ಮೈತ್ರಿಕೂಟದಲ್ಲಿ ಮುಂದುವರಿದಿರುವ ಸಚಿವ ಸಂಪುಟ ರಚನೆಯ ಕಸರತ್ತು ಸಂಪುಟದಿಂದ ಯಾರನ್ನು ದೂರವಿಡಬೇಕೆಂಬ ಬಗ್ಗೆಯೂ ಚರ್ಚೆ   

ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೈತ್ರಿಕೂಟಕ್ಕೆ ಜೆಡಿಎಸ್‌ ವರಿಷ್ಠ ದೇವೇಗೌಡರೇ ಹೈಕಮಾಂಡ್. ಸರ್ಕಾರ ರಚನೆಯಾಗಿ ಒಂದು ವಾರ ಕಳೆದರೂ ಉಭಯ ಪಕ್ಷಗಳಿಗೆ ಸಚಿವ ಸಂಪುಟ ರಚನೆ ಇನ್ನೂ ತಲೆನೋವಾಗಿ ಉಳಿದಿದೆ. ಈ ನಡುವೆ, ಯಾರ್ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬಷ್ಟೇ ಪ್ರಾಮುಖ್ಯತೆ ಯಾರಿಗೆ ನೀಡಬಾರದು ಎಂಬ ಬಗ್ಗೆ ಇದೆ.

ಯಾರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬುವುದನ್ನು ಜೆಡಿಎಸ್‌ ವರಿಷ್ಠ ದೇವೇಗೌಡರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಚುನಾವಣೆಪೂರ್ವದಲ್ಲಿ ಜೆಡಿಎಸ್‌ನಿಂದ ಬಂಡಾಯವೆದ್ದು ಕಾಂಗ್ರೆಸ್‌ ಸೇರಿರುವ ಶಾಸಕರಿಗಂತೂ ಮಂತ್ರಿ ಸ್ಥಾನ ನೀಡಲೇಬಾರದೆಂದು ಗೌಡರ ಸ್ಪಷ್ಟ ನಿಲುವು ಎಂದು ಹೇಳಲಾಗುತ್ತಿದೆ.

ವಿಶೇಷವಾಗಿ, ಬಂಡಾಯದ ಮುಚೂಣಿಯಲ್ಲಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಯಾವುದೇ ಮಂತ್ರಿಸ್ಥಾನ ನೀಡಬಾರದೆಂದು ದೇವೇಗೌಡರು ಕಾಂಗ್ರೆಸ್‌ಗೆ ಎಚ್ಚರಿಸಿದ್ದಾರೆನ್ನಲಾಗಿದ್ದು. ಜಮೀರ್ ಅಹಮದ್ ಖಾನ್ ಸೇರಿದಂತೆ 7 ಮಂದಿ ಜೆಡಿಎಸ್ ಶಾಸಕರು ಪಕ್ಷದಿಂದ ಬಂಡಾಯವೆದ್ದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. 

ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 43 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ್ದ ಜಮೀರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲೇಬೆಂಕೆಂಬುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರೀಯ ನಾಯಕ ಗುಲಾಮ್ ನಬೀ ಆಝಾದ್‌ರ ನಿಲುವು ಎಂದು ಹೇಳಲಾಗಿದೆ.