ಕಲಾಪ ಸಲಹಾ ಸಮಿತಿ ಸಭೆಯಲ್ಲಿ ರೇವಣ್ಣ ನಗೆಪಾಟಲುಅಮವಾಸ್ಯೆಗೆ ಕಲಾಪ ಬೇಡ ಎಂದು ರೇವಣ್ಣ ಪಟ್ಟುಅಧಿವೇಶನ ವಿಸ್ತರಾಣೆಗೆ ಬೇಡ ಎಂದು ಗೋಗರೆದ ರೇವಣ್ಣಅಧಿವೇಶನ ವಿಸ್ತರಿಸಲು ಒಪ್ಪಿಗೆ ನೀಡಿದ ಸಿಎಂರೇವಣ್ಣ ಸ್ಥಿತಿ ನೋಡಿ ಗಹಗಹಿಸಿ ನಕ್ಕ ಸದಸ್ಯರು
ಬೆಂಗಳೂರು(ಜು.12): ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಇಂದು ಕಲಾಪ ಸಲಹಾ ಸಮಿತಿ ಸದಸ್ಯರ ಮುಂದೆ ನಗೆಪಾಟಲಿಗೆ ಈಡಾದ ಘಟನೆ ನಡೆದಿದೆ.
ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸುವ ಕುರಿತು ಇಂದು ಸ್ಪೀಕರ್ ಕೊಠಡಿಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ಸೇರಿತ್ತು. ಅಧಿವೇಶನವನ್ನು ವಿಸ್ತರಿಸಲು ಎಲ್ಲ ಸದಸ್ಯರು ಸಹಮತ ಕೂಡ ಸೂಚಿಸಿದರು. ಆಗ ಎದ್ದು ನಿಂತ ರೇವಣ್ಣ, ಸ್ಪೀಕರ್ ಅವರನ್ನು ಉದ್ದೇಶಿಸಿ ‘ಬುದ್ದಿ ನಾಳೆ ಅಮವಾಸ್ಯೆ ಇದೆ, ಹೀಗಾಗಿ ಕಲಾಪ ನಡೆಸುವುದು ಬೇಡ’ ಎಂದು ಮನವಿ ಮಾಡಿದರು.
ಅಲ್ಲದೇ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ‘ನೀವೂ ಅಮಾವಸ್ಯೆ ಪೂಜೆ ಮಾಡಿ’ ಎಂದು ರೇವಣ್ಣ ಮನವಿ ಮಾಡಿದರು. ಕಲಾಪ ಬೇಡ ಎಂದು ರೇವಣ್ಣ ಪಟ್ಟು ಹಿಡಿದಿದ್ದಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ತಲೆ ಚಚ್ಚಿಕೊಂಡ ಪ್ರಸಂಗ ಕೂಡ ನಡೆಯಿತು.
ಇದಕ್ಕೆ ನಗುತ್ತಲೇ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಿಎಂ ಗುಂಡೂರಾವ್ ಮಹಾಲಯ ಅಮವಾಸ್ಯೆ ದಿನ ಹುಟ್ಟಿ ಸಿಎಂ ಪಟ್ಟ ಏರಲಿಲ್ಲವೇ? ಎಂದು ಪ್ರಶ್ನಿಸಿದರು.
ಕೊನೆಯಲ್ಲಿ ಸಿಎಂ ಕಲಾಪವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲು ಒಪ್ಪಿಗೆ ನೀಡುತ್ತಿದ್ದಂತೇ ರೇವಣ್ಣ ಗಂಟು ಮುಖ ಹಾಕಿಕೊಂಡು ಸುಮ್ಮನೆ ಕುಳಿತುಕೊಂಡರು. ರೇವಣ್ಣ ಅವರ ಸ್ಥಿತಿ ಕಂಡು ಸಮಿತಿ ಸದಸ್ಯರು ಗಹಗಹಿಸಿ ನಕ್ಕರು.
