"ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶರಾದ ಪದ್ಮ ಪ್ರಸಾದ್ ಅವರು ದಾಖಲೆಗಳ ಪರಿಶೀಲನೆ, ವಾದ-ಪ್ರತಿವಾದ ಆಲಿಸಿ ತಮ್ಮಯ್ಯನವರ ಆಯ್ಕೆ ಸಿಂಧುವಲ್ಲ ಎಂದು ಹೇಳಿದ್ದು, ಮರು ಚುನಾವಣೆಗೆ ಆದೇಶಿಸಿದ್ದಾರೆ"
ಚಿಕ್ಕಮಗಳೂರು(ಅ. 08): ಇಲ್ಲಿಯ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಚ್.ಡಿ.ತಮ್ಮಯ್ಯನವರ ಸದಸ್ಯತ್ವ ರದ್ದಾಗಿದೆ. ಇವರ ಗೆಲುವು ಅಕ್ರಮ ಎಂದು ಆರೋಪಿಸಿ ಎದುರಾಳಿ ಅಭ್ಯರ್ಥಿ ಮಧು ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಬಿಜೆಪಿ ಸದಸ್ಯ ತಮ್ಮಯ್ಯನವರ ಗೆಲವು ಸಿಂಧುವಲ್ಲ ಎಂದು ಕೋರ್ಟ್ ಅಭಿಪ್ರಾಯಕ್ಕೆ ಬಂದಿದ್ದು, ಇವರ ನಗರ ಸಭೆ ಸದಸ್ಯತ್ವವನ್ನು ರದ್ದುಗೊಳಿಸಿದೆ.
2013ರಲ್ಲಿ ನಡೆದಿದ್ದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ 2ನೇ ವಾರ್ಡ್'ನಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮಯ್ಯ ಸ್ಪರ್ಧಿಸಿದ್ದರು. ಚುನಾವಣೆ ವೇಳೆ 2 ಮತಗಳಿಂದ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದ್ದರು. ಆದ್ರೆ ಇದನ್ನ ಪ್ರಶ್ನಿಸಿ ಸೋತ ಅಭ್ಯರ್ಥಿ ಸಿ.ಸಿ.ಮಧು ಅವರು ಕೋರ್ಟ್ ಮೆಟ್ಟಿಲೇರಿದ್ದರು.. ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶರಾದ ಪದ್ಮ ಪ್ರಸಾದ್ ಅವರು ದಾಖಲೆಗಳ ಪರಿಶೀಲನೆ, ವಾದ-ಪ್ರತಿವಾದ ಆಲಿಸಿ ತಮ್ಮಯ್ಯನವರ ಆಯ್ಕೆ ಸಿಂಧುವಲ್ಲ ಎಂದು ಹೇಳಿದ್ದು, ಮರು ಚುನಾವಣೆಗೆ ಆದೇಶಿಸಿದ್ದಾರೆ ಎಂದು ಮಧು ಪರ ವಕೀಲ ಹಳೆಕೋಟೆ ತೇಜಸ್ವಿ ತಿಳಿಸಿದ್ದಾರೆ.
ಇನ್ನು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್.ಡಿ.ತಮ್ಮಯ್ಯ ಅಧಿಕಾರಿಗಳು ಸಮರ್ಪಕ ದಾಖಲೆ ಒದಗಿಸಿಲ್ಲ.. ಹಾಗೂ ಏಕಪಕ್ಷೀಯವಾಗಿ ತೀರ್ಪು ಹೊರ ಬಂದಿದ್ದು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಶಾಸಕ ಸಿ.ಟಿ.ರವಿ ಪರಮಾತ್ಮರಲ್ಲಿ ಒಬ್ಬರಾಗಿರುವ ಎಚ್.ಡಿ.ತಮ್ಮಯ್ಯ ತಮ್ಮ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
- ಕಿರಣ್ ಆಲ್ದೂರು, ಸುವರ್ಣನ್ಯೂಸ್, ಚಿಕ್ಕಮಗಳೂರು
