯಲ್ಲಿ 115 ರಿಂದ 205 ಮಿ.ಮೀ.ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಅತಿ ಹೆಚ್ಚು ಮಳೆಯಾದ ವಿವರ:

ಶನಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಿರುವ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಅತಿ ಹೆಚ್ಚು 57 ಸೆಂ.ಮೀ. ಮಳೆಯಾದ ವರದಿಯಾಗಿದೆ. ಶಿವಮೊಗ್ಗದ ಹುಂಚದಕಟ್ಟೆಯಲ್ಲಿ 39, ಚಿಕ್ಕಮಗಳೂರಿನ ಕಳಸದಲ್ಲಿ 32, ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯದಲ್ಲಿ 31, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ 29, ಶಿವಮೊಗ್ಗದ ಲಿಂಗನಮಕ್ಕಿಯಲ್ಲಿ 27, ಕೊಡಗಿನ ಭಾಗಮಂಡಲದಲ್ಲಿ 26, ದಕ್ಷಿಣ ಕನ್ನಡದ ಧರ್ಮಸ್ಥಳ ಹಾಗೂ ಶಿವಮೊಗ್ಗದ ಹೊಸನಗರದಲ್ಲಿ ತಲಾ 23, ದಕ್ಷಿಣ ಕನ್ನಡದ ಬೆಳ್ತಂಗಡಿ 22, ಉತ್ತರ ಕನ್ನಡದ ಸಿದ್ದಾಪುರ, ಚಿಕ್ಕಮಗಳೂರಿನ ಕಮ್ಮರಡಿ, ಚಿಕ್ಕಮಗಳೂರಿನ ಜಯಪುರದಲ್ಲಿ ತಲಾ 21 ಸೆಂ.ಮೀ. ಮಳೆಯಾದ ವರದಿಯಾಗಿದೆ.

Follow Us:
Download App:
  • android
  • ios