* ರಾಮನಗರದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರ ಸುದ್ದಿಗೋಷ್ಠಿ* ಪ್ರಜ್ವಲ್ ಮಾತನಾಡುವುದು ಕೆಲವರಿಗೆ ಮನರಂಜನೆಯಾಗಿದೆ: ಗೌಡರ ಸಿಡಿಮಿಡಿ* ರೇವಣ್ಣನ ಮಗ ಒಬ್ಬನೇ ಇಲ್ಲ ಯೂತ್; ಹಲವರು ಇದ್ದಾರೆ* ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಕ್ಕೂ ದೇವೇಗೌಡರ ವಿರೋಧ

ರಾಮನಗರ(ಅ. 21): ಜೆಡಿಎಸ್ ದೇವೇಗೌಡರ ಕುಟುಂಬದ ಪಕ್ಷವಾಗಿದೆ ಎಂಬ ಟೀಕೆಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಗಳು ತಮ್ಮ ಕೆಲ ಕುಟುಂಬ ಸದಸ್ಯರ ವಿರುದ್ಧ ಕಠಿಣ ನಿಲುವು ತಳೆಯುವ ಸೂಚನೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣನವರ ವಿವಾದಾದ್ಮಕ ಮಾತುಗಳಿಗೆ; ಹಾಗೂ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಬಯಸುವ ವಿಚಾರಕ್ಕೆ ಎಚ್.ಡಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ಬಗ್ಗೆ:
ಪ್ರಜ್ವಲ್ ಮಾತನಾಡುವುದನ್ನು ಕೆಲವರು ಮನರಂಜನೆ ಎಂದುಕೊಂಡಿದ್ದಾರೆ. ನಾನು ಅಂಥ ಮನರಂಜನೆಗೆಲ್ಲಾ ಅವಕಾಶ ಕೊಡೋದಿಲ್ಲ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ. ನನಗೆ ಬೆಳೆಸುವುದು ಗೊತ್ತಿದೆ, ತೀರಾ ಚೇಷ್ಟೆ ಮಾಡಿದರೆ ಹೊರಗೆ ಹಾಕೋದೂ ಗೊತ್ತಿದೆ, ಎಂದೂ ಎಚ್ಚರಿಕೆ ನೀಡಿದ್ದಾರೆ.

"ರೇವಣ್ಣನ ಮಗ ಒಬ್ಬನೇನಾ ಯುವಕ; ಹಲವಾರು ಯೂತ್ಸ್ ಇದ್ದಾರೆ. ಯುವಕರು ತಾ ಮುಂದು, ನಾ ಮುಂದು ಅಂತಾರೆ.. ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ಯಾರದ್ದೋ ನಿರ್ದಾಕ್ಷಿಣ್ಯಕ್ಕೋ, ಅಥವಾ ಅಪ್ಪ-ಮಕ್ಕಳು ತೀರ್ಮಾನಿಸಿದಾಕ್ಷಣ ಟಿಕೆಟ್ ಸುಲಭವಾಗಿ ಸಿಕ್ಕಲ್ಲ. ರೇವಣ್ಣನ ಮಗ ರಾಜಕೀಯದಲ್ಲಿ ಬೆಳೆಯುವುದಿದ್ದರೆ ಅದನ್ನು ತಪ್ಪಿಸೋಕೆ ಆಗಲ್ಲ. ಹಣೆಬರಹ ಏನಿದ್ಯೋ ನಾವ್ಯಾರು ತಪ್ಪಿಸೋಕೆ..? ನನಗೆ ನಮ್ಮ ಪಕ್ಷ 120 ಸ್ಥಾನ ದಾಟಬೇಕೆಂಬ ಹಠವಿದೆ," ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅನಿತಾ ಬಗ್ಗೆ:
ಚನ್ನಪಟಟಣದಿಂದ ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವ ವಿಚಾರಕ್ಕೂ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದಾರೆ. "ಚನ್ನಪಟ್ಟಣದಲ್ಲಿ ಸ್ಥಳೀಯರು ಗುರುತಿಸಿಕೊಳ್ಳಬೇಕು ಎಂದು ನಾನು ಹಾಗೂ ಕುಮಾರಸ್ವಾಮಿ ಬ್ಬರೂ ಹೇಳಿದ್ದೇವೆ. ಕೆಲವರು ಅರ್ಜಿ ಹಾಕಿಬಿಟ್ರೆ ಕರ್ಕೊಂಡು ಬಂದು ನಿಲ್ಲಿಸಿಬಿಡ್ತೇವೆ ಅಂತ ಅಂದ್ಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಯಾರನ್ನ ನಿಲ್ಲಿಸಬೇಕು ಎಂದು ನಮಗೆ ಚೆನ್ನಾಗಿ ಗೊತ್ತು" ಎಂದು ಎಚ್.ಡಿ.ದೇವೇಗೌಡರು ಮಾರ್ಮಿಕವಾಗಿ ಹೇಳಿದ್ದಾರೆ.