ಬೆಂಗಳೂರು : ರಾಜ್ಯದ ಏಳು ಜಿಲ್ಲೆಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆ ಸುರಿದಿದ್ದು ಬಿಸಿಲಿಗೆ ಬಳಲಿದ್ದ ಇಳೆಗೆ ತಂಪೆರೆದಿದೆ. ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹತ್ತಾರು ಮನೆಗಳು ಜಖಂ ಆಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆ, ಅಂಗಡಿ ಮುಂಗಟ್ಟುಗಳಿಗೆ ಹಾನಿಗಳಾಗಿವೆ. ಧರ್ಮಸ್ಥಳ ಬಳಿ ಬೆಂಗಳೂರು- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮರ ಬಿದ್ದು ಕೆಲಕಾಲ ಸಂಚಾರ ಬಂದ್ ಆಗಿತ್ತು. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ, ಬಾಚಹಳ್ಳಿ, ಕಣಿಯನಪುರ, ಕಲಿಗೌಡನಹಳ್ಳಿ, ಕುಂದಕೆರೆ, ಕೆಬ್ಬೇಪುರ, ಜಕ್ಕಹಳ್ಳಿಯಲ್ಲಿ  ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.

ಕನ್ನೇಗಾಲದಲ್ಲಿ ಹಲವಾರು ಮನೆಗಳು ಜಖಂಗೊಂಡು ವಿದ್ಯುತ್ ಕಂಬ, ಮರಗಳು ನೆಲಕ್ಕುರುಳಿವೆ. ಬಂಡೀಪುರದಲ್ಲಿ ಸುರಿಯುತ್ತಿದ್ದ ಮಳೆಗೆ ಜಿಂಕೆಗಳು ರಸ್ತೆಯ ಇಕ್ಕೆಲಗಳಿಗೆ ಬಂದು ನೆನೆಯುತ್ತ ನಿಂತಿದ್ದು ಕಂಡುಬಂತು.