ಚೆನ್ನೈ(ಅ.02): ಕಳೆದ ವಾರ ಚೆನ್ನೈ ಆಪೋಲೋ ಆಸ್ಪತ್ರೆಗೆ ದಾಖ ಲಾಗಿದ್ದ ಎಐಎಡಿಎಂಕೆ ಮುಖ್ಯಸ್ಥೆ, ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಕುರಿತ ನಿಗೂಢತೆ ಇನ್ನೂ ಮುಂದುವರಿದಿದೆ.

ಅವರ ಆರೋಗ್ಯದ ಕುರಿತು ಹಬ್ಬಿರುವ ನಾನಾ ವದಂತಿಗಳಿಗೆ ಇಂಬು ನೀಡುವಂತೆ, ಬ್ರಿಟನ್‌'ನ ತಜ್ಞ ವೈದ್ಯರೊಬ್ಬರು ಚೆನ್ನೈಗೆ ಆಗಮಿಸಿದ್ದು, ಜಯಾ ಅವರ ಆರೋಗ್ಯವನ್ನು ಪರಿಶೀಲಿಸಿದ್ದಾರೆ. ಇದು ಜಯಾ ಅವರು ನಿಜವಾಗಿಯೂ ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿದ್ದಾರಾ ಅಥವಾ ಅವರು ಬೇರೆ ಕಾಯಿಲೆಯಿಂದ ಬಳಲುತ್ತಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಜಯಾ ಆರೋಗ್ಯದ ಕುರಿತು ಅವರ ಅಭಿಮಾನಿಗಳಲ್ಲಿ ಭಾರೀ ಆತಂಕ ಹುಟ್ಟುಹಾಕಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಅಪೋಲೋ ಆಸ್ಪತ್ರೆಯ ಮುಂದೆ ಅವರ ಅಭಿಮಾನಿಗಳು ಚೇತರಿಕೆಗೆ ಹಾರೈಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಈ ನಡುವೆ ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಸುತ್ತಮುತ್ತ ಭಾರೀ ಬಿಗಿಬಂದೋಬಸ್ತ್ ಕಲ್ಪಿಸಲಾಗಿದೆ. ಈ ನಡುವೆ ತಮಿಳುನಾಡಿನ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್‌ ಅವರು ನಿನ್ನೆ ರಾತ್ರಿ ಅಪೋಲೋ ಆಸ್ಪತ್ರೆಗೆ ಭೇಟಿ ಕೊಟ್ಟು ಜಯ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಹೇಳಿಕೆ ಬಿಡುಗಡೆ ಮಾಡಿದ ಅವರು, ಸಿಎಂ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಇದಕ್ಕೆ ಕಾರಣರಾದ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.