Asianet Suvarna News Asianet Suvarna News

ಸಂಪುಟ ವಿಸ್ತರಣೆಗೆ ಗೌಡರ ಬ್ರೇಕ್ : ಮುಂದಿನ ಪ್ಲಾನ್ ಏನು?

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ದೇವೇಗೌಡರು ಅಸಮಾಧಾನ ಹೊಂದಿದ್ದಾರೆ. ಹಾಗಾದ್ರೆ ಮುಂದಿನ ನಡೆ ಏನು..?

HD Deve Gowda Unhappy Over Cabinet Expansion
Author
Bengaluru, First Published Jun 6, 2019, 7:29 AM IST

ಬೆಂಗಳೂರು :  ಇಬ್ಬರು ಪಕ್ಷೇತರ ಶಾಸಕರನ್ನು ಜೆಡಿಎಸ್‌ ಕೋಟಾ ಅಡಿಯಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಕಾಂಗ್ರೆಸ್‌ ಕೋರಿಕೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಅಸಮ್ಮತಿ ಪರಿಣಾಮವಾಗಿ ಸಂಪುಟ ವಿಸ್ತರಣೆ ಮತ್ತೆ ತ್ರಿಶಂಕು ಸ್ಥಿತಿ ತಲುಪಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ನಡೆದಿದ್ದ ಮಾತುಕತೆ ವೇಳೆ ಪಕ್ಷೇತರ ಶಾಸಕರನ್ನು ಜೆಡಿಎಸ್‌ ಕೋಟಾದ ಅಡಿಯಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಇದಕ್ಕೆ ಕುಮಾರಸ್ವಾಮಿ ಕೂಡ ತಾತ್ವಿಕವಾಗಿ ಒಪ್ಪಿದ್ದರು ಎನ್ನಲಾಗಿತ್ತು. ಆದರೆ, ಕಾಂಗ್ರೆಸ್‌ನ ಈ ಕೋರಿಕೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇದ್ದು, ಈ ಪೈಕಿ ಎರಡು ಜೆಡಿಎಸ್‌ ಕೋಟಾ ಆಗಿದ್ದರೆ, ಒಂದು ಕಾಂಗ್ರೆಸ್‌ನ ಕೋಟಾ ಆಗಿದೆ. ಇಬ್ಬರು ಪಕ್ಷೇತರರನ್ನು ಜೆಡಿಎಸ್‌ ಕೋಟಾದಡಿಯಲ್ಲೇ ತುಂಬಬೇಕು ಎಂಬ ಕಾಂಗ್ರೆಸ್‌ನ ವಾದ ಸರಿಯಿಲ್ಲ. ಬೇಕಿದ್ದರೆ ತಲಾ ಒಂದೊಂದು ಸ್ಥಾನವನ್ನು ಉಭಯ ಪಕ್ಷಗಳು ಬಿಟ್ಟು ಕೊಟ್ಟು ಪಕ್ಷೇತರರನ್ನು ಸಂಪುಟಕ್ಕೆ ತೆಗೆದುಕೊಳ್ಳೋಣ. ಎರಡು ಸ್ಥಾನವನ್ನು ಜೆಡಿಎಸ್ಸೇ ಬಿಟ್ಟುಕೊಡಬೇಕು ಎಂಬ ವಾದವನ್ನು ಒಪ್ಪಲಾಗದು ಎಂಬುದು ದೇವೇಗೌಡರ ನಿಲುವು ಎನ್ನಲಾಗಿದೆ.

ಹೀಗಾಗಿ, ಜೂ.6ರಂದು ನಡೆಯಲಿದೆ ಎನ್ನಲಾಗಿದ್ದ ಸಚಿವ ಸಂಪುಟ ವಿಸ್ತರಣೆ ಮತ್ತೆ ತ್ರಿಶಂಕು ಸ್ಥಿತಿ ತಲುಪಿದ್ದು, ಈ ವಿಚಾರ ಇತ್ಯರ್ಥವಾಗುವವರೆಗೂ ಸಂಪುಟ ವಿಸ್ತರಣೆ ನಡೆಯುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ.

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸಾಕಷ್ಟುಹಗ್ಗ-ಜಗ್ಗಾಟ ನಡೆದಿದೆ. ಕಾಂಗ್ರೆಸ್‌ನ ಅತೃಪ್ತ ಶಾಸಕರು ಹಾಗೂ ಪಕ್ಷೇತರ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಕಾರಣಕ್ಕೆ ಹಾಲಿ ಸಂಪುಟದಲ್ಲಿರುವ ಮೂರು ಖಾಲಿ ಸ್ಥಾನಗಳನ್ನು ಕೋಟಾ ವ್ಯವಸ್ಥೆಯಡಿ ನೋಡದೆ ಅತೃಪ್ತರು ಹಾಗೂ ಪಕ್ಷೇತರನ್ನು ತುಂಬಿಕೊಳ್ಳೋಣ ಎಂಬ ಬಗ್ಗೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ಮಾತುಕತೆ ನಡೆದಿತ್ತು.

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಅತೃಪ್ತ ಕಾಂಗ್ರೆಸ್ಸಿಗರಿಂದಾಗಿ ಸರ್ಕಾರ ಅಸ್ಥಿರಗೊಳ್ಳುವ ಸಾಧ್ಯತೆಯಿದೆ ಎಂಬ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಾಯಕರು ಕೆಲ ಅತೃಪ್ತ ಕಾಂಗ್ರೆಸ್‌ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ದಿಸೆಯಲ್ಲಿ ಪ್ರಕ್ರಿಯೆ ಆರಂಭಿಸಿದರು. ಜೆಡಿಎಸ್‌ ನಾಯಕರು ಹಾಗೂ ಕಾಂಗ್ರೆಸ್‌ನ ಬಹುತೇಕ ನಾಯಕರು ಸಂಪುಟ ಪುನಾರಚನೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಪೂರ್ಣವಾಗಿ ಇತ್ಯರ್ಥಪಡಿಸಬೇಕು ಎಂಬ ವಾದ ಮಾಡಿದ್ದರು.

ಆದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಸಂಪುಟ ಪುನಾರಚನೆ ಬೇಡ ವಿಸ್ತರಣೆ ಸಾಕು ಎಂದು ಪಟ್ಟು ಹಿಡಿದರು. ಪುನಾರಚನೆಯಿಂದ ಗೊಂದಲ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರ ವಾದವಾಗಿತ್ತು. ಅಂತಿಮವಾಗಿ ಸಿದ್ದರಾಮಯ್ಯ ಅವರ ವಾದಕ್ಕೆ ಮನ್ನಣೆ ದೊರೆತು ಸಂಪುಟ ವಿಸ್ತರಣೆಗೆ ಉಭಯ ಪಕ್ಷಗಳ ನಾಯಕರು ಸೀಮಿತರಾದರು. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ನೇರಾನೇರ ಮಾತಕತೆ ನಡೆದು, ಸಂಪುಟಕ್ಕೆ ಮೊದಲು ಇಬ್ಬರು ಪಕ್ಷೇತರರಾದ ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಹಾಗೂ ಮುಳಬಾಗಿಲು ಶಾಸಕ ಎನ್‌. ನಾಗೇಶ್‌ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು. ಈ ಪಕ್ಷೇತರರನ್ನು ಜೆಡಿಎಸ್‌ ಕೋಟಾದಡಿ ತುಂಬಿಕೊಳ್ಳುವುದು ಎಂದು ನಿರ್ಧಾರವಾಗಿತ್ತು.

ಉಳಿದ ಒಂದು ಸ್ಥಾನಕ್ಕೆ ಕಾಂಗ್ರೆಸ್‌ನ ಅತೃಪ್ತ ಶಾಸಕರ ನಾಯಕತ್ವ ವಹಿಸಿರುವ ರಮೇಶ್‌ ಜಾರಕಿಹೊಳಿ ಅವರನ್ನು ಪರಿಗಣಿಸುವುದು. ಒಂದು ವೇಳೆ ಅವರು ಸಚಿವರಾಗಲು ನಿರಾಕರಿಸಿದರೆ ಆಗ ಬಿ.ಸಿ. ಪಾಟೀಲ್‌ ಅವರಿಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದರು.

ಆದರೆ, ಪಕ್ಷೇತರರನ್ನು ಜೆಡಿಎಸ್‌ ಕೋಟಾದಡಿಯಲ್ಲಿ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಕಾಂಗ್ರೆಸ್‌ ಆಗ್ರಹಕ್ಕೆ ದೇವೇಗೌಡರು ಅಸಮ್ಮತಿ ಸೂಚಿಸುವುದರೊಂದಿಗೆ ಸಂಪುಟ ವಿಸ್ತರಣೆ ಮತ್ತೆ ತ್ರಿಶಂಕು ಸ್ಥಿತಿ ತಲುಪಿದೆ.

ಗೌಡರ ನಿಲುವು ಏನು?

1. ಸಚಿವ ಸಂಪುಟದಲ್ಲಿ ಇನ್ನು ಮೂರು ಸ್ಥಾನಗಳು ಭರ್ತಿಗೆ ಬಾಕಿ ಇವೆ

2. ಈ ಪೈಕಿ ಎರಡು ಜೆಡಿಎಸ್‌ ಕೋಟಾದ್ದು, ಇನ್ನೊಂದು ಕಾಂಗ್ರೆಸ್‌ನದ್ದು

3. ಪಕ್ಷೇತರರನ್ನು ಜೆಡಿಎಸ್‌ ಕೋಟಾದಲ್ಲಿ ಭರ್ತಿ ಮಾಡಲು ಸಿದ್ದು ಪಟ್ಟು

4. ಹಲವು ಬಾರಿ ಸಿದ್ದು ಜೊತೆ ಚರ್ಚೆಯ ಬಳಿಕ ಇದಕ್ಕೆ ಒಪ್ಪಿದ್ದ ಎಚ್‌ಡಿಕೆ

5. ಆದರೆ, ಕಾಂಗ್ರೆಸ್‌ನ ಈ ಕೋರಿಕೆಯನ್ನು ನಿರಾಕರಿಸಿದ ಜೆಡಿಎಸ್‌ ವರಿಷ್ಠ

6. ಬೇಕಿದ್ದರೆ ನಾವೊಂದು ಕೊಡೋಣ, ಕಾಂಗ್ರೆಸ್‌ ಇನ್ನೊಂದು ಕೊಡಲಿ

7. ಎರಡು ಸ್ಥಾನವನ್ನು ಜೆಡಿಎಸ್‌ ಕೊಡಲಾಗದು ಎಂದ ದೇವೇಗೌಡ

8. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಸಂಪುಟ ವಿಸ್ತರಣೆ ತ್ರಿಶಂಕು

Follow Us:
Download App:
  • android
  • ios