ದಾವಣಗೆರೆ: ಬಂಡೀಪುರ ಅರಣ್ಯ ಪ್ರದೇಶದಲ್ಲಿರುವ ರೆಸಾರ್ಟ್‌ನಲ್ಲಿ ವಿಶ್ರಾಂತಿ ಹೆಸರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಎಸಗುತ್ತಿದ್ದಾರೆ. ರೆಸಾರ್ಟ್ ನಲ್ಲಿ ಸಿದ್ದರಾಮಯ್ಯ ಹಣದ ಬಂಡಲ್ ಕಟ್ಟುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೂರಿದರು.

ತಾಲೂಕಿನ ಅಣಜಿ ಗ್ರಾಮದಲ್ಲಿ ಶನಿವಾರ ಜೆಡಿಎಸ್ ವಿಕಾಸಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಪರಿಜ್ಞಾನವಿದ್ದರೆ ತಕ್ಷಣವೇ ಮುಖ್ಯಮಂತ್ರಿಗಳ ಹಿಂದೆ ಒಂದು ತಂಡವನ್ನು ಬಿಡಬೇಕು. ರೆಸಾರ್ಟ್‌ನಲ್ಲಿ ಈಗ ಹಣ ಎಣಿಸುವ ಕೆಲಸ ನಡೆದಿದೆ. ಹಣ ಯಾವ ರೀತಿ ಗಳಿಸಬೇಕೆಂಬ ಚರ್ಚೆ ನಡೆಯುತ್ತಿದೆ. ಕೆಲವರಿಗೆ ಆಮಿಷವೊಡ್ಡಲಿಕ್ಕೆ, ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳೂ ನಡೆದಿವೆ.

ರೆಸಾರ್ಟ್ ಬಳಿ ಚುನಾವಣಾ ಆಯೋಗ ತಂಡವನ್ನು ಬಿಟ್ಟಲ್ಲಿ ಕೋಟ್ಯಂತರ ರು. ಜಪ್ತಿ ಮಾಡಬಹುದು. ಆದರೆ, ಆಯೋಗವು ಅದನ್ನು ಮಾಡುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ನಡೆಸುತ್ತಿರುವ ಅಕ್ರಮಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಲಿ ಎಂದು ಆಗ್ರಹಿಸಿದರು. ಉನ್ನತ ಅಧಿಕಾರಿಗಳನ್ನು ರೆಸಾರ್ಟ್ ಗೆ ಕರೆಸಿ ಕೊಂಡು ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.ಪೊಲೀಸ್ ಅಧಿಕಾರಿಗಳ ವಾಹನಗಳನ್ನೇ ಬಳಸಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಡುಗೆ ಪದಾರ್ಥ ಸಾಗಿಸಲಾಗುತ್ತಿದೆ ಎಂದು ಅವರು ದೂರಿದರು.