ಚೆಕ್‌ಪೋಸ್ಟ್ಗಳಲ್ಲಿ ಒಬ್ಬರು ಇನ್ಸ್ಪೆಕ್ಟರ್ ಮತ್ತು ಮೂರ್ನಾಲ್ಕು ರೌಡಿಗಳನ್ನು ಬಿಟ್ಟು ಹಣ ವಸೂಲಿ ಮಾಡುವುದನ್ನು 15 ದಿನದಲ್ಲಿ ನಿಲ್ಲಿಸಬೇಕು. ಒಂದು ವೇಳೆ 15 ದಿನದಲ್ಲಿ ನಿಲ್ಲಿಸಲಿದ್ದರೆ, ಜೆಡಿಎಸ್ ಕಾರ್ಯಕರ್ತರು ವಸೂಲಿಗೆ ಕೇಂದ್ರಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು(ನ.12): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಸಾರಿಗೆ ಇಲಾಖೆ ಚೆಕ್‌ಪೋಸ್ಟ್ಗಳನ್ನು ರದ್ದು ಮಾಡದ ರಾಜ್ಯ ಸರ್ಕಾರವು ಓರ್ವ ಇನ್ಸ್‌ಪೆಕ್ಟರ್ ಮತ್ತು ರೌಡಿಗಳನ್ನು ಬಿಟ್ಟು ತಿಂಗಳಿಗೆ 200 ಕೋಟಿ ರೂ. ವಸೂಲಿ ಮಾಡುತ್ತಿದೆ. ಈ ವಸೂಲಿ ದಂಧೆ 15 ದಿನದಲ್ಲಿ ನಿಲ್ಲಿಸಬೇಕು. ಇಲ್ಲದಿದ್ದರೆ, ಚೆಕ್‌ಪೋಸ್ಟ್‌ಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಗಂಭೀರ ಆರೋಪ ಮಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಶೇಷಾದ್ರಿಪುರನಲ್ಲಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವು ರಾಜ್ಯಗಳು ಜಿಎಸ್‌ಟಿ ಜಾರಿಯಾದ ನಂತರ ಸಾರಿಗೆ ಇಲಾಖೆ ಚೆಕ್‌ಪೋಸ್ಟ್ಗಳನ್ನು ರದ್ದುಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಚೆಕ್‌ಪೋಸ್ಟ್ ರದ್ದುಗೊಳಿಸದೆ ಜನರಿಂದ ಹಣ ವಸೂಲಿಗೆ ನಿಂತಿದೆ. ಪ್ರತಿನಿತ್ಯ 30-40 ಲಕ್ಷದಂತೆ ತಿಂಗಳಿಗೆ 200 ಕೋಟಿ ರೂ. ವಸೂಲಿ ಮಾಡುತ್ತಿದೆ. ಮುಂದಿನ ಚುನಾವಣೆಗೆ ಸಾವಿರಾರು ಕೋಟಿ ರು. ದರೋಡೆಗೆ ರಾಜ್ಯ ಸರ್ಕಾರವು ಮುಂದಾಗಿದೆ ಎಂದು ಕಿಡಿಕಾರಿದರು.

ಚೆಕ್‌ಪೋಸ್ಟ್ಗಳಲ್ಲಿ ಒಬ್ಬರು ಇನ್ಸ್ಪೆಕ್ಟರ್ ಮತ್ತು ಮೂರ್ನಾಲ್ಕು ರೌಡಿಗಳನ್ನು ಬಿಟ್ಟು ಹಣ ವಸೂಲಿ ಮಾಡುವುದನ್ನು 15 ದಿನದಲ್ಲಿ ನಿಲ್ಲಿಸಬೇಕು. ಒಂದು ವೇಳೆ 15 ದಿನದಲ್ಲಿ ನಿಲ್ಲಿಸಲಿದ್ದರೆ, ಜೆಡಿಎಸ್ ಕಾರ್ಯಕರ್ತರು ವಸೂಲಿಗೆ ಕೇಂದ್ರಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ರಾಜ್ಯವನ್ನು ರೌಡಿಗಳಿಂದ ನಡೆಸಲು ನಿರ್ಧರಿಸಿದಂತೆ ಕಾಣುತ್ತಿದೆ. ಚೆಕ್‌ ಪೋಸ್ಟ್ಗಳಲ್ಲಿ ನಡೆಯುತ್ತಿರುವ ದಂಧೆಯ ಬಗ್ಗೆ ಸಾರಿಗೆ ಸಚಿವರಿಗೆ ಮತ್ತು ಗೃಹ ಸಚಿವರಿಗೆ ಮಾಹಿತಿ ಇದೆ. ಆದರೂ ಅವರು ಸುಮ್ಮನೆ ಇದ್ದಾರೆ. ಪ್ರತಿ ಚೆಕ್‌ಪೋಸ್ಟ್‌ಗಲ್ಲಿ ಕಿಲೋ ಮೀಟರ್‌ಗಟ್ಟಲೇ ವಾಹನ ನಿಂತಿರುತ್ತವೆ. ತನಿಖೆ ಸಂಸ್ಥೆಗಳು ಏನು ಮಾಡುತ್ತಿವೆ ಎಂಬುದು ಯಕ್ಷಪ್ರಶ್ನೆಯಾಗಿದೆ. ತನಿಖಾ ಸಂಸ್ಥೆಗಳು ಹಾಗೂ ಸಚಿವರು ಸುಮ್ಮನಿದ್ದರೂ ಯಾವು ಸುಮ್ಮನೆ ಇರುವುದಿಲ್ಲ. ಹಣ ವಸೂಲಿಗೆ ರಶೀದಿ ಪಡೆಯುತ್ತಿದ್ದರೆ, ಆ ಮೊತ್ತವು ಸರ್ಕಾರದ ಖಜಾನೆಗೆ ಸೇರುತ್ತದೆ ಎಂದು ತಿಳಿದುಕೊಳ್ಳಬಹುದಿತ್ತು. ಆದರೆ, ಅನಧಿಕೃತವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಇದೆಲ್ಲಾ ಮುಖ್ಯಮಂತ್ರಿಗಳ ಕುಮ್ಮಕ್ಕು ಇಲ್ಲದೆ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

(ಕನ್ನಡಪ್ರಭ)