ಕೇಂದ್ರದ ವಿರುದ್ಧ ನಡೆಯದಂತೆ ಎಚ್‌ಡಿಕೆಗೆ ಗೌಡರ ಸಲಹೆ

HD Devegowda Advice To Son Kumaraswamy
Highlights

ಕೇಂದ್ರದೊಂದಿಗೆ ಯಾವುದೇ ರೀತಿಯಾದವಿರೋಧ ಬೇಡ ಎಂದು ಜೆಡಿಎಸ್ ಮುಖಂಡ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

ಬೆಂಗಳೂರು : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಕುರಿತಂತೆ ಕೇಂದ್ರದೊಂದಿಗೆ ಹೋರಾಟ ನಡೆಸದಂತೆ ಮತ್ತು ಪ್ರಾಧಿಕಾರಕ್ಕೆ ರಾಜ್ಯದ ಇಬ್ಬರ ಹೆಸರನ್ನು ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.

ಪದ್ಮನಾಭನಗರದ ನಿವಾಸದಲ್ಲಿ ಶನಿವಾರ ದೇವೇಗೌಡ ಅವರನ್ನು ಕುಮಾರಸ್ವಾಮಿ ಭೇಟಿಯಾಗಿ ಸುಧೀರ್ಘವಾಗಿ ಚರ್ಚಿಸಿದರು. ಈ ವೇಳೆ ಕೇಂದ್ರದ ವಿರುದ್ಧ ಸಮರ ನಡೆಸದಂತೆ ತಿಳಿಹೇಳಿದ್ದಾರೆ ಎಂದು ತಿಳಿದುಬಂದಿದೆ. ಸುಪ್ರೀಂಕೋರ್ಟ್‌ ನಿರ್ದೇಶನ ಮೇರೆಗೆ ಕೇಂದ್ರವು ಪ್ರಾಧಿಕಾರ ರಚನೆಯಾಗಿದೆ. ಪ್ರಾಧಿಕಾರ ರಚನೆಗೆ ಸಂಬಂಧಪಟ್ಟಂತೆ ಅಧಿಸೂಚನೆಯಲ್ಲಿನ ಲೋಪಗಳ ಕುರಿತು ಸಭೆ ಕರೆಯಲು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುವಂತೆ ಕಿವಿಮಾತು ಹೇಳಿದರು ಎನ್ನಲಾಗಿದೆ.

ಸಂಸತ್‌ ಅಧಿವೇಶನದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯ ನ್ಯೂನತೆಗಳನ್ನು ಪ್ರಸ್ತಾಪಿಸಲಾಗುವುದು. ಅಲ್ಲಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸುವುದು ಸೂಕ್ತ. ಮಾತ್ರವಲ್ಲ ಕೇಂದ್ರ ಸರ್ಕಾರದ ಸೂಚನೆಯಂತೆ ಪ್ರಾಧಿಕಾರಕ್ಕೆ ಇಬ್ಬರು ಹೆಸರನ್ನು ಅದಷ್ಟುಶೀಘ್ರವಾಗಿ ಶಿಫಾರಸು ಮಾಡುವಂತೆ ತಿಳಿಸಿದರು ಎಂದು ತಿಳಿದು ಬಂದಿದೆ.

loader