ಬೆಂಗಳೂರು [ಜು.18]: ಮಳೆ ಕೊರತೆಯಿಂದ ಕಂಗೆಟ್ಟಿದ್ದ ಬೆಂಗಳೂರು, ಧಾರವಾಡ, ಗದಗದಲ್ಲಿ ಉತ್ತಮ ಮಳೆಯಾಗಿದ್ದು, ಶಿವಮೊಗ್ಗ ಸೇರಿ ಕೆಲವೆಡೆ ಬುಧವಾರ ಸಾಧಾರಣ ಮಳೆ ಸುರಿದಿದೆ. ಏತನ್ಮಧ್ಯೆ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಗುರುವಾರದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದ್ದು, ಅರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಕಳೆದ ವರ್ಷ ಪ್ರಾಕೃತಿಕ ವಿಪತ್ತಿಗೆ ತುತ್ತಾಗಿದ್ದ ಜಿಲ್ಲೆಯಲ್ಲಿ 115.6 ರಿಂದ 204.4 ಮಿ.ಮೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ತಗ್ಗುಪ್ರದೇಶದ ಜನ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ 22ರ ವರೆಗೆ ಭಾರಿ ಮಳೆ ಆಗುವ ಸಾಧ್ಯತೆಯಿದ್ದು, ಮೀನುಗಾರರು, ಪ್ರವಾಸಿಗರು ಅಗತ್ಯ ಮುಂಜಾಗ್ರತೆ ವಹಿಸುವಂತೆ ಅಪರ ಜಿಲ್ಲಾಧಿಕಾರಿ ನಾಗರಾಜ್‌ ಸಿಂಗ್ರೇರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲೂ ಮೀನುಗಾರರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಈ ನಡುವೆ, ಹಲವು ದಿನಗಳಿಂದ ಮಳೆಯಿಲ್ಲದೆ ತತ್ತರಿಸಿದ್ದ ಹುಬ್ಬಳ್ಳಿ, ಧಾರವಾಡ ಮಹಾನಗರ ಸೇರಿ ಧಾರವಾಡ ಜಿಲ್ಲೆಯ ಬಹುತೇಕ ಕಡೆ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಗಳ ಕಾಲ ಭಾರೀ ಮಳೆಯಾಗಿದೆಸುರಿಯಿತು. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸುತ್ತಮುತ್ತಲೂ ಉತ್ತಮ ಮಳೆ ಸುರಿದಿದೆ. ಹಾವೇರಿ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.