ಮೈತ್ರಿ ಸರ್ಕಾರ ಪತನ; ರಾಜಕೀಯ ನಿವೃತ್ತಿ ಪಡೆಯಲು ಎಚ್‌ಡಿಕೆ ನಿರ್ಧಾರ?
ಎಚ್‌ಡಿಕೆ ರಾಜಕೀಯ ನಿವೃತ್ತಿ ಇಂಗಿತ | ಪ್ರಸಕ್ತ ರಾಜಕೀಯ ವಿದ್ಯಮಾನ ಕುರಿತು ಬೇಸರ ವ್ಯಕ್ತಪಡಿಸಿದ ಮಾಜಿ ಸಿಎಂ | ಈಗ ಬರೀ ದ್ವೇಷ, ಕುತಂತ್ರ, ಜಾತಿ ಆಧರಿತ ರಾಜಕಾರಣ ನಡೆಯುತ್ತಿದೆ | ಇಂಥ ಸ್ಥಿತಿಯಲ್ಲಿ ರಾಜಕೀಯದಿಂದಲೇ ಹಿಂದೆಸರಿಯಬೇಕೆಂದಿದ್ದೇನೆ ಎಂದ ಎಚ್‌ಡಿಕೆ
ಹಾಸನ (ಆ. 04): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತಿರುವುದಾಗಿ ತಿಳಿಸಿರುವ ಅವರು, ಇಂಥ ವ್ಯವಸ್ಥೆಯಿಂದ ನಾನು ಹಿಂದೆ ಸರಿಯಬೇಕೆಂದು ಯೋಚಿಸಿದ್ದೇನೆ ಎಂದಿದ್ದಾರೆ.
ನನಗೆ ಗೂಟದ ಕಾರಿನಲ್ಲೇ ಓಡಾಡಬೇಕೆಂಬ ಹುಚ್ಚಿಲ್ಲ. ಈಗ ಬರೀ ದ್ವೇಷ, ಕುತಂತ್ರ, ಜಾತಿ ಆಧರಿತ ರಾಜಕಾರಣ ನಡೆಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾನು ರಾಜಕೀಯದಿಂದಲೇ ದೂರ ಸರಿಯಬೇಕೆಂದುಕೊಂಡಿದ್ದೇನೆ ಎಂದುಹೇಳಿದರು.
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಮುಖ್ಯಮಂತ್ರಿ ಸ್ಥಾನ, ಗೂಟದ ಕಾರು ಇದ್ದರೆ ಮಾತ್ರ ಜನಸೇವೆ ಮಾಡಬೇಕೆಂದೇನೂ ಇಲ್ಲ. ಅಧಿಕಾರ ಇಲ್ಲದೆಯೂ ಜನರ ಬಳಿ ಇರಬಹುದು. ಆದರೆ ಇಂದು ಜಾತಿ, ದ್ವೇಷ ಮತ್ತು ಕುತಂತ್ರ ರಾಜಕಾರಣ ನಡೆಯುತ್ತಿದೆ. ಇದನ್ನು ಯಾವ ಪಕ್ಷದವರು ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅವಲೋಕನ ಮಾಡಿ ತೀರ್ಮಾನಿಸಬೇಕು ಎಂದು ಇದೇ ವೇಳೆ ಹೇಳಿದರು.
ಈಗ ಪವಿತ್ರ ಸರ್ಕಾರ:
ಹಿಂದೆ ನಮ್ಮದು ಪಾಪದ ಸರ್ಕಾರ ಅಧಿಕಾರದಲ್ಲಿತ್ತು. ಈಗ ಪವಿತ್ರ ಸರ್ಕಾರ ನಡೆಸುತ್ತಿದ್ದಾರೆ, ನಡೆಸಲಿ ಬಿಡಿ, ಯಾರು ಯಾರನ್ನು ಪವಿತ್ರ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಬಿಜೆಪಿ ಸರ್ಕಾರದ ಕುರಿತು ಪರೋಕ್ಷವಾಗಿ ವ್ಯಂಗ್ಯವಾಡಿದರು. ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ ಯಾವ್ಯಾವ ಅಧಿಕಾರಿಗಳನ್ನು ಒಂದೇ ದಿನದಲ್ಲಿ ಎರಡೆರಡು ಕಡೆ ವರ್ಗಾವಣೆ ಮಾಡಲಾಗಿದೆ ಎಂಬುದು ಗೊತ್ತಿದೆ. ವರ್ಗಾವಣೆ ಎಂಬುದು ಅಧಿಕಾರದಲ್ಲಿರುವ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ನಿಜ. ಆದರೆ ಅದಕ್ಕೂ ಇತಿ ಮಿತಿ ಇರಬೇಕು ಎಂದರು.