‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬ ಗಾದೆಯಂತೆ ಕಾಂಗ್ರೆಸ್ ಪಕ್ಷವು ಸರ್ಕಾರದ ಹಣದಲ್ಲಿ ಯಾತ್ರೆ ಕೈಗೊಂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬೆಂಗಳೂರು: ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬ ಗಾದೆಯಂತೆ ಕಾಂಗ್ರೆಸ್ ಪಕ್ಷವು ಸರ್ಕಾರದ ಹಣದಲ್ಲಿ ಯಾತ್ರೆ ಕೈಗೊಂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಯಾತ್ರೆಗಳನ್ನು ನಡೆಸಬಹುದು. ಆದರೆ, ಕಾಂಗ್ರೆಸ್ ಪಕ್ಷವು ಸರ್ಕಾರದ ಹಣದಲ್ಲಿ ಯಾತ್ರೆ ಕೈಗೊಂಡಿದೆ ಎಂದು ತೀಕ್ಷ್ಣವಾಗಿ ಹೇಳಿದರು.

ದಲಿತರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಎಂಬ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮ್ಮ ಪಕ್ಷದ ನಿರ್ಣಯಗಳನ್ನು ನಾವು ಮಾಡಿಕೊಳ್ಳುತ್ತೇವೆ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಜಮೀರ್ ಅಹಮದ್ ಯಾರು? ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಉಪ್ಪಿ ಜತೆ ಮೈತ್ರಿ ಇಲ್ಲ: ಎಲ್ಲಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ರಾಷ್ಟ್ರೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಟ ಉಪೇಂದ್ರ ಅವರ ಕೆಪಿಜೆಪಿ ಪಕ್ಷದ ಸಿದ್ಧಾಂತಗಳಿಗೂ, ನಮಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.