ಅಯ್ಯೋ ದೇವರೇ.. ಗಜರಾಜನಿಗೆ ಇಂಥಾ ಶಿಕ್ಷೆಯೇ?

ರಾಮನಗರ(ನ. 03): ಮಂಚನಬೆಲೆ ಹಿನ್ನೀರಿನಲ್ಲಿರುವ ಕಾಡಾನೆ ಸಿದ್ದನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಚಿಕಿತ್ಸೆ ಮುಂದುವರಿಯುತ್ತಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಚಿಕಿತ್ಸೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂಬ ಗೊಂದಲ ವೈದ್ಯರಲ್ಲಿದೆ. ವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ದನಿಗೆ ರಾಗಿ ಮುದ್ದೆ, ಕಬ್ಬು, ಆಲದ ಸೊಪ್ಪನ್ನ ತಿನ್ನಿಸುತ್ತಿದ್ದಾರೆ. ಆದ್ರೆ ಈ ಕಾಡಾನೆ ಮಾತ್ರ ಯಾವುದೇ ಸೊಪ್ಪು ತಿನ್ನದೇ ಉಗಿಯುತ್ತಿದೆ. ಜೊತೆಗೆ ಆನೆಯ ಎಡಗಣ್ಣು ಕೂಡ ಕಾಣಿಸುತ್ತಿಲ್ಲ. ಇಡೀ ಬಲಗಾಲು ಕೀವು ತುಂಬಿಕೊಂಡಿದ್ದರಿಂದ ಕಾಲು ನೋವು ಹೆಚ್ಚಾಗಿದೆ. ವೈದ್ಯರು ಯಾವುದೇ ಮಾದರಿಯಲ್ಲಿ ಚಿಕಿತ್ಸೆ ನೀಡಿದ್ದರೂ ಆನೆ ಮಾತ್ರ ಸರಿಯಾಗಿ ಸ್ಪಂದನೆ ನೀಡದೇ ನಿಃಶಕ್ತಿ ತೋರಿಸುತ್ತಿದೆ. ಅದರ ಆರೋಗ್ಯ ಇನ್ನಷ್ಟು ಬಿಗಡಾಯಿಸಿದ್ದು, ಮೇಲಕ್ಕೆ ಏಳುತ್ತಲೇ ಇಲ್ಲ.

ಈ ಹಿನ್ನೆಲೆಯಲ್ಲಿ ಗಜರಾಜನನ್ನ ನೋಡಲು ಜನರು ಅವ್ವೇರಹಳ್ಳಿಯ ರಾಗಿ ಹೊಲಕ್ಕೆ ಬರ್ತಿದ್ದಾರೆ. ಆನೆ ನೋಡಲು ಬಂದ ಸಾರ್ವಜನಿಕರು ಕೂಡ ಆನೆಯ ಪರಿಸ್ಥಿತಿ ಕಂಡು ಮರುಗುತ್ತಿದ್ದಾರೆ. ಕೆಲವರು ಆನೆ ಸಿದ್ದ ಗುಣವಾಗಲಿ ಅಂತ ದೇವರಲ್ಲಿ ವಿಶೇಷ ಪೂಜೆ ಕೂಡ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ಆನೆ ನೋಡಲು ಸಾರ್ವಜನಿಕರು ತಂಡ ತಂಡವಾಗಿ ಬಂದು ಆನೆಯನ್ನು ವೀಕ್ಷಣೆ ಮಾಡುವುದು ಹೆಚ್ಚಾಗಿದ್ದರಿಂದ ಇಂದಿನಿಂದ ಅರಣ್ಯ ಸಿಬ್ಬಂದಿ ಆನೆ ವೀಕ್ಷಣೆಯನ್ನು ನಿಷೇಧಿಸಿದ್ದಾರೆ.

64 ದಿನಗಳ ಹಿಂದೆ ಕಾಡಾನೆ ಸಿದ್ದನ ಕಾಲು ಮುರಿದುಹೋಗಿತ್ತು. ಇತ್ತೀಚೆಗಷ್ಟೇ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನಡೀತಿದೆ. ಆದರೆ, ಆಗಲೇ ಈ ಆನೆಗೆ ಚಿಕಿತ್ಸೆ ಸಿಕ್ಕಿದ್ದರೆ ಬೇಗನೇ ಚೇತರಿಸಿಕೊಳ್ಳುತ್ತಿತ್ತು ಎಂಬ ಅಭಿಪ್ರಾಯವಿದೆ.