ಬೆಂಗಳೂರು(ಡಿ.26): ಸಿದ್ದರಾಮಯ್ಯ ಯಾವತ್ತೂ ಪಕ್ಷ ಕಟ್ಟಿದವರಲ್ಲ, ಬೇರೆಯವರ ದುಡಿಮೆಯಲ್ಲಿ ಅಧಿಕಾರ ಉಂಡವರು ಎಂದು ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸಿಎಂ ಜೆಡಿಎಸ್ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅವರು ಜೆಡಿಎಸ್`ನಲ್ಲಿದ್ದಾಗ ಜೆಡಿಎಸ್`ಗೆ ಎಷ್ಟು ದುಡಿಮೆ ಮಾಡಿದ್ದಾರೆ ಅಂತಾ ಗೊತ್ತಿದೆ. ೧೯೮೯ರಲ್ಲಿ ದೇವೇಗೌಡರ ಬೆಂಬಲ ಇಲ್ಲದೇ ಸೋತರು. ೧೯೯೯ರಲ್ಲಿ ರಾಜಕೀಯ ನಿವೃತ್ತಿಯಾಗುತ್ತೇನೆ ಅಂತಾ ದೇವೇಗೌಡರ ಮುಂದೆ ಕಣ್ಣೀರು ಹಾಕಿದರು. ಆದರೆ, ಬ್ಯಾನರ್`ನಲ್ಲಿ ಫೋಟೋ ಹಾಕಿಲ್ಲವೆಂದು ಮುನಿಸಿಕೊಂಡು ಮನೆಯಲ್ಲಿ ಕೂತಿದ್ದಂತಹ ವ್ಯಕ್ತಿ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

 ಸಿದ್ದರಾಮಯ್ಯ ಇಂದು ಬೇರೆಯವರ ದುಡಿಮೆಯನ್ನು ಹೈಜಾಕ್ ಮಾಡಿ ಅಧಿಕಾರ ಪಡೆದಿದ್ದಾರೆ. ೨೦೦೪ರಲ್ಲಿ ಸಿಎಂ ಮಾಡಿಲ್ಲವೆಂದು ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಮಕಾಡೆ ಮಲಗಿದ್ದರು. ಧರ್ಮಸಿಂಗ್ ಸರ್ಕಾರದಲ್ಲಿ ಅಬಕಾರಿ ಇಲಾಖೆ ಕೊಟ್ಟಿಲ್ಲ ಅಂತಾ ಮುನಿಸಿಕೊಂಡು ಮನೆಯಲ್ಲಿ ಕೂತಿದ್ದರು.  ಅವರಿಗೆ ಪಕ್ಷ ಕಟ್ಟೋ ಶಕ್ತಿನೂ ಇಲ್ಲ, ಛಲ ಕೂಡಾ ಇಲ್ಲ . ಕಾಂಗ್ರೆಸ್ ನವರು ಶಕ್ತಿ ಧಾರೆ ಎರೆಯದೇ ಇರುತ್ತಿದ್ದರೆ ಚಾಮುಂಡೇಶ್ವರಿ ಬೈ ಎಲೆಕ್ಷನ್`ನಲ್ಲಿ ಸಿದ್ದರಾಮಯ್ಯಗೆ ಠೇವಣಿ ಕೂಡಾ ಉಳಿಯುತ್ತಿರಲಿಲ್ಲ ಎಂದು ಎಚ್ ಡಿ ಕೆ ವಾಗ್ದಾಳಿ ನಡೆಸಿದ್ದಾರೆ.