Asianet Suvarna News Asianet Suvarna News

ಪತ್ನಿಯ ಕಷ್ಟ ನೆನೆದು ಭಾವುಕರಾದ ದೇವೇಗೌಡ

ಹೆಂಡತಿಯ ನಡವಳಿಕೆಯಿಂದ ವ್ಯಕ್ತಿಯೊಬ್ಬ ಬೆಳವಣಿಗೆಯಾಗಿ, ಸಮಾಜದಲ್ಲಿ ಅತ್ಯುನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಈ ದೇವೇಗೌಡನೇ ಸಾಕ್ಷಿ.

HD Deve Gowda Became Emotional Remembering His Wife s Sacrifice
Author
Bangalore, First Published Nov 18, 2018, 9:30 AM IST

ಹೆಂಡತಿಯ ನಡವಳಿಕೆಯಿಂದ ವ್ಯಕ್ತಿಯೊಬ್ಬ ಬೆಳವಣಿಗೆಯಾಗಿ, ಸಮಾಜದಲ್ಲಿ ಅತ್ಯುನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಈ ದೇವೇಗೌಡನೇ ಸಾಕ್ಷಿ.

ಈ ಮಾತು​ಗ​ಳನ್ನು ಹೇಳು​ವಾಗ ಜೆಡಿ​ಎಸ್‌ ವರಿಷ್ಠ ಎಚ್‌.ಡಿ.ದೇವೇ​ಗೌಡ ಭಾವು​ಕ​ರಾ​ದರು. ಪತ್ನಿ ಚೆನ್ನಮ್ಮ ಅವರು ಜೀವ​ನ​ದಲ್ಲಿ ಎದು​ರಿ​ಸಿದ ಕಷ್ಟ​ಗ​ಳನ್ನು ನೆನೆದು ಗದ್ಗ​ದಿ​ತ​ರಾ​ದ​ರು.

ಮನೆಯಂಗಳದಲ್ಲಿ ಮಾತುಕತೆ ವೇಳೆ ಮಾತನಾಡಿದ ಅವರು, ಡಿಪ್ಲೋಮಾ ಮುಗಿಸಿ ಗುತ್ತಿಗೆದಾರನ ಕೆಲಸ ಮಾಡುತ್ತಿದ್ದಾಗ ಕಷ್ಟಬಂದಾಗಲೆಲ್ಲಾ ಹೆಂಡತಿಯ ಒಡವೆಗಳನ್ನು ಅಡವಿಟ್ಟು ಸಂಸಾರ ನಿಭಾಯಿಸಿದ್ದೇನೆ. ಕಷ್ಟದಲ್ಲಿ ಒಡವೆಗಳನ್ನು ಕೇಳಿದಾಗ ಮರು ಮಾತನಾಡದೆ ಆಭರಣಗಳನ್ನು ಬಿಚ್ಚಿಕೊಟ್ಟಿದ್ದಾರೆ. ಪದೇ ಪದೇ ಕೇಳುತ್ತಿದ್ದೆ. ಹೀಗಾಗಿ ಒಡವೆಗಳನ್ನು ಗಿರವಿ ಇಡುವುದನ್ನು ಬಿಡುವವರೆಗೆ ನಾನು ಆಭರಣ ಹಾಕಿಕೊಳ್ಳುವುದಿಲ್ಲ ಎಂದು ಆಕೆ ಹೇಳಿ ಸುಮಾರು ಒಂಭತ್ತು ವರ್ಷ ಒಡವೆಗಳನ್ನು ಹಾಕಿಕೊಂಡಿರಲಿಲ್ಲ. ಆಕೆ ಅನುಭವಿಸಿದ ನೋವುಗಳನ್ನು ಜೀವ ಇರುವವರೆಗೆ ಮರೆಯಲು ಸಾಧ್ಯವಿಲ್ಲ. ನನ್ನ ತಾಯಿಯೂ ಸಹ ತುಂಬಾ ಕಷ್ಟಪಟ್ಟು ಬೆಳೆಸಿದ್ದಾರೆ. ನನ್ನ ಬೆಳವಣಿಗೆಗೆ ತಾಯಿ ಮತ್ತು ಹೆಂಡತಿ ಕಾರಣ ಎಂದು ಭಾವು​ಕ​ರಾಗಿ ಹೇಳಿ​ದ್ದಾರೆ.

ನನ್ನ ತಂದೆ ತೀರಿದ ಬಳಿಕ ಆಸ್ತಿಯನ್ನು ಸಹೋದರರಿಗೆಲ್ಲಾ ಹಂಚಿಕೆ ಮಾಡಿ ನಾನು ಏನನ್ನೂ ತೆಗೆದುಕೊಳ್ಳಲಿಲ್ಲ. ಹೊಳೇನರಸಿಪುರದಲ್ಲಿ ಜಲ್ಲಿ ಒಡೆಯುವ ಕೆಲಸ ಮಾಡಿದ್ದೇನೆ. ಶ್ರೀನಿವಾಸ ಎಂಬುವರ ಸಹಕಾರದಿಂದ ಗುತ್ತಿಗೆದಾರರ ಕೆಲಸ ಆರಂಭಿಸಿದೆ. ಹಣದ ಸಮಸ್ಯೆ ಬಂದಾಗಲೆಲ್ಲಾ ಹೆಂಡತಿಯ ತಂದೆಗೆ ತಿಳಿಯದಂತೆ ಒಡವೆಗಳನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ.

HD Deve Gowda Became Emotional Remembering His Wife s Sacrifice

ಇಷ್ಟೆಅಲ್ಲದೇ, ರಾಜಕೀಯ ಪ್ರವೇಶಿಸಿದ ವೇಳೆ ಪತ್ನಿಗೆ ಆ್ಯಸಿಡ್‌ ಹಾಕಲಾಯಿತು. ರಾಜಕೀಯ ಕುತಂತ್ರದಿಂದಾಗಿ ತಮ್ಮನ ಮಗನೇ ಆ್ಯಸಿಡ್‌ ಹಾಕಿ ಜೈಲಿಗೆ ಹೋದ. ಈ ವೇಳೆ ನನ್ನ ತಮ್ಮ ಕ್ಯಾನ್ಸರ್‌ ಕಾಯಿಲೆಗೆ ತುತ್ತಾದ. ಆತನ ಮಗನ ಬಿಡುಗಡೆಗಾಗಿ ನಾನೇ ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡಿದ್ದೆ. ತಮ್ಮನ ಮಗನ ಬಿಡುಗಡೆಯ ವಿಷಯ ತಿಳಿದ ನನ್ನ ಹೆಂಡತಿಯು ಇದು ಹೇಗೆ ಸಾಧ್ಯ ಎಂದು ವಕೀಲರ ಬಳಿ ಕೇಳಿದ್ದರು. ಆದರೆ, ಯಾರಿಗೂ ಹೇಳಬಾರದು ಎಂದು ಹೇಳಿದ್ದರಿಂದ ವಕೀಲರು ಸಹ ಏನನ್ನೂ ಹೇಳಲಿಲ್ಲ. ಇಷ್ಟೆಲ್ಲಾ ಆದರೂ ಆಕೆ ಯಾರಿಗೂ ಕೇಡನ್ನು ಬಯಸದೆ ಕುಟುಂಬದವರಿಗೆಲ್ಲಾ ಒಳಿತನ್ನು ಬಯಸಿದ್ದಳು. ಜೀವನದಲ್ಲಿ ತುಂಬಾ ನೋವು ತಿಂದ ಮಹಿಳೆ ಆಕೆ ಎಂದು ಭಾವುಕರಾಗಿ ಗುಣಗಾನ ಮಾಡಿದ್ದಾರೆ.

ಭೀಷ್ಮನ ಮಾತು ಕೇಳಿದ್ದರೆ ಕೌರವರು ನಾಶ ಆಗ್ತಿರಲಿಲ್ಲ

ರಾಜಕೀಯ ವ್ಯವಸ್ಥೆ ಮೊದಲಿನಂತೆ ಇಲ್ಲ. ಅಧಿಕಾರ ದಾಹ ಎಲ್ಲರಿಗೂ ಬಂದಿದೆ. ನಾಡಿನ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಅಭಿವೃದ್ಧಿಗಾಗಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರೊಂದಿಗೆ ಚರ್ಚಿಸಿ ಒಗ್ಗಟ್ಟಾಗಿ ಹೋಗುವ ಪ್ರಯತ್ನ ಮಾಡಿದ್ದೇನೆ. ಆದರೆ, ಯಾವುದೇ ಫಲ ಬಯಸಲಿಲ್ಲ. ಎಲ್ಲರನ್ನೂ ಕೂಡಿಸುವುದು ಕಷ್ಟ. ನನ್ನನ್ನು ನಾಡಿನ ಭೀಷ್ಮ ಎಂದು ಕರೆದಿದ್ದೀರಿ. ಭೀಷ್ಮನ ಮಾತು ಕೇಳಿದ್ದರೆ ಕೌರವರು ನಾಶವಾಗುತ್ತಿರಲಿಲ್ಲ ಎಂದು ಜೆಡಿಎಸ್‌ ವರಿಷ್ಠ ದೇವೇ​ಗೌಡ ಬಿಜೆಪಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಬಿಜೆಪಿಯು ಅಗತ್ಯ ಬಿದ್ದಾಗ ರಾಜಕೀಯ ಧುರೀಣರನ್ನು ಬಳಕೆ ಮಾಡಿಕೊಂಡು ಬಿಟ್ಟು ಬಿಡುತ್ತದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ ಹಲವು ರಾಜಕೀಯ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡು ನಂತರ ಅರ್ಧಕ್ಕೆ ಕೈಕೊಟ್ಟಿದೆ ಎಂದು ಬಿಜೆಪಿ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಐಟಿ ಸಿಟಿ ಆಗಿದ್ದು ಹೇಗೆ?

ಐಟಿ-ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವವಿಖ್ಯಾತಿ ಪಡೆದುಕೊಂಡಿದೆ ಎಂದರೆ ಅದಕ್ಕೆ ಕಾರಣ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ. ನಾನು ಕಾಯ್ದೆಗೆ ತಿದ್ದುಪಡಿ ತರದಿದ್ದರೆ ಐಟಿ-ಬಿಟಿ ಕಂಪನಿಗಳಿಗೆ ಜಾಗ ನೀಡಲು ಸಾಧ್ಯವಿರಲಿಲ್ಲ. ಅಂತಹ ನಿಯಮಗಳು ಕಾಯ್ದೆಯಲ್ಲಿದ್ದವು. ಹೀಗಾಗಿ ತಿದ್ದುಪಡಿ ಅನಿವಾರ್ಯವಾಗಿತ್ತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದ್ದಾರೆ.

ಕಾನೂನು ಬಾಹಿರ ದಂಧೆಗಳಿಂದ ವರಮಾನ ಬರುವವರಿಗೆ ಜಮೀನು ನೀಡಬಾರದು ಎಂದು ಕಾಯ್ದೆಯಲ್ಲಿ ಸೇರಿಸಿ, ಕಾನೂನು ಬದ್ಧವಾಗಿ ವ್ಯವಹಾರ ನಡೆಸುವವರಿಗೆ ಜಮೀನು ನೀಡಲಾಯಿತು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಾರಿಗೊಳಿಸಿದ ಭೂಸುಧಾರಣೆ ಕಾಯ್ದೆ ಅತ್ಯುತ್ತಮವಾಗಿದ್ದರೂ ಅವುಗಳಲ್ಲಿನ ಕೆಲವು ನಿಯಮಗಳನ್ನು ಸಡಿಲಗೊಳಿಸದಿದ್ದಲ್ಲಿ ಐಟಿ-ಬಿಟಿ ಕಂಪನಿಗೆ ಸ್ಥಳ ನೀಡಲಾಗುತ್ತಿರಲಿಲ್ಲ. ಈಗ ಬೆಂಗಳೂರು ವಿಶ್ವದಲ್ಲಿಯೇ ಖ್ಯಾತಿ ಪಡೆಯುವಂತಾಗಿದೆ ಎಂದಿದ್ದಾರೆ.

Follow Us:
Download App:
  • android
  • ios