Asianet Suvarna News Asianet Suvarna News

ರಾಹುಲ್‌ ಸೋಪು ಕಳಿಸಲಿ, ಮೈ ತೊಳಕೊಳ್ತೇನೆ: ಗೌಡ

‘ವಾಟ್‌ ಯು ಥಿಂಕ್‌ ಆಫ್‌ ದೇವೇಗೌಡ. ರಾಹುಲ್‌ ಇನ್ನೂ ಯಂಗ್‌ ಬಾಯ್‌. ಅವರಿಗೆ ರಾಜಕೀಯ ಇತಿಹಾಸ, ಭೂತಕಾಲ, ವರ್ತಮಾನದ ಅರಿವಿಲ್ಲ. ನನ್ನ ತಾಳ್ಮೆಗೆ ಮಿತಿ ಇದೆ. ಸ್ವೇಚ್ಛಾಚಾರವಾಗಿ ಮಾತನಾಡಿದರೆ ಸಹಿಸುವುದಿಲ್ಲ!’

HD Dvegowda Slams Rahul Gandhi

ಬೆಂಗಳೂರು : ‘ವಾಟ್‌ ಯು ಥಿಂಕ್‌ ಆಫ್‌ ದೇವೇಗೌಡ. ರಾಹುಲ್‌ ಇನ್ನೂ ಯಂಗ್‌ ಬಾಯ್‌. ಅವರಿಗೆ ರಾಜಕೀಯ ಇತಿಹಾಸ, ಭೂತಕಾಲ, ವರ್ತಮಾನದ ಅರಿವಿಲ್ಲ. ನನ್ನ ತಾಳ್ಮೆಗೆ ಮಿತಿ ಇದೆ. ಸ್ವೇಚ್ಛಾಚಾರವಾಗಿ ಮಾತನಾಡಿದರೆ ಸಹಿಸುವುದಿಲ್ಲ!’

ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಂ ಎನ್ನುತ್ತ, ಸಂಘ ಪರಿವಾರಕ್ಕೆ ಹೋಲಿಕೆ ಮಾಡಿ ಜಾತ್ಯತೀತತೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಕ್ರೋಶ ಭರಿತವಾಗಿ ತಿರುಗಿಬಿದ್ದ ಪರಿ ಇದು.  ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಭೂತಕಾಲದ ರಾಜಕೀಯ ಅರಿವಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ರಾಹುಲ್‌ ಗಾಂಧಿಗೆ ಪ್ರಬುದ್ಧತೆ ಇಲ್ಲ. ಜೆಡಿಎಸ್‌ ಮೊದಲು ಶುದ್ಧವಾಗಿ ಬರಲಿ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಎಷ್ಟುಪರಿಶುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟುಶುದ್ಧರು ಎಂಬುದು ಗೊತ್ತಿದೆ. ರಾಹುಲ್‌ ಗಾಂಧಿ ಮಾತ್ರ ಸ್ವಚ್ಛ, ನಮ್ಮ ಮೈ ಮೈಲಿಗೆಯಾಗಿದೆ. ಸೋಪು ಕಳುಹಿಸಲಿ. ಅದರಲ್ಲಿ ತೊಳೆದುಕೊಳ್ಳುತ್ತೇನೆ ಎಂದು ವ್ಯಂಗ್ಯವಾಗಿ ತಿರುಗೇಟು ಕೊಟ್ಟರು.

ದೇವೇಗೌಡರನ್ನು ರಾಹುಲ್‌ ಗಾಂಧಿ ಏನೆಂದು ತಿಳಿದುಕೊಂಡಿದ್ದಾರೆ? ಯಾರೋ ಚೀಟಿಯಲ್ಲಿ ಬರೆದುಕೊಡುವುದನ್ನು ಓದುವವರು ಎಂದುಕೊಂಡಿದ್ದಾರಾ? ಎಚ್ಚರಿಕೆಯಿಂದ ಹುಷಾರಾಗಿ ಮಾತನಾಡಬೇಕು. ನನ್ನ ತಾಳ್ಮೆಗೆ ಮಿತಿ ಇದೆ. ಸ್ವೇಚ್ಛಾಚಾರವಾಗಿ ಮಾತನಾಡಿದರೆ ಸಹಿಸುವುದಿಲ್ಲ. ಪಕ್ಷದ ಬಂಡಾಯ ಶಾಸಕರು ಕಾಂಗ್ರೆಸ್‌ಗೆ ಸೇರಿದ ತಕ್ಷಣ ಜೆಡಿಎಸ್‌ನ ಅವಸಾನ ಕುರಿತು ಹೇಳಿಕೆ ನೀಡುವುದು ಸರಿಯಲ್ಲ. ಜೆಡಿಎಸ್‌ನ ಜಾತ್ಯತೀತ ವಿಚಾರದಲ್ಲಿ ನಮ್ಮ ನೈತಿಕತೆ, ಯೋಗ್ಯತೆಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಬಿಜೆಪಿಯ ಬಿ ಟೀಂ, ಸಂಘ ಪರಿವಾರಕ್ಕೆ ನಂಟಿದೆ ಎನ್ನುತ್ತೀರಾ? ಜೆಡಿಎಸ್‌ನಲ್ಲಿ ಎ ಮತ್ತು ಬಿ ಟೀಂ ಇದೆ. ಆದರೆ, ಅದು ಬಿಜೆಪಿಯದ್ದಲ್ಲ. ಒಂದು ದೇವೇಗೌಡರದ್ದು, ಮತ್ತೊಂದು ಕುಮಾರಸ್ವಾಮಿಯದ್ದು ಮಾತ್ರ ಎಂದು ತೀಕ್ಷ$್ಣವಾಗಿ ಹೇಳಿದ ಅವರು, ರಾಜ್ಯದಲ್ಲಿರುವುದು ಇಂದಿರಾ ಗಾಂಧಿ ಕಾಂಗ್ರೆಸ್ಸಾ, ಸೋನಿಯಾ ಗಾಂಧಿ ಕಾಂಗ್ರೆಸ್ಸಾ ಅಥವಾ ಸಿದ್ದರಾಮಯ್ಯ ಕಾಂಗ್ರೆಸ್ಸಾ ಎನ್ನುವುದು ಮೊದಲು ನಿರ್ಧಾರವಾಗಬೇಕು. ಕಾಂಗ್ರೆಸ್‌ ಸೇರ್ಪಡೆಯಾದ ಏಳು ಮಂದಿ ಪರಿಶುದ್ಧರು ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಇಷ್ಟುದಿನ ಎಲ್ಲಿದ್ದರು? ಇದನ್ನೆಲ್ಲಾ ರಾಹುಲ್‌ ಗಾಂಧಿಗೆ ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇರಬೇಕಿತ್ತು. ಸೋನಿಯಾ ಕೂಡ ರಾಹುಲ್‌ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ. ಆದರೆ, ನಾವು ರಾಹುಲ್‌ ಆದೇಶ ಪಾಲನೆ ಮಾಡಬೇಕಿಲ್ಲ. ಮೋದಿ ಆದೇಶವನ್ನೂ ಪಾಲನೆ ಮಾಡಬೇಕಾದ ಅಗತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಾಬರಿ ಮಸೀದಿ ಧ್ವಂಸ ಮಾಡಿದಾಗ ದೇವೇಗೌಡರು ಪ್ರಧಾನಿಯಾಗಿದ್ದರಾ? ಸೋನಿಯಾ ಗಾಂಧಿ ಪ್ರತಿಪಕ್ಷ ನಾಯಕಿಯಾಗಿದ್ದ ವೇಳೆ 19 ಚಚ್‌ರ್‍ ಧ್ವಂಸ ಮಾಡಿದಾಗ ಏನು ಮಾಡಲಾಗಿದೆ ಎಂಬುದು ಗೊತ್ತಿದೆಯಾ? ರಾಷ್ಟ್ರದಲ್ಲಿ ಸೋನಿಯಾ ಗಾಂಧಿಯ ಪೌರತ್ವದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕಿಯಾದವರು ಪ್ರಧಾನಿಯಾಗಬಾರದೇ ಎಂದು ಪ್ರಶ್ನಿಸಿದ್ದೇ ನಾನು. ನಿಮಗೆ ಸ್ವಲ್ಪವೂ ಕೃತಜ್ಞತೆ ಬೇಡವೇ ಎಂದು ಗೌಡರು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ತೆಗೆದು ಅವರ ಸ್ಥಳಕ್ಕೆ ಸಿದ್ದರಾಮಯ್ಯ ಅವರನ್ನು ಕಳಿಸಿದಾಗಲೇ ಆ ಪಕ್ಷ ಸ್ವಚ್ಛವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ 150 ಕೋಟಿ ರು. ಲಂಚದ ಆರೋಪ ಮಾಡಲಾಗಿತ್ತು. ಇದರ ಹಿಂದೆ ಡಿ.ಕೆ.ಶಿವಕಮಾರ್‌ ಕೈವಾಡ ಇತ್ತು. ಅಲ್ಲದೇ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ತಂದ ಬಳಿಕ ದೆಹಲಿಗೆ ಆಪರೇಷನ್‌ ಸಕ್ಸಸ್‌ಫುಲ್‌ ಎಂದು ಸಂದೇಶ ಕೊಟ್ಟಿದ್ದರು. ರಾಜ್ಯ ಸರ್ಕಾರ ಭ್ರಷ್ಟಾಚಾರದ ಪರಮಾವಧಿಯಲ್ಲಿದೆ. ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ತೋರಿಸಿ ನೋಡೋಣ ಎಂದು ಸವಾಲು ಹಾಕಿದರು.

ಯಡಿಯೂರಪ್ಪ, ಕುಮಾರಸ್ವಾಮಿ ನಡುವೆ ಜಟಾಪಟಿಯಾದಾಗ ಬಹುಮತ ಸಾಬೀತುಪಡಿಸುವ ವೇಳೆ 117 ಮಂದಿ ಮತ ಹಾಕಿದರೂ ರಾಷ್ಟ್ರಪತಿ ಆಳ್ವಿಕೆಗೆ ಅಂದಿನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಶಿಫಾರಸು ಮಾಡಿದ್ದರು. ಆಗ ಬಿಜೆಪಿ ಸರ್ಕಾರವನ್ನು ಕಿತ್ತೊಗೆದವರು ಯಾರು? ಅಂದು ನೀವು ಎಲ್ಲಿದ್ದಿರಿ ಯಂಗ್‌ ಮ್ಯಾನ್‌? ರಾಹುಲ್‌ ಗಾಂಧಿ ಮೂರನೇ ಸುತ್ತಿನ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಅವರಿಗೆ ಉಳಿದಿರೋದು ಕರ್ನಾಟಕ ಒಂದೇ ಎಂದು ವಾಗ್ದಾಳಿ ನಡೆಸಿದರು.

ಸಂಸತ್‌ನಲ್ಲಿ ಮೂರು ನಿಮಿಷ ಮಾತನಾಡಲು ಕಾಲಾವಕಾಶ ಕೊಡುತ್ತಿದ್ದಾರೆ. ಮೂರು ನಿಮಿಷ ಮಾತನಾಡಲು ಅಲ್ಲಿಗೆ ಹೋಗಬೇಕಾ? ನನಗೆ ಯಾರ ದಾಕ್ಷಿಣ್ಯ ಬೇಕಿಲ್ಲ. ಎರಡೂವರೆ ತಿಂಗಳು ಅವಿರತ ಹೋರಾಟ ಮಾಡುತ್ತೇನೆ. ಅವಿಶ್ರಾಂತ ಹೋರಾಟ ನಡೆಸಿ ಜೆಡಿಎಸ್‌ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಲೋಕಸಭೆಗೆ ಗೌಡರ ಸ್ಪರ್ಧೆ ಡೌಟು

ರಾಜಕೀಯದಲ್ಲಿ ಓಡಾಡಲು ಆರೋಗ್ಯ ಸರಿಯಾಗಿ ಸ್ಪಂದಿಸದ ಕಾರಣ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಕಷ್ಟಎಂದು ದೇವೇಗೌಡರು ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ಸ್ಪರ್ಧಿಸುವುದು ಕಷ್ಟ. ಆದರೆ ದೇವರ ಇಚ್ಛೆ. ಸ್ಪರ್ಧೆಯ ಬಗ್ಗೆ ದೇವರೇ ನಿರ್ಧರಿಸಬೇಕು. ಏನಾಗುತ್ತದೆಯೋ ಹೇಳಲು ಸಾಧ್ಯವಿಲ್ಲ ಎಂದರು.

ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ

ಪ್ರಜ್ವಲ್‌ ರೇವಣ್ಣ ಕುರಿತು ಪಕ್ಷ ತೊರೆದವರಿಗೆ ಬಹಳ ಕಾಳಜಿ ಇದ್ದು, ಅದಕ್ಕೆ ತಕ್ಕ ಉತ್ತರವನ್ನೂ ಆತ ನೀಡಿದ್ದಾನೆ. ನಮ್ಮ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ದೇವೇಗೌಡರು ಹೇಳಿದರು.

ನನ್ನ ಚಿಕ್ಕಪ್ಪ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ಅವರು ಹೇಳಿದ ಹಾಗೆ ನಾನು ಕೇಳುತ್ತೇನೆ. ಟಿಕೆಟ್‌ ವಿಚಾರವನ್ನು ಅವರೇ ತೀರ್ಮಾನ ಮಾಡುತ್ತಾರೆ ಎಂದು ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ. ಪಕ್ಷವನ್ನು ಬಿಟ್ಟವರು ಪ್ರಜ್ವಲ್‌ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದರು, ಅವರಿಗೆ ತಕ್ಕ ಉತ್ತರ ನೀಡಿದ್ದಾನೆ ಎಂದು ತಿರುಗೇಟು ನೀಡಿದರು.

ನನ್ನ ಉತ್ತರಾಧಿಕಾರಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ. ಪಕ್ಷದ ಮುಖಂಡರಾಗಿರುವ ಎಚ್‌.ಡಿ.ರೇವಣ್ಣ ನನ್ನ ಹಿರಿಯ ಪುತ್ರ. ಆದರೆ, ಕುಮಾರಸ್ವಾಮಿ ರಾಜಕೀಯವಾಗಿ ಹಿರಿಯ. ಹೀಗಾಗಿ ನನ್ನ ನಂತರ ಕುಮಾರಸ್ವಾಮಿ ಪಕ್ಷ ಮತ್ತು ನಮ್ಮ ಕುಟುಂಬವನ್ನು ಮುನ್ನಡೆಸಲಿದ್ದಾರೆ.

- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

Follow Us:
Download App:
  • android
  • ios