ಬೆಂಗಳೂರು[ಜೂ.23]: ನನ್ನ ಹೆಸರಿನೊಂದಿಗೆ ಗೌಡ ಎಂಬುದನ್ನು ಸೇರಿಸಿಕೊಂಡಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಗೊಬ್ಬರ ದರ ಇಳಿಕೆ ಮಾತುಗಳನ್ನಾಡಿದ ಗೌಡ್ರು

ನನ್ನ ಎಲ್ಲ ಸಟಿರ್ಫಿಕೇಟ್‌ಗಳು ಡಿ.ವಿ.ಸದಾನಂದ ಎಂಬ ಹೆಸರಿನಲ್ಲಿವೆ. 80ರ ದಶಕದಲ್ಲಿ ಮೊದಲ ಬಾರಿಗೆ ಪುತ್ತೂರಿನಿಂದ ಡಿ.ವಿ.ಸದಾನಂದ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಒಂದು ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದೆ. ನಮ್ಮ ಸಮುದಾಯದವರೆಲ್ಲರೂ ವಿರೋಧ ಪಕ್ಷದಲ್ಲಿದ್ದರು. ಏನಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕೆಂದು ತೀರ್ಮಾನಿಸಿದೆ. ಆಗ ನನ್ನ ಆಪ್ತರು ಹೆಸರಿನ ಜತೆಗೆ ಗೌಡ ಎಂದು ಸೇರಿಸಿಕೊಳ್ಳಲು ಸಲಹೆ ನೀಡಿದರು. ನಂತರದ ಬಂದ ಎಲ್ಲ ಚುನಾವಣೆಗಳಲ್ಲಿ ಡಿ.ವಿ.ಸದಾನಂದಗೌಡ ಎಂಬ ಹೆಸರಿನಲ್ಲಿ ಸ್ಪರ್ಧಿಸಿದೆ, ಗೆದ್ದೆ. ರಾಜ್ಯದ ಮುಖ್ಯಮಂತ್ರಿಯಾದೆ. ಈಗ ಕೇಂದ್ರ ಸಚಿವನಾಗಿದ್ದೇನೆ. ಇದು ಆ ‘ಗೌಡ’ ಎಂಬ ಶಬ್ದದ ಮಹತ್ವ. ಅದನ್ನು ಧೈರ್ಯವಾಗಿ ಹೇಳಿಕೊಳ್ಳುವ ತಾಕತ್ತನ್ನು ಒಕ್ಕಲಿಗ ಸಮುದಾಯ ತಮಗೆ ನೀಡಿದೆ ಎಂದರು.

ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡ ಪ್ರತಿಮೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಬೇಕಾದ ಸಕಲ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲಾಗಿದೆ. ಪ್ರತಿದಿನ ವಿಮಾನ ನಿಲ್ದಾಣದಿಂದ ಪ್ರಮಾಣ ಬೆಳೆಸುವ ಲಕ್ಷಾಂತರ ಪ್ರಯಾಣಿಕರಿಗೆ ಕೆಂಪೇಗೌಡರ ಹೆಸರನ್ನು ಪರಿಚಯಿಸಲಾಗುತ್ತಿದೆ.

ಮೇಕೆದಾಟು ಡ್ಯಾಮ್‌ : ಸಚಿವರಾಗುತ್ತಿದ್ದಂತೆ ಡಿವಿಎಸ್ ಗುಡ್ ನ್ಯೂಸ್

ಮುಂದಿನ ದಿನಗಳಲ್ಲಿ ಆದರ್ಶ ಪುರುಷನ ಪ್ರತಿಮೆ ನೋಡುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ. ವಿಮಾನ ನಿಲ್ದಾಣದ ಮುಂಭಾಗದಲ್ಲಿ ಸ್ವಲ್ಪ ಸ್ಥಳಾವಕಾಶವಿದ್ದು, ಅಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀಗಳು ಸಂಬಂಧಪಟ್ಟವರೊಂದಿಗೆ ಚರ್ಚಿಸಿದ್ದಾರೆ. ಶೀಘ್ರದಲ್ಲಿ ಪ್ರತಿಮೆ ಸ್ಥಾಪನೆ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.