ಬೆಂಗಳೂರು[ಜು.20]: ‘ಝೀರೋ ಟ್ರಾಫಿಕ್’ ಎಂದರೇನು ಎಂದು ಸ್ಪೀಕರ್ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್ ಅವರಿಗೆ ಗೊತ್ತು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹಾಸ್ಯ ಚಟಾಕಿ ಹಾರಿಸಿದ ಘಟನೆ ಶುಕ್ರವಾರ ವಿಧಾನಸೌಧದಲ್ಲಿ ನಡೆಯಿತು. ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಅತೃಪ್ತ ಶಾಸಕರು ವಿಧಾನಸೌಧಕ್ಕೆ ಬರಲು ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಿದ್ದೇಕೆ ಎಂದು ನಗರ ಪೊಲೀಸ್ ಆಯುಕ್ತರನ್ನು ಸದನಕ್ಕೆ ಕರೆಸಿ ಕೇಳಬೇಕು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಆಗ ಸ್ಪೀಕರ್ ಝೀರೋ ಟ್ರಾಫಿಕ್ ಎಂದರೇನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರೇವಣ್ಣ, ಅದು ನಮ್ಮ ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಗೊತ್ತು ಎಂದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ ಸಭಾಧ್ಯಕ್ಷರು, ರೇವಣ್ಣ ಅವರು ಪ್ರಸ್ತಾಪಿಸಿದ ವಿಷಯ ಸರಿ ಇದೆ. ಸಾಮಾನ್ಯವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಇರುತ್ತದೆ. ನಮಗಂತೂ ಮಾಮೂಲಿ ಟ್ರಾಫಿಕ್ಕೇ ಇರುತ್ತೆ. ಯಾವ ಘನಕಾರ್ಯ ಮಾಡಿದ್ದಾರೆ ಅಂತ ಅತೃಪ್ತರಿಗೆ ಈ ಸೌಲಭ್ಯ ಕೊಟ್ಟರು ಎನ್ನುವುದನ್ನು ಮುಖ್ಯಮಂತ್ರಿ ಅವರನ್ನೇ ಕೇಳಬೇಕು ಎಂದರು.

ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ತುಂಬಾ ಒಳ್ಳೆಯ ಐತಿಹಾಸಿಕ ನಿರ್ಣಯ ಮಾಡಿದ್ದಾರೆ ಅಂತ ರಾಜ್ಯಪಾಲರೇ ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕೊಡಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ನಂತರ ಸ್ಪೀಕರ್ ರಮೇಶ್ ಕುಮಾರ್, ಆ ಎಲ್ಲ ಅತೃಪ್ತರ ಫೋಟೋ ಫ್ರೇಮ್ ಹಾಕಿಸಿ ಕೊಡಿ, ನಿಮಗೆ ಪುಣ್ಯಬರುತ್ತೆ. ನಮ್ಮ ಮನೆಯಲ್ಲಿ ಇರಿಸಿಕೊಳ್ಳುತ್ತೇವೆ ಎಂದರು.