ಬೆಂಗಳೂರು [ಜು.08]: ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ  ಮಳೆ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರದ ಮಳೆಯಾಗಿದ್ದು, ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ಮತ್ತು ಉಪ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಳವಾಗಿ 6 ಸೇತುವೆಗಳು ಸಂಪರ್ಕ ಕಡಿದುಕೊಂಡಿವೆ.

ಚಿಕ್ಕಮಗಳೂರಿನಲ್ಲೂ ಮಳೆ ಮುಂದುವರಿದಿದೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಪ್ರಮಾಣ ಇಳಿಮುಖವಾಗಿದ್ದರಿಂದ ತುಂಗಾ, ಭದ್ರಾ ನದಿಗಳ ನೀರಿನ ಮಟ್ಟ ಇಳಿಮುಖವಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲಿ ಸಣ್ಣ ಪ್ರಮಾಣದಲ್ಲಿ  ಮಳೆಯಾಗಿದೆ. 

ಕೊಡಗು, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲಾದ್ಯಂತ ಆಗಾಗ್ಗೆ ತುಂತುರು ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ, ಹೂವಿನಹಡಗಲಿಯಲ್ಲಿ ಉತ್ತಮ ಮಳೆಯಾಗಿದೆ. ಕಂಪ್ಲಿಯಲ್ಲಿ ಬಿರುಗಾಳಿ ಸಹಿತ ತುಂತುರು ಮಳೆಯಾಗಿದೆ. ಹರಪನಹಳ್ಳಿಯಲ್ಲೂ ತುಂತುರು ಮಳೆಯಾಗಿದೆ. ಹಾವೇರಿ ಜಿಲ್ಲೆಯಾದ್ಯಂತ ತುಂತುರು ಮಳೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಕೆಲವೆಡೆ ತುಂತುರು ಮಳೆಯಾಗಿದೆ.