ಬೆಂಗಳೂರು[ಸೆ.26]: ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

ಹಂಚನಾಳ ಶಾಲೆಗೆ ಜಲದಿಗ್ಭಂದನ: ಚಿಣ್ಣರ ಕಲಿಕೆಗೆ ವಿಘ್ನಗಳು ನೂರಾರು

ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಎಂದು ಎಚ್ಚರಿಕೆ ನೀಡಲಾಗಿದೆ. 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಮಲೆನಾಡು ಹಾಗೂ ಕರವಾಳಿ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಅದರಲ್ಲೂ ಪ್ರಮುಖವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೀದರ್, ಕಲಬುರಗಿ, ಬೆಳಗಾವಿ ರಾಯಚೂರು , ವಿಜಯಪುರ, ಚಾಮರಾಜನಗರ, ಹಾಸನ, ಕೋಲಾರ ,ಕೊಡಗು,ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ರಾಮನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಎಂದು ತಿಳಿಸಲಾಗಿದೆ. ಇನ್ನುಳಿದಂತೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಮಳೆ: ಕುಂದಲಹಳ್ಳಿಯಲ್ಲಿ ಮನೆಗಳು ಜಲಾವೃತ

ಕೊಡಗಿನಲ್ಲಿ ಆರೆಂಜ್ ಅಲರ್ಟ್: 
ಕೊಡಗಿನಲ್ಲಿ ಮತ್ತೆ ವರುಣ ಅಬ್ಬರಿಸುವ ಮುನ್ಸೂಚನೆ ನೀಡಿದ್ದರಿಂದ ಜಿಲ್ಲೆಯಾದ್ಯಂತ ಇಂದು ನಾಳೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.  ಭಾರತೀಯ ಹವಾಮಾನ ಇಲಾಖೆ ವರದಿ ಹಿನ್ನಲೆ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಈ ಆದೇಶ ಹೊರಡಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ 115.6MM - 204.4MM ಮಳೆ ಬೀಳುವ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದಿರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಳೆ ಅವಾಂತರ:
ಬಾಗಲಕೋಟೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಚಿಕ್ಕಶಿವನಗುತ್ತಿ ಗ್ರಾಮದಲ್ಲಿ 10ಕ್ಕೂ ಅಧಿಕ ಮನೆಗಳೊಳಗೆ ನೀರು ನುಗ್ಗಿದೆ. ಹುನಗುಂದ ತಾಲೂಕಿನ ಚಿಕ್ಕಶಿವನಗುತ್ತಿ ಗ್ರಾಮದಲ್ಲೀಗ ಜವುಳು ಭೀತಿ ಎದುರಾಗಿದ್ದು, ಮನೆಯಿಂದ ನೀರು ಹೊರ ಹಾಕಲು ಮನೆಮಂದಿಯೆಲ್ಲಾ ಹರಸಾಹಸ ಪಡುತ್ತಿದ್ದಾರೆ.