ನವದೆಹಲಿ[ಆ.16]: ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ನಿಜಕ್ಕೂ ಇಂದು ಭಾವುಕರಾದರು. ತಮ್ಮ 65 ವರ್ಷಗಳ ಸ್ನೇಹ ಇಂದು ಕೊನೆಯಾಯಿತಲ್ಲ ಎಂಬ ನೋವು ಅವರಲ್ಲಿ ಕಾಡುತ್ತಿತ್ತು. ಮಾಜಿ ಉಪ ಪ್ರಧಾನಿ ತನ್ನ ಆಪ್ತಮಿತ್ರನನ್ನು ಕಳೆದುಕೊಂಡ ಸಂಕಟವನ್ನು ಬಣ್ಣಿಸಿದ್ದು ಹೀಗೆ. 

ಆಪ್ತ ಮಿತ್ರನನ್ನು ಕಳೆದುಕೊಂಡೆ
ಭಾರತದ ಹಿರಿಯ, ಶ್ರೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಈ ದುಃಖವನ್ನು ವ್ಯಕ್ತಪಡಿಸಲು ನನ್ನಂದ ಸಾಧ್ಯವಾಗುತ್ತಿಲ್ಲ. ಅವರು ನನ್ನ ರಾಜಕೀಯ ನಂಟಿಗಿಂತ 65 ವರ್ಷಗಳ ಹಳೆಯ ಸ್ನೇಹ.

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಚಾರಕ್ ಆಗಿರುವಾಗಲೇ ನಮ್ಮಿಬ್ಬರಲ್ಲಿ ಹೆಚ್ಚು ಬಾಂಧವ್ಯವಿತ್ತು.  ನಂತರ ಇಬ್ಬರು ರಾಜಕಾರಣಿಗಳಾಗಿ ಜನಸಂಘದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಮುಂದುವರೆಯಿತು.  ತುರ್ತು ಪರಿಸ್ಥಿತಿಯ ದಿನಗಳಲ್ಲಿ ಇಬ್ಬರು ಒಂದೇ ಸೆರೆಮನೆಗಳಲ್ಲಿ ಶಿಕ್ಷೆ ಅನುಭವಿಸಿದೆವು. ನಮ್ಮಿಬ್ಬರ  ನಿಲುವು, ಸಾಮಾಜಿಕ ಮತ್ತು ನಂಬಿಕೆಗಳ ವಿಚಾರದಲ್ಲಿ ಭಿನ್ನತೆಗಳಿದ್ದವು.

ಆದರೆ ಅವರ ನಾಯಕತ್ವದ, ಮಾನವೀಯ ಗುಣಗಳು, ಮನಮುಟ್ಟುವ ಭಾಷಣ, ದೇಶಭಕ್ತಿಯ ಚಿಂತನೆಗಳು ಎಲ್ಲರನ್ನು ಸೆಳೆಯುತ್ತಿದ್ದವು. ಇದಕ್ಕೆ ನಾನು ಕೂಡ ಹೊರತಲ್ಲ. ಅವರನ್ನು ಕಳೆದುಕೊಂಡ ನೋವು ನನ್ನನ್ನು ಅಗಾಧವಾಗಿ ಕಾಡುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: ಅಜಾತಶತ್ರು ಅಸ್ತಂಗತ