ಪಂಜಾಬ್ನ ಅಮೃತ್'ಸರದಲ್ಲಿ ಇಂದಿನಿಂದ ಹಾರ್ಟ್ ಆಪ್ ಏಷಿಯಾ ಸಮ್ಮೇಳನ ನಡೆಯಲಿದೆ. ಜಗತ್ತಿನ 40 ದೇಶಗಳು ಭಾಗಿಯಾಗಿರುವ ಸಭೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಜಂಟಿಯಾಗಿ ಸಮ್ಮೇಳನವನ್ನು ಉದ್ಗಾಟಿಸಲಿದ್ದಾರೆ.
ಅಮೃತಸರ(ಡಿ. 04): ಹಲವು ನಿರೀಕ್ಷೆಗಳೊಂದಿಗೆ ಎರಡು ದಿನಗಳ ಹಾರ್ಟ್ ಆಪ್ ಏಷಿಯಾ ಸಮ್ಮೇಳನಕ್ಕೆ ಪಂಜಾಬ್ ರಾಜಧಾನಿ ಸಾಕ್ಷಿಯಾಗುತ್ತಿದೆ. ನೆರೆಹೊರೆಯ ರಾಷ್ಟ್ರಗಳ ನಡುವಿನ ರಾಜಕೀಯ ಬೆಳವಣಿಗೆಗಳು, ಆರ್ಥಿಕ ಸಹಕಾರ, ಹಾಗೂ ಭದ್ರತೆಯ ಒಡಂಬಡಿಕೆಗಳ ಒಪ್ಪಂದಗಳಿಗಾಗಿ ನಡೆಯುವ ಸೌಹಾರ್ದ ಸಭೆ ಈ ಬಾರಿ ಕುತೂಹಲ ಮೂಡಿಸಿದೆ. 40 ದೇಶಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಭಾರತ "ಹಾರ್ಟ್ ಆಪ್ ಏಷಿಯಾ" ಸಮ್ಮೇಳನದ ನೇತೃತ್ವ ವಹಿಸಿದೆ.
ಸಮ್ಮೇಳನದ ಉದ್ದೇಶಗಳು
* ತಾಲಿಬಾನ್ ಉಗ್ರರಿಂದ ನಲುಗುತ್ತಿರುವ ಅಫ್ಘಾನಿಸ್ತಾನಕ್ಕೆ ಸ್ಥೈರ್ಯ ತುಂಬುವುದು
* ಭಯೋತ್ಪಾದನೆ ಕಡಿವಾಣಕ್ಕೆ ಒತ್ತು ನೀಡುವುದು
* ದಕ್ಷಿಣ ಮತ್ತು ಕೇಂದ್ರ ಏಷಿಯಾ ರಾಷ್ಟ್ರಗಳಿಗೆ ಅಫ್ಘಾನಿಸ್ತಾನವನ್ನು ಸಂಪರ್ಕಿಸುವುದು
* ತಾಪಿ- TAPI (ತುರ್ಕಮೆನಿಸ್ತಾನ್-ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ) ಅನಿಲ ಪೈಪ್'ಲೈನ್ ಯೋಜನೆ
ಈ ರೀತಿಯ ಪ್ರಮುಖಾಂಶಗಳ ಚರ್ಚೆಗಳು ನಡೆಯಲಿದ್ದು, ಸಭೆಯ ಬೆಳವಣಿಗೆಗಳ ಬಗೆಗೆ ಕುತೂಹಲ ಮೂಡಿಸಿದೆ. ಜೊತೆಗೆ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸರೋಜ್ ಸಚಿವೆ ಅನಾರೋಗ್ಯ ಹಿನ್ನೆಲೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇದರ ನಡುವೆ ಸಭೆಗೆ ಒಂದು ದಿನ ಮುನ್ನವೇ ಭಾರತಕ್ಕೆ ಆಗಮಿಸಿರುವ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್, ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆರೋಗ್ಯ ವಿಚಾರಣೆ ನಡೆಸಿ ಚೇತರಿಕೆಗೆ ಹಾರೈಸಿದ್ದಾರೆ. ಅಲ್ಲದೆ ಸಭೆಯಲ್ಲಿ ನಗ್ರೋಟ ಸೇನಾ ಶಿಬಿರದ ದಾಳಿ ಸೇರಿದಂತೆ ಗಡಿಯಲ್ಲಿನ ಬೆಳವಣೆಗೆಗಳ ಬಗ್ಗೆ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ.
ಇದೇ ವೇಳೆ, ಪಾಕಿಸ್ತಾನ, ಕಿರ್ಗಿಸ್ತಾನ, ಇರಾನ್, ಆಫ್ಘಾನಿಸ್ತಾನ ಮತ್ತು ಸ್ಲೊವಾಕಿಯಾ ದೇಶಗಳ ವಿದೇಶಾಂಗ ಸಚಿವರುಗಳು ಸಮ್ಮೇಳನಕ್ಕೆ ಮುನ್ನ ಪ್ರಧಾನಿ ಮೋದಿಯವರನ್ನು ಭಾನುವಾರ ಭೇಟಿಯಾಗಿದ್ದಾರೆ. ಭಯೋತ್ಪಾದನೆಯನ್ನು ದಮನ ಮಾಡಬೇಕಾದ ಮಹತ್ವವನ್ನು ಮೋದಿಯವರು ಈ ವಿದೇಶಾಂಗ ಸಚಿವರ ಬಳಿ ನಿವೇದಿಸಿದರೆನ್ನಲಾಗಿದೆ.
ಒಟ್ನಲ್ಲಿ, ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಉಗ್ರ ಚಟುವಟಿಕೆಗಳಿಗೆ ಹೆಸರುವಾಸಿಯಾಗ್ತಿರೋ ಪಾಕಿಸ್ತಾನಕ್ಕೆ ಸಭೆಯಲ್ಲಿ ಇತರೆ ರಾಷ್ಟ್ರಗಳು ಯಾವ ರೀತಿಯ ಒತ್ತಡ ಹೇರುತ್ತದೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆ ಕುತೂಹಲ ಮೂಡಿಸಿದೆ.
- ಗೌತಮ್ ಚಿಕ್ಕನಂಜಯ್ಯ, ನ್ಯೂಸ್ ಡೆಸ್ಕ್, ಸುವರ್ಣ ನ್ಯೂಸ್
