ಮೈಸೂರು ಮಹಾರಾಜರ ಆಡಳಿತಕ್ಕಿಂತ ಹೆಚ್ಚು ಅಭಿವೃದ್ಧಿ ಕೈಗೊಂಡಿದ್ದೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ವರ್ತನೆ ಗಮನಿಸಿದರೆ ಅವರಿಗೆ ಬುದ್ಧಿಭ್ರಮಣೆ ಆದಂತಿದೆ ಎಂದು ಲೇವಡಿ ಮಾಡಿದ್ದಾರೆ.

ಶಿರಸಿ : ಮೈಸೂರು ಮಹಾರಾಜರ ಆಡಳಿತಕ್ಕಿಂತ ಹೆಚ್ಚು ಅಭಿವೃದ್ಧಿ ಕೈಗೊಂಡಿದ್ದೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ವರ್ತನೆ ಗಮನಿಸಿದರೆ ಅವರಿಗೆ ಬುದ್ಧಿಭ್ರಮಣೆ ಆದಂತಿದೆ ಎಂದು ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಅರಸರ ಕಾಲದಲ್ಲಿ ಹುಟ್ಟಿಯೇ ಇರದ ಸಿದ್ದರಾಮಯ್ಯ, ಅವರಿಗಿಂತ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂದು ಸಿದ್ದರಾಮಯ್ಯ ಬೀಗುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಮೈಸೂರು ಸಂಸ್ಥಾನದ ಜನಪರ ಕಾರ್ಯಗಳನ್ನು ತಿಳಿದುಕೊಂಡು ಸಿಎಂ ಮಾತನಾಡಬೇಕು. ರಾಜ್ಯದ ಜನತೆಯ ಒಳಿತಿಗಾಗಿ ಅತೀ ಹೆಚ್ಚು ಕೆಲಸ ಮಾಡಿರುವ ಮೈಸೂರು ಸಂಸ್ಥಾನ ನೀರಾವರಿ, ವಿದ್ಯುತ್‌ ಕ್ಷೇತ್ರಕ್ಕೆ ಕೊಟ್ಟಕೊಡುಗೆ ಅಪಾರವಾದದ್ದು. ಆದರೆ, ಸಿದ್ದರಾಮಯ್ಯ ಸರ್ಕಾರದ ಬಹುದೊಡ್ಡ ಕೊಡುಗೆ ಸಾಲದ ದೊಡ್ಡ ಹೊರೆ ಎಂದು ಟೀಕಿಸಿದರು.

ದರಿದ್ರ ಸರ್ಕಾರ: ಭ್ರಷ್ಟಸರ್ಕಾರದಲ್ಲಿ ಜನರಿಗೆ, ಮಹಿಳೆಯರಿಗೆ ಭದ್ರತೆ ಇಲ್ಲ. ಅಧಿಕಾರಿಗಳು ತಮ್ಮ ಕೆಲಸ ಬಿಟ್ಟು ಸರ್ಕಾರದ ಏಜೆಂಟರಂತೆ ಕೆಲಸ ಮಾಡಿದರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇದೊಂದು ದರಿದ್ರ ಸರ್ಕಾರವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯೋಗಿ ಬಗ್ಗೆ ಕಿಡಿ: ಬಿಜೆಪಿ ಯಾತ್ರೆಗಳಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಪಾಲ್ಗೊಳ್ಳುತ್ತಿರುವುದು ವಿಪರಾರ‍ಯಸದ ಸಂಗತಿ. ಅವರ ರಾಜ್ಯದಲ್ಲಿಯೇ ಅಭಿವೃದ್ಧಿ ಮಾಡದವರು ಕರ್ನಾಟಕದಲ್ಲಿ ಪರಿವರ್ತನೆ ಮಾಡುವರೇ ಎಂದು ಟಾಂಗ್‌ ನೀಡಿದರು.

ಅನಂತ ಹೆಗಡೆ ಹಿಂದೂ ಅಲ್ಲ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಳಸುವ ಪದ ನೋಡಿದರೆ ಅವರು ಹಿಂದೂ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ-ಮುಸ್ಲಿಮರನ್ನು ಒಡೆಯುವ ಮಾತುಗಳನ್ನು ಆಡುವುದು ನೋಡಿದರೆ ದೇವರೇ ಕಾಪಾಡಬೇಕು.

- ಎಚ್‌.ಡಿ. ಕುಮಾರಸ್ವಾಮಿ

ಅಧಿಕಾರಿಗಳ ಜೊತೆ ವಾಸ್ತವ್ಯಹೂಡಿ ಸಮಸ್ಯೆಗಳಿಗೆ ಪರಿಹಾರ

ರಾಜ್ಯದ ಜನತೆ ಅಧಿಕಾರ ನೀಡಿದರೆ ಪ್ರತಿ ಜಿಲ್ಲೆಯಲ್ಲಿಯೂ ಅಧಿಕಾರಿಗಳೊಂದಿಗೆ ವಾರಗಳ ಕಾಲ ವಾಸ್ತವ್ಯ ಮಾಡಿ, ಚರ್ಚಿಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುತ್ತೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ‘ಕುಮಾರಸ್ವಾಮಿ-ಆತ್ಮೀಯ ಸಂವಾದ’ ಕಾರ್ಯಕ್ರಮದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಸಂವಾದ ನಡೆಸಿದ ಕುಮಾರಸ್ವಾಮಿ, 20 ತಿಂಗಳ ಕಾಲ ಆಡಳಿತ ನಡೆಸುವಾಗ ಅನುಭವ ಕೊರತೆ ಇತ್ತು. ಅಂದು ಕಡಿಮೆ ಸಮಯ ಸಿಕ್ಕಿದ್ದರಿಂದ ರಾಜ್ಯದ ಸಮಸ್ಯೆ ಆಲಿಸುವಲ್ಲಿಯೇ ಕಾಲ ಕಳೆಯಬೇಕಾಯಿತು. ಆದರೆ ಇದೀಗ ಪ್ರತಿ ಜಿಲ್ಲೆಯ ಸಮಸ್ಯೆಗಳ ಅರಿವು ನನಗಿದೆ ಎಂದರು. ಸರ್ಕಾರ ಹಾಗೂ ಜನರ ನಡುವಿನ ಅಂತರ ಕಡಿಮೆ ಮಾಡುವ ಕಾರ್ಯ ಮಾಡುತ್ತೇನೆ. ನೀವೇ ಮುಖ್ಯಮಂತ್ರಿಗಳು. ನಿಮಗೆ ಸಮಸ್ಯೆ ಆದಾಗ ನನ್ನ ಬಳಿ ನೇರವಾಗಿ ಮಾತನಾಡುವ ವಾತಾವರಣ ಸೃಷ್ಟಿಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಮಕೃಷ್ಣ ಹೆಗಡೆ ಪುತ್ಥಳಿಗೆಮಾಲಾರ್ಪಣೆ, ಬೈಕ್‌ ರಾರ‍ಯಲಿ

‘ನಮ್ಮೊಂದಿಗೆ ಕುಮಾರಸ್ವಾಮಿ’ ಆತ್ಮೀಯ ಸಂವಾದದ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಬೈಕ್‌ ರಾರ‍ಯಲಿ ಮೂಲಕ ನಗರ ಸಂಚಾರ ನಡೆಸಿದ ಅವರು ವಿಕಾಸವಾಹಿನಿ ಬಸ್‌ನಲ್ಲಿ ನಿಂತು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತೋಟಗಾರ್‌ ಕಲ್ಯಾಣ ಮಂಟಪಕ್ಕೆ ಆಗಮಿಸಿದರು.