ಖಾಜು ಸಿಂಗೆಗೋಳ 

ಇಂಡಿ:(ಸೆ.26) ಮಳೆ ಬಂದರೆ ಇಡೀ ಶಾಲೆ ಜಲಾವೃತವಾಗುತ್ತದೆ. ಅಷ್ಟು ಮಾತ್ರವಲ್ಲ ಕೋಣೆಗಳ ಚಾವಣಿಯಿಂದ ನೀರು ನುಗ್ಗುತ್ತಿರುವುದರಿಂದ ಇರುವ 154 ಮಕ್ಕಳಿಗೆ ಒಂದು ಕೋಣೆಯಲ್ಲಿ ಕೂಡಿಹಾಕಿ ಬೋಧಿಸುವ ದುಸ್ಥಿತಿ ನಿರ್ಮಾಣವಾಗಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗಡಿಭಾಗದ ಕೊನೆಯ ಹಳ್ಳಿ ಹಂಚನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 

ಶಾಲೆಯ ಆವರಣಕ್ಕೆ ಕಾಂಪೌಂಡ್‌ ಇಲ್ಲದ್ದಕ್ಕಾಗಿ ಶಾಲೆಯ ಆವರಣದಲ್ಲಿಯೇ ಬಸ್‌ ನಿಲುಗಡೆ ಆಗುತ್ತದೆ. ನಿತ್ಯ ಬಸ್‌ ಶಬ್ಧದ ಕಿರಿಕಿರಿ, ಪ್ರಯಾಣಿಕರ ಗದ್ದಲದ ನಡುವೆ ಮಕ್ಕಳು ಪಾಠ, ಪ್ರವಚನದಲ್ಲಿ ತೊಡಗಬೇಕು. ಇರುವ 5 ಕೋಣೆಗಳಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲ, 2 ಕೋಣೆಗಳಲ್ಲಿ ಮಳೆ ನೀರಿನಿಂದ ಚಾವಣಿ ಮೂಲಕ ನೀರು ತುಂಬಿಕೊಳ್ಳುತ್ತದೆ. ಹೀಗೆ ಒಂದಾ, ಎರಡಾ ಮಕ್ಕಳ ಕಲಿಕೆಗೆ ಹತ್ತಾರು ವಿಘ್ನಗಳು ಕಾಡುತ್ತಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುಮಾರು 1960ರಲ್ಲಿ ಪ್ರಾರಂಭವಾದ ಈ ಶಾಲೆ, ಕಳೆದ 10 ವರ್ಷಗಳ ಹಿಂದೆ 4 ಕೋಣೆ ನಿರ್ಮಿಸಲಾಗಿದ್ದು, ಕಳಪೆ ಕಾಮಗಾರಿಯಿಂದ ಕೋಣೆ ಶಿಥಿಲಗೊಂಡು, ಚಾವಣಿ ಮೂಲಕ ಮಳೆ ನೀರು ಕೋಣೆಯಲ್ಲಿ ನುಗ್ಗುತ್ತಿದೆ. 6 ಶಿಕ್ಷಕ ಹುದ್ದೆಗಳು ಮಂಜೂರು ಇದ್ದು, ಕೇವಲ 4 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಅತಿಥಿ ಶಿಕ್ಷಕರು ಇದ್ದಾರೆ. ಒಂದು ಹುದ್ದೆ ಖಾಲಿ ಇದೆ. ಇತ್ತ ಮಕ್ಕಳ ಕಲಿಕೆಗೆ ಶಾಲಾ ಕೋಣೆಗಳೂ ಲಭ್ಯವಿಲ್ಲ. ಪಾಠ ಮಾಡಲು ಮಂಜೂರಾದ ಹುದ್ದೆಗಳಷ್ಟುಶಿಕ್ಷಕರೂ ಇಲ್ಲ. ಹೀಗಾಗಿ ಈ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳು ಕಲಿಕೆಯಿಂದ ಹಿಂದುಳಿಯುವಂತ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಯೋಜನೆ, ಅನುದಾನ ನೀಡುತ್ತಿದೆ. ಆದರೆ, ಕೋಣೆಗಳ ನಿರ್ಮಾಣಕ್ಕೆ ಮಾತ್ರ ಅನುದಾನ ನೀಡುತ್ತಿಲ್ಲ. ಇದು ನೋವಿನ ಸಂಗತಿ. ಗಡಿ ತಾಲೂಕಿನಲ್ಲಿ ಕನ್ನಡ ಭಾಷೆ ಬೆಳವಣಿಗೆ ಹಾಗೂ ಕಲಿಕೆಗೆ ಶಾಲಾ ಕೋಣೆಗಳ ಕೊರತೆಯೂ ಒಂದು ಕಾರಣವಾಗಿದೆ.

ಶೌಚಾಲಯ ನಿರುಪಯುಕ್ತ:

ಕಳೆದ ಆರೇಳು ವರ್ಷದ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅದು ಸದ್ಯ ನಿರುಪಯುಕ್ತವಾಗಿದೆ. ಈ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನಿಂದ ವಂಚಿತಗೊಂಡಿದ್ದು, ಬೋರ್‌ವೆಲ್‌ ನೀರೇ ಗತಿಯಾಗಿದೆ.
ಶಾಲೆ ಆವರಣ ಸುತ್ತ ಯಾವುದೇ ಕಾಂಪೌಂಡ್‌ ಇಲ್ಲ. ಶಾಲೆ ರಸ್ತೆಗೆ ಹೊಂದಿಕೊಂಡಿರುವುದರಿಂದ ನಿತ್ಯ ರಸ್ತೆ ಮೂಲಕ ಓಡಾಡುವ ವಾಹನಗಳ ಶಬ್ಧ, ವಾಹನಗಳ ಹಾರ್ನ್‌ ಮಕ್ಕಳ ಏಕಾಗ್ರತೆಯನ್ನು ನುಂಗಿಹಾಕುತ್ತಿದೆ. ಅಲ್ಲದೆ, ಸಾರಿಗೆ ಬಸ್‌ ನಿತ್ಯ ಶಾಲೆ ಆವರಣದಲ್ಲೇ ನಿಂತು ಪ್ರಯಾಣಿಕರನ್ನು ಕರೆದೊಯ್ಯುತ್ತಿದೆ. ಜೊತೆಗೆ ಸಾರ್ವಜನಿಕರು ಬಸ್‌ಗಾಗಿ ಇದೇ ಶಾಲೆಯನ್ನು ಆಶ್ರಯಿಸಿ ಕಾದಿದ್ದು ಬಸ್‌ ಹತ್ತಿ ಪ್ರಯಾಣಿಸುತ್ತಿರುವುದರಿಂದ ಮಕ್ಕಳ ಬೋಧನಾ ಚಟುವಟಿಕೆಗಳಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಹೀಗಾಗಿ ಇಲ್ಲಿನ ಶಿಕ್ಷಕ ಸಿಬ್ಬಂದಿಯ ಪರಿಸ್ಥಿತಿ ನುಂಗಲೂ ಆಗದೆ, ಉಗುಳಲೂ ಆಗದಂತಾಗಿದೆ.

ಈ  ಬಗ್ಗೆ ಮಾತನಾಡಿದ ಹಂಚನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಡಿ.ಎಲ್‌.ಇಮ್ಮನದ ಅವರು, ಹಂಚನಾಳ ಗ್ರಾಮದಲ್ಲಿ ಕಳೆದ 60 ವರ್ಷದ ಹಿಂದೆ ಶಾಲೆ ಮಂಜೂರು ಆಗಿದೆ. ಸದ್ಯ ಇರುವ 5 ಕೋಣೆಗಳು ಮಳೆ ಬಂದರೆ ಸೋರುತ್ತಿವೆ. ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಶಾಲಾ ಕೋಣೆಗಳ ಮಂಜೂರಿಗೆ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ತುರ್ತಾಗಿ 3 ಶಾಲಾ ಕೋಣೆಗಳು ನಿರ್ಮಾಣವಾದರೆ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು. 

ಶಾಲಾ ಕೋಣೆ, ಕಾಂಪೌಂಡ್‌ ಇಲ್ಲದ್ದಕ್ಕಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಗ್ರಾಮಕ್ಕೆ ಬರುವ ಬಸ್‌ ನಿಲ್ದಾಣವು ಶಾಲಾ ಆವರಣದ ಬಳಿಯೇ ನಿಲ್ಲುವುದರಿಂದ ಗ್ರಾಮದ ಸಾರ್ವಜನಿಕರು ನಿತ್ಯ ಶಾಲೆಯ ಆವರಣದಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಶಾಲೆಗೆ ಕಾಂಪೌಂಡ್‌ ಹಾಗೂ ಕೊಣೆ ನಿರ್ಮಾಣ ಮಾಡಿ, ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಕರವೇ ಗ್ರಾಮ ಘಟಕಾಧ್ಯಕ್ಷ ಕೋಬಣ್ಣ ಪೂಜಾರಿ ಅವರು ಹೇಳಿದರು. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಇಂಡಿ ಬಿಇಒ ಎಸ್‌.ಬಿ.ಬಿಂಗೇರಿ ಅವರು, ಹಂಚನಾಳ ಗ್ರಾಮದಲ್ಲಿರುವ ಶಾಲೆಗೆ ಕೋಣೆಗಳ ಕೊರತೆ ಇರುವುದು ನಿಜ. ಶಾಲೆಯಲ್ಲಿ ನೀರು ನುಗ್ಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಮುಖ್ಯಶಿಕ್ಷಕರಿಂದ ಮಾಹಿತಿ ಪಡೆದು ಶಾಲಾ ಕೋಣೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.