ಬೆಳಗಾವಿ, (ಸೆ.15): ಇಂದು (ಶನಿವಾರ) ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಿಎಂ ಕುಮಾರಸ್ವಾಮಿಯವರ ಜನತಾ ದರ್ಶನ ಕಾರ್ಯಕ್ರಮ ಬೆಳಗಾವಿಗೆಯಲ್ಲಿ ನಡೆಯಲಿದೆ. 

ಇಂದು ಬೆಳಗಾವಿಯಲ್ಲಿ ನಡೆಯಲಿರುವ ಕರ್ನಾಟಕ ಲಾ ಸೊಸೈಟಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಆಗಮಿಸುತ್ತಿದ್ದು, ಸಿಎಂ ಕುಮಾರಸ್ವಾಮಿ ಅಲ್ಲಿಗೆ ತೆರಳ್ತಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿನ ನಡೆಯಬೇಕಿದ್ದ ಸಿಎಂ ಅವರ ಜನತಾ ದರ್ಶನವನ್ನು ರದ್ದುಗೊಳಿಸಲಾಗಿದೆ,

ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಬೆಳಗಾವಿಗೆ ತೆರಳುತ್ತಿದ್ದು, ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ 5 ಗಂಟೆವರೆಗೂ ಜನತಾ ದರ್ಶನ ನಡೆಸಿ, ಉತ್ತರ ಕರ್ನಾಟಕ  ಜನರ ಸಮಸ್ಯೆ ಆಲಿಸಲಿದ್ದಾರೆ. 

ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರು ಮುಂಚಿತವಾಗಿಯೇ ಮಧ್ಯಾಹ್ನ 1 ಗಂಟೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ತಿಳಿಸಿದ್ದಾರೆ.

 ಹೆಸರು ನೋಂದಣಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ವಿಶೇಷ ತಂಡ ಆಗಮಿಸಲಿದ್ದು, ಅಹವಾಲು ಸಲ್ಲಿಸುವ ಸಾರ್ವಜನಿಕರ ಹೆಸರುಗಳನ್ನು ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.