ಹಾಸನ [ಜು. 15] :  ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಎಲ್ಲಾ ಪ್ರಹಸನಗಳಿಗೂ ಕೂಡ ಸಚಿವ ಎಚ್.ಡಿ. ರೇವಣ್ಣ ಕಾರಣ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ. 

ಸಮ್ಮಿಶ್ರ ಸರ್ಕಾರದಲ್ಲಿ ಸ್ಥಿತಿಯ ಹಿಂದೆ ಲೋಕೋಪಯೋಗಿ ಸಚಿವ ರೇವಣ್ಣ ಇದ್ದಾರೆ. ನಾನು ಈ ಹಿಂದೆಯೇ ಭವಿಷ್ಯ ನುಡಿದಿದ್ದೆ. ಜೆಡಿಎಸ್ ಜೊತೆಗಿನ ಮೈತ್ರಿ ಕಾಂಗ್ರೆಸಿಗೆ ಹಾನಿಯಾಗುತ್ತೆ ಎಂದು ಹಿಂದೆಯೇ ಹೇಳಿದ್ದೆ. ಇದೇ ಕಾರಣದಿಂದಲೇ ನಾನು ಕಾಂಗ್ರೆಸ್ ನಿಂದ ಹೊರಬಂದೆ ಎಂದು ಹಾಸನದಲ್ಲಿ ಮಾತನಾಡಿದ ಎ.ಮಂಜು ಹೇಳಿದ್ದಾರೆ. 

ರೇವಣ್ಣ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು,  ಸುಪ್ರೀಂ ಆದೇಶ ಗಾಳಿಗೆ ತೂರಿ PWD ಇಂಜಿನಿಯರ್ಸ್ ಗೆ ಬಡ್ತಿ ಮತ್ತು  ವರ್ಗಾವಣೆ ಮಾಡಿದ್ದಾರೆ.  ಆದ್ದರಿಂದ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಇದಕ್ಕೆ ತಡೆ ಒಡ್ಡಬೇಕು ಎಂದು ಮಂಜು ಹೇಳಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪ್ಪ ಮಕ್ಕಳ ಜೊತೆ ಹೋದರೆ ಬೀದಿಗೆ ಬರುತ್ತೀರಿ ಎಂದು ಯಡಿಯೂರಪ್ಪ ಸಹ ಕೈ ನಾಯಕರಿಗೆ ಹೇಳಿದ್ದರು. ಅದರಂತೆ ಡಿಕೆಶಿ ಮುಂಬೈನಲ್ಲಿ ಬೀದಿಗೆ ಬಂದರು ಎಂದು ಮಂಜು ವ್ಯಂಗ್ಯವಾಡಿದರು. 

ಈ ಎಲ್ಲಾ ಪ್ರಹಸನಗಳ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.