ನವದೆಹಲಿ[ಜ.25]: ಪೋಲಿಯೋ ಲಸಿಕೆಯಲ್ಲಿ ಪೋಲಿಯೋ ಉಂಟು ಮಾಡುವ ವೈರಸ್‌ಗಳು ಕಂಡು ಬಂದ ಬೆನ್ನಲ್ಲೇ ಫೆ.3ರಂದು ನಡೆಯಬೇಕಿದ್ದ ಪಲ್ಸ್‌ ಪೋಲಿಯೋ ಅಭಿಯಾನವನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದೂಡಿದೆ.

ಬಿಹಾರ, ಮಧ್ಯಪ್ರದೇಶ ಹಾಗೂ ಕೇರಳ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜ.18ರಂದು ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿ ಡಾ

ಪ್ರದೀಪ್‌ ಹಲ್ದಾರ್‌ ಎಂಬುವರು ಫೆ.3ರಂದು ಹಮ್ಮಿಕೊಳ್ಳಲಾಗಿರುವ ಪಲ್ಸ್‌ ಪೋಲಿಯೋ ಲಸಿಕೆ ಅಭಿಯಾನವನ್ನು ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ಬಿಹಾರ, ಮಧ್ಯಪ್ರದೇಶ ಹಾಗೂ ಕೇರಳದಲ್ಲಿ ಸಾಕಷ್ಟುಪೋಲಿಯೋ ಲಸಿಕೆ ದಾಸ್ತಾನು ಇರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಅಭಿಯಾನಕ್ಕೆ ಅನುವು ಮಾಡಿಕೊಡಲಾಗಿದೆ.

ಕೇಂದ್ರ ಸರ್ಕಾರ ಏಕಾಏಕಿ ಅಭಿಯಾನವನ್ನು ಮುಂದೂಡಿದ್ದಕ್ಕೆ ನಿರ್ದಿಷ್ಟಕಾರಣಗಳನ್ನು ನೀಡಿಲ್ಲ. ಮೂಲಗಳ ಪ್ರಕಾರ, ವೈರಾಣು ಮಿಶ್ರಿತ ಲಸಿಕೆ ಪತ್ತೆ ಬಳಿಕ ದೇಶದಲ್ಲಿ ಸರ್ವೇಕ್ಷಣೆ ಹೆಚ್ಚಾದ್ದರಿಂದ ಲಸಿಕೆಯ ಕೊರತೆ ಕಂಡುಬಂದಿದೆ. ಹೀಗಾಗಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದ ಕಾರಣ, ಬಡ ರಾಷ್ಟ್ರಗಳಲ್ಲಿ ಲಸಿಕೆಗೆ ನೆರವಾಗುವ ಅಂತಾರಾಷ್ಟ್ರೀಯ ಸಂಸ್ಥೆ ‘ಗವಿ’ ಮೊರೆಗೆ ಸರ್ಕಾರ ಹೋಗಿದ್ದು, ಪೋಲಿಯೋ ಲಸಿಕೆಗಳ ಸರಬರಾಜಿನಲ್ಲಿ ಸಹಾಯ ಮಾಡುವಂತೆ ಕೋರಿಕೊಂಡಿದೆ ಎನ್ನಲಾಗಿದೆ.