ರಾಜ್ಯದಲ್ಲಿ ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದೆ. ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಇನ್ನೂ 2 ದಿನಗಳ ಕಾಲ ಇದೇ ರೀತಿ ಮಳೆ ಸುರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಬೆಂಗಳೂರು : ರಾಜ್ಯದೆಲ್ಲೆಡೆ ಇನ್ನು ಎರಡು ದಿನ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಆ.14ರ ನಂತರ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ (ಕೆಎಸ್‌ಎನ್‌ಡಿಎಂಸಿ) ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಮಲೆನಾಡು ಮತ್ತು ಕರಾವಳಿಗೆ ಸೀಮಿತವಾಗಿದ್ದ ಮಳೆ ರಾಜ್ಯದೆಲ್ಲೆಡೆ ವ್ಯಾಪಿಸಿದ್ದು, ಎರಡು ದಿನ ರಾಜ್ಯದ ದಕ್ಷಿಣ, ಉತ್ತರ ಒಳನಾಡು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ಇನ್ನು ಎರಡು ದಿನ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು, ಆ.14ರ ನಂತರ ತೀವ್ರತೆ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗಿದ್ದು, ಪ್ರವಾಸಿಗರು ಮತ್ತು ನದಿ ಪಾತ್ರದ ಜನ ನದಿಗೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ ಎಂದರು.
