ಎಷ್ಟು ಸಾವಿರ ಕೋಟಿ ಇದ್ದರೂ ರೈತರ ಸಾಲ ಮನ್ನಾ ಮಾಡುತ್ತೇನೆ: ಎಚ್ ಡಿಕೆ

HDK Assurance to loan waive off
Highlights

ನನ್ನ ಮೇಲಿನ ದೊಡ್ಡ ಮಟ್ಟದ ನಿರೀಕ್ಷೆಗಳಿರುವುದರಿಂದ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಜಾರಿಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಉಸಿರಾಡಲು ಸಹ ಸಮಯ ನೀಡುತ್ತಿಲ್ಲ. ಗಡುವು ಮುಗಿದಿದ್ದು, ಸ್ಪಷ್ಟವಾಗಿ ನಿಲುವು ಪ್ರಕಟಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ರೈತರ ಸಾಲ ಮನ್ನಾ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಾನು ಸಾಲಮನ್ನಾ ಬಗ್ಗೆ ನನ್ನ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಎಚ್ ಡಿಕೆ ಹೇಳಿದ್ದಾರೆ.

 ಬೆಂಗಳೂರು (ಜೂ. 20):  ಸಾಲಮನ್ನಾ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರೈತರ ಸಾಲ ಎಷ್ಟೇ ಸಾವಿರ ಕೋಟಿ ರು. ಇದ್ದರೂ ಮನ್ನಾ ಮಾಡಲು ಬದ್ಧವಾಗಿದ್ದೇನೆ. ಅತ್ಯಂತ ವೈಜ್ಞಾನಿಕ ಮಾನದಂಡಗಳನ್ನು ರೂಪಿಸಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದೂ ಅವರು ಸ್ಪಷ್ಪಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಸಾಲ ಮನ್ನಾ ಘೋಷಣೆಯಿಂದ ತಾವು ಹಿಂದೆ ಸರಿಯುವುದಿಲ್ಲ. ಆದರೆ, ಹಣ ಹೊಂದಾಣಿಕೆಗೆ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಸಮಯ ಬೇಕಾಗುತ್ತದೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವುದು ಹೇಗೆ? ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಹೇಗೆ? ಸೋರಿಕೆ ತಡೆ ಹೇಗೆ ಎಂಬುದಕ್ಕೆ ಪರಿಹಾರ ಕಂಡುಹಿಡಿಯಲು ಕಾಲಾವಕಾಶದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಜನತೆಗೆ ಹೊರೆಯಾಗದಂತೆ ಆರ್ಥಿಕ ಶಿಸ್ತಿನಿಂದ ರೈತರ ಸಾಲಮನ್ನಾ ಮಾಡಲಾಗುವುದು. ವೈಜ್ಞಾನಿಕವಾಗಿ ಸಾಲಮನ್ನಾದ ಪ್ರಯೋಜನ ರೈತರಿಗೆ ತಲುಪುವಂತೆ ಮಾರ್ಗಸೂಚಿ ರೂಪಿಸಲಾಗುತ್ತಿದೆ. ಅನಗತ್ಯ ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ನಾಡಿನ ಜವಾಬ್ದಾರಿಯನ್ನು ತೆಗೆದುಕೊಂಡ ಬಳಿಕ ನನ್ನ ಮೇಲಿನ ದೊಡ್ಡ ಮಟ್ಟದ ನಿರೀಕ್ಷೆಗಳಿರುವುದರಿಂದ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಜಾರಿಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಉಸಿರಾಡಲು ಸಹ ಸಮಯ ನೀಡುತ್ತಿಲ್ಲ. ಗಡುವು ಮುಗಿದಿದ್ದು, ಸ್ಪಷ್ಟವಾಗಿ ನಿಲುವು ಪ್ರಕಟಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ರೈತರ ಸಾಲ ಮನ್ನಾ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಆದರೆ, ಸಾಲಮನ್ನಾ ವಿಚಾರದಲ್ಲಿ ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಎರಡು ದಿನಗಳಲ್ಲಿ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.

ಜುಲೈ ಮೊದಲ ವಾರದಲ್ಲಿ ಬಜೆಟ್‌ ಮಂಡಿಸುವ ಉದ್ದೇಶ ಹೊಂದಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಬಜೆಟ್‌ ಅಧಿವೇಶನದಲ್ಲಿ ರೈತರ ಸಾಲಮನ್ನಾದ ಬಗ್ಗೆ ರಾಜ್ಯದ ಜನತೆಯ ಮುಂದೆ ಮಾಹಿತಿ ಇಡಲಾಗುವುದು. ನೀತಿ ಆಯೋಗದ ಸಭೆಯಲ್ಲಿ ಮತ್ತು ಪ್ರಧಾನಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ವೇಳೆ ಕೇಂದ್ರದ ಸಹಕಾರ ಕೋರಿರುವುದಕ್ಕೂ ಕಾರಣ ಇದೆ.

ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳ ಆರ್ಥಿಕ ಪರಿಹಾರಕ್ಕಾಗಿ ಬ್ಯಾಂಕ್‌ಗಳಿಗೆ ಎರಡು ಲಕ್ಷ ಕೋಟಿ ರು. ಮೌಲ್ಯದ ಬಾಂಡ್‌ ಸಂಗ್ರಹ ಮಾಡುವಂತೆ ಸೂಚನೆ ನೀಡಲು ಮುಂದಾಗಿದೆ. ಇದರಲ್ಲಿ ಶೇ.25ರಷ್ಟುಮೊತ್ತವನ್ನು ರೈತರಿಗಾಗಿ ವಿನಿಯೋಗಿಸುವಂತೆ ಮನವಿ ಮಾಡಿದ್ದೇನೆ. ಹಾಗಂತ ಕೇಂದ್ರವು ಸಹಕಾರ ನೀಡಲಿದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿಲ್ಲ. ನನ್ನ ಶ್ರಮವನ್ನು ಹಾಕುತ್ತಿದ್ದೇನೆ ಅಷ್ಟೆಎಂದರು.

ಸಾಲಮನ್ನಾ ಯೋಜನೆಯಿಂದ ದಕ್ಷಿಣ ಕರ್ನಾಟಕದ ರೈತರಿಗೆ ಮತ್ತು ಉತ್ತರ ಕರ್ನಾಟಕದ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ವಿಜಯಪುರ, ಬೆಳಗಾವಿ, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ 6ರಿಂದ 7ಸಾವಿರ ಕೋಟಿ ರು. ರೈತರ ಸಾಲ ಇದ್ದರೆ, ಮಂಡ್ಯದಲ್ಲಿ ಒಂದೂವರೆ ಸಾವಿರ ಕೋಟಿ ರು., ಹಾಸನದಲ್ಲಿ 1,300 ಕೋಟಿ ರು.ನಂತೆ ಸಾಲ ಇದೆ. ಹೀಗಾಗಿ ಉತ್ತರ ಕರ್ನಾಟಕದ ರೈತರಿಗೆ ಸಾಲಮನ್ನಾದ ಅನುಕೂಲವಾಗಲಿದೆ. ಒಂದು ಬಾರಿ ಸಾಲಮನ್ನಾ ಮಾಡಲೇಬೇಕಾಗಿದ್ದು, ನಂತರ ಕೃಷಿ ಪದ್ಧತಿಯನ್ನು ಬದಲಿಸಬೇಕಿದೆ. ಮುಂದಿನ ಮೂರು ತಿಂಗಳಲ್ಲಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನು ತೋರಿಸಲಾಗುವುದು. ಸಮ್ಮಿಶ್ರ ಸರ್ಕಾರದ ದೂರದೃಷ್ಟಿಯ ಚಿತ್ರಣ ಜನರಿಗೆ ಲಭ್ಯವಾಗಲಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

loader