Asianet Suvarna News Asianet Suvarna News

ಆಂಧ್ರ, ತೆಲಂಗಾಣದಲ್ಲಿ ಧಾರಾಕಾರ ಮಳೆ: ಮೃತರ ಸಂಖ್ಯೆ 9ಕ್ಕೆ ಏರಿಕೆ

Heavy rain at Andra and telangana

ವಿಜಯವಾಡ/ಹೈದರಾಬಾದ್‌(ಸೆ.23): ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಶುಕ್ರವಾರ ನಾಲ್ವರು ಸಾವಿಗೀಡಾಗಿದ್ದು, ಮಳೆ ಸಂಬಂಧಿ ಅನಾಹುತದಲ್ಲಿ ಈವರೆಗೂ ಅಸುನೀಗಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ನಡುವೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಮುಂದಿನ 48 ಗಂಟೆಗಳ ಕಾಲ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹೈದರಾಬಾದ್‌ ಸೇರಿ ಎರಡೂ ರಾಜ್ಯಗಳ ವಿವಿಧ ನಗರಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಸೇನೆ ನೆರವಿಗೆ ಮನವಿ ಮಾಡಲಾಗಿದೆ.

ಕೊಚ್ಚಿಹೋದರು: ವಿಶಾಖಪಟ್ಟಣ ಜಿಲ್ಲೆಯಲ್ಲಿ ಭಾರೀ ಪ್ರವಾಹ ಕಾಣಿಸಿಕೊಂಡಿದ್ದು, ಇಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ದಳದ ಆಯುಕ್ತ ಕೆ.ಧನಂಜಯ್‌ ರೆಡ್ಡಿ ತಿಳಿಸಿದ್ದಾರೆ. ಗುಂಟೂರಿನಲ್ಲೂ 6 ಮಂದಿ ಸಾವಿಗೀಡಾಗಿದ್ದಾರೆ. ಮಳೆಯ ಪರಿಣಾಮ ಗುಂಟೂರಿನ ಪಲ್ನಾಡು ಪ್ರಾಂತ್ಯ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದ ಕೆಲವೆಡೆ ಸೇತುವೆಗಳು ಕೊಚ್ಚಿಹೋಗಿವೆ.

ಪುತ್ರನ ರಕ್ಷಿಸಲು ಹೋಗಿ ತಂದೆ ಸಾವು: ಕೊಂಗುಡು ಗ್ರಾಮದ ಸೇತುವೆ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಸಿಲುಕಿದ್ದ ತನ್ನ ಮಗು ರಕ್ಷಣೆಗೆ ಯತ್ನಿಸಿದ್ದ ನಾಯಿನಿ ಸ್ವಾಮಿ(58) ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಮೇಡಕ್‌ ಜಿಲ್ಲೆಯ ಮುಬಾರಕ್‌ಪುರ ಗ್ರಾಮದಲ್ಲಿ ಮನೆ ಕುಸಿದು ವೃದ್ಧೆಯೊಬ್ಬರು ಅಸುನೀಗಿದ್ದಾರೆ. ಕಾನುಕುಂಟ ಗ್ರಾಮದಲ್ಲೂ ಮನೆ ಕುಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ: ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಮೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ, ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟುಸಹಕಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ತೆಲಂಗಾಣದ ಕಡಿಮೆ ಒತ್ತಡ ಪ್ರದೇಶದಲ್ಲಿರುವ ಜನತೆಯನ್ನು ಪೊಲೀಸ್‌ ಮತ್ತು ವಿಪತ್ತು ನಿರ್ವಹಣಾ ದಳ ತಂಡದ ನೆರವಿನಿಂದ ಸುರಕ್ಷಿತ ಪ್ರದೇಶಗಳಿಗೆ ರವಾನಿಸುವಂತೆ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ತೆಲಂಗಾಣದ ಮಳೆ ಅವಾಂತರದಿಂದಾಗಿ ಸೃಷ್ಟಿಯಾದ ಪರಿಸ್ಥಿತಿ ಮೇಲ್ವಿಚಾರಣೆಯನ್ನು ತೆಲಂಗಾಣ ಡಿಸಿಎಂ ಮೊಹಮ್ಮದ್‌ ಅಲಿ, ಗೃಹ ಸಚಿವ ಎನ್‌.ನರಸಿಂಹ ರೆಡ್ಡಿ ಮತ್ತು ಹಿರಿಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೆಯಿಂದಲೇ ಕೆಲಸಕ್ಕೆ ಸೂಚನೆ

ಹೈದರಾಬಾದ್‌ನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಐಟಿ ಸಂಸ್ಥೆಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲು ತಮ್ಮ ನೌಕರರಿಗೆ ಅನುವು ಮಾಡಿಕೊಡುವಂತೆ ತೆಲಂಗಾಣ ಸರ್ಕಾರ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 11 ಸೆ.ಮೀ. ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಾಗಾಗಿ, ಈ ಭಾಗದಲ್ಲಿ ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಚಿನ್ನ ಶಂಕರ್‌ಪೇಟೆ ಮಂಡಲದಲ್ಲಿ 21 ಸೆ.ಮೀ.ನಷ್ಟುಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Latest Videos
Follow Us:
Download App:
  • android
  • ios