ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಗುರುವಾರ ಮೊದಲ ನೂರು ದಿನಗಳನ್ನು ಪೂರೈಸುತ್ತಿದೆ. ಈ ನೂರು ದಿನಗಳಲ್ಲಿ ಮೂರು ಪ್ರಮುಖ ವಿಷಯಗಳ ಸುತ್ತವೇ ಹೆಚ್ಚು ಚರ್ಚೆ ನಡೆದಿದೆ ಎನ್ನುವುದು ಅಚ್ಚರಿಯಾದರೂ ಸತ್ಯ

ಬೆಂಗಳೂರು : ಹಲವು ಆತಂಕಗಳ ನಡುವೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲುದಾರಿಕೆಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಗುರುವಾರ ಮೊದಲ ನೂರು ದಿನಗಳನ್ನು ಪೂರೈಸುತ್ತಿದೆ.

ಈ ನೂರು ದಿನಗಳಲ್ಲಿ ಮೂರು ಪ್ರಮುಖ ವಿಷಯಗಳ ಸುತ್ತವೇ ಹೆಚ್ಚು ಚರ್ಚೆ ನಡೆದಿದೆ ಎನ್ನುವುದು ಅಚ್ಚರಿಯಾದರೂ ಸತ್ಯ. ಅದರಲ್ಲಿ ಪ್ರಮುಖವಾದದ್ದು ರೈತರ ಸಾಲ ಮನ್ನಾ ವಿಷಯ. ಅದನ್ನು ಬಿಟ್ಟರೆ ಈ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂಬುದರ ಕುರಿತು ವಾದ-ಪ್ರತಿವಾದ ನಡೆದದ್ದೇ ಹೆಚ್ಚು. ಇವೆರಡರ ಹೊರತಾಗಿ ಇತ್ತೀಚಿನ ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಅನಾಹುತ.

ಸಾಲಮನ್ನಾ ವಿಷಯವನ್ನು ಬಹುತೇಕ ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಮೂಲಕ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ ಅವರಿಗೆ ಇದೀಗ ರಾಜಕೀಯ ಅಸ್ಥಿರತೆ ಎದುರಿಸುವುದು ಮತ್ತು ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿಗೆ ಪರಿಹಾರೋಪಾಯ ಕಲ್ಪಿಸುವುದು ಪ್ರಮುಖ ಸವಾಲಾಗಿ ನಿಂತಿದೆ. 

"

ಇದನ್ನು ಬಿಟ್ಟರೆ ಕಳೆದ ನೂರು ದಿನಗಳ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಹೇಳಿಕೊಳ್ಳುವಂಥ ಬೇರೆ ಅಭಿವೃದ್ಧಿ ಕೆಲಸಗಳು ಅಷ್ಟಾಗಿ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. 

  • ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್ ಜೊತೆಗೆ ಗಿರವಿ ಸಾಲಮನ್ನಾ ದ ಕ್ರಾಂತಿಕಾರಿ ನಿರ್ಧಾರ
  • ಸಂಪುಟ, ಸಮನ್ವಯ ಸಮಿತಿ, ಸರ್ಕಾರದ ಅಸ್ತಿತ್ವ: ರಾಜಕೀಯ ಗೊಂದಲ ನಿರ್ವಹಣೆ
  • ಕೊಡಗಿನಲ್ಲಿ ಅತಿವೃಷ್ಟಿ: ಭೀಕರ ನೆರೆ, ಭೂಕುಸಿತ. ತಿಂಗಳಿಂದ ಅತ್ತಲೇ ಹೆಚ್ಚು ಗಮನ

ಹಿಂದಿನ ಯೋಜನೆಗಳ ಜೊತೆ ನಮ್ಮ ‘ವಿಷನ್’ 

ನೂರು ದಿನಗಳನ್ನು ಪೂರೈಸಿರುವ ಮೈತ್ರಿ ಸರ್ಕಾರ ತನ್ನದೇ ಆದ ವಿಷನ್ ಇಟ್ಟುಕೊಂಡಿದ್ದು, ಹಿಂದಿನ ಸರ್ಕಾರದ ಯೋಜನೆಗಳ ಜತೆಗೆ ಹೊಸ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೇದಿಕೆ ಸಿದ್ಧಗೊಳಿಸಿದ್ದೇವೆ. ಸೆಪ್ಟೆಂಬರ್‌ನಿಂದ ವಿಷನ್ ಅನ್ನು ಕಾರ್ಯಗತಗೊಳಿಸುತ್ತೇವೆ. ಮೂರು ತಿಂಗಳಿಂದ ಹಲವಾರು ಕಾರ್ಯಕ್ರಮಗಳ ನಿರ್ವಹಣೆ ಮಾಡಿದ್ದೇವೆ. ಒಂದು ನಿಮಿಷವೂ ಸಮಯ ವ್ಯರ್ಥ ಮಾಡದೆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.