ಬೆಂಗಳೂರು [ಸೆ.06]:  ಇತ್ತೀಚಿನ ಭಾರೀ ಮಳೆ ಹಾಗೂ ಮಹಾ ಪ್ರವಾಹದಿಂದ ಚೇತರಿಸಿಕೊಳ್ಳುವ ಮುನ್ನವೇ ಕರ್ನಾಟಕಕ್ಕೆ ಮತ್ತೊಮ್ಮೆ ಅಂಥದ್ದೇ ಗಂಡಾಂತರ ಎದುರಾಗುವ ಆತಂಕ ಉಂಟಾಗಿದೆ. ಮಹಾರಾಷ್ಟ್ರ ಅಣೆಕಟ್ಟುಗಳಿಂದ ಭಾರೀ ಪ್ರಮಾಣದ ಹೊರ ಹರಿವು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತದಂತಹ ಅಪಾಯದ ಭೀತಿ ಎದುರಾಗಿದೆ.

ಮಹಾರಾಷ್ಟ್ರದ ಕೊಯ್ನಾ ಸೇರಿ ವಿವಿಧ ಜಲಾಶಯಗಳಿಂದ ನೀರು ಬಿಟ್ಟಿರುವ ಕಾರಣ ಕೃಷ್ಣಾ ನದಿಯಲ್ಲಿ ಗುರುವಾರ 1.33 ಲಕ್ಷ ಕ್ಯುಸೆಕ್ ಭಾರೀ ಹರಿವು ಇದೆ. ಇದರಿಂದಾಗಿ ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಆತಂಕವಿದೆ. ಬೆಳಗಾವಿ ಜಿಲ್ಲಾಡಳಿತ ಈಗಾಗಲೇ ಹೈಅಲರ್ಟ್ ಘೋಷಿಸಿದೆ. 

ಮಳೆಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏತನ್ಮಧ್ಯೆ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಹಾಸನದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ತಿಂಗಳಷ್ಟೇ ಭೂಕುಸಿತಕ್ಕೆ ತತ್ತರಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂರು ಹೋಬಳಿಗಳಲ್ಲಿ ಭೂಮಿಯೊಳಗಿನಿಂದ ಕೇಳಿಸಿದ ಭಾರೀ ಶಬ್ದ ಜನರ ನಿದ್ದೆಗೆಡಿಸಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. 

ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಧಾರವಾಡ, ಗದಗ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಸುರಿದಿದೆ. ಉತ್ತರ ಕರ್ನಾಟಕಕ್ಕೆ ಆತಂಕ: ಕೃಷ್ಣಾ ನದಿಯಲ್ಲಿ 1. 33 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲಾಡಳಿತ ಈಗಾಗಲೇ ಹೈ ಅಲರ್ಟ್ ಘೋಷಿಸಿದ್ದು, ನದಿ ತೀರದ ಸಂತ್ರಸ್ತರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದೆ. ಚಿಕ್ಕೋಡಿ ತಾಲೂಕಿನಲ್ಲಿ ಕೆಳಹಂತದ ೪ ಸೇತುವೆಗಳು ಕೂಡ ಜಲಾವೃತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಿದೆ.

ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿ ಬಿಡುತ್ತಿರುವುದರಿಂದ ನಾರಾಯಣಪೂರ ಜಲಾಶಯದ ಹಿನ್ನೀರಿನ ಪ್ರಮಾಣದಲ್ಲಿ ಮತ್ತೆ ಹೆಚ್ಚಳವಾಗಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗುವ ಅಪಾಯ ಎದುರಾಗಿದೆ. 

ಕೂಡಲಸಂಗಮ ಸಂಗಮನಾಥನ ದೇವಾಲಯದ ಸಂಕೀರ್ಣದೊಳಗೆ ನೀರು ನುಗ್ಗಲು ಮೂರು ಅಡಿಯಷ್ಟು ಮಾತ್ರ ಬಾಕಿ ಇದೆ. ಯಾದಗಿರಿಯ ಕಕ್ಕೇರಾ ಸಮೀಪದ ನೀಲಕಂಠರಾಯನ ಗಡ್ಡೆ ಮತ್ತೆ ಜಲಾವೃತಗೊಂಡಿದೆ.