Asianet Suvarna News Asianet Suvarna News

ಸುಬ್ರಹ್ಮಣ್ಯ ಮಾರ್ಗದ ಪ್ರಯಾಣಿಕರ ಗಮನಕ್ಕೆ

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಭೂ ಕುಸಿತವಾದ ನಿಟ್ಟಿನಲ್ಲಿ ಸಕಲೇಶಪುರ ಹಾಗೂ ಸುಬ್ರಮಣ್ಯ ರೈಲ್ವೆ ಸೇವೆಯನ್ನು ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

Hassan Mangalore Railway  Service Suspended Due To Landslide
Author
Bengaluru, First Published Aug 22, 2018, 9:57 AM IST

ಬೆಂಗಳೂರು :  ಹಳಿಗಳ ಮೇಲೆ ಮಣ್ಣು, ಬಂಡೆಗಳ ಕುಸಿತದಿಂದ ಸಕಲೇಶಪುರ ಹಾಗೂ ಸುಬ್ರಮಣ್ಯ ಮಾರ್ಗದಲ್ಲಿ ಸದ್ಯ ರೈಲು ಸಂಚಾರ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರಾಜ್ಯದ ಕೊಡಗು ಹಾಗೂ ಘಟ್ಟಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈಲ್ವೆ ಹಳಿಗಳು ಸುರಕ್ಷಿತವಾಗಿರುವ ಬಗ್ಗೆ ನಿಖರ ಮಾಹಿತಿ ಇಲ್ಲದ ಕಾರಣ ಕೆಲವು ಮಾರ್ಗದಲ್ಲಿ ರೈಲ್ವೆ ಸಂಚಾರ ಆರಂಭಿಸುವುದಕ್ಕೆ ಸಾಧ್ಯವಾಗಿಲ್ಲ. ರೈಲು ಹಳಿ ಸುರಕ್ಷಿತವಾಗಿರುವ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಯಾವುದೇ ಮಾಹಿತಿ ಇಲ್ಲ. ಇಲಾಖೆ ಸಿಬ್ಬಂದಿಗಳು ಸಹ ಆ ಸ್ಥಳವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಷ್ಟುಕಡೆ ಹಳಿಗೆ ತೊಂದರೆ ಆಗಿದೆ ಎಂಬ ಮಾಹಿತಿ ತಿಳಿದಿಲ್ಲ. ಮಳೆ ಬಂದು ಅನಾಹುತ ಆಗಿರುವ ಎಲ್ಲ ಹಳಿಯನ್ನು ಪೂರ್ಣ ಪರಿಶೀಲಿಸಿ, ಪರಿಸ್ಥಿತಿ ಉತ್ತಮವಾಗಿದೆ ಎಂಬ ವರದಿ ಬಂದ ನಂತರವಷ್ಟೇ ರೈಲು ಸಂಚಾರ ಆರಂಭಿಸಲಾಗುವುದು. ಅಲ್ಲಿಯವರೆಗೆ ಪರ್ಯಾಯ ಮಾರ್ಗದಲ್ಲೇ ರೈಲ್ವೆ ಸಂಚಾರ ಮುಂದುವರೆಯಲಿದೆ. ಒಂದು ವೇಳೆ ಮಳೆ ಹೆಚ್ಚಾದಲ್ಲಿ ಪರಿಶೀಲನೆ ಕಾರ್ಯವು ಮುಂದೂಡಲಾಗುವುದು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ತಿರುಪ್ಪೂರು, ಪಾಲಕ್ಕಾಡ್‌, ಯಡಕಮರಿ ಕಡೆಯಿಂದ ರೈಲುಗಳು ಸಂಚರಿಸುತ್ತಿದ್ದು, ಸಕಲೇಶಪುರ ಹಾಗೂ ಸುಬ್ರಮಣ್ಯ ಮಾರ್ಗವಾಗಿ ರೈಲು ಸಂಚಾರ ಸದ್ಯ ಸಾಧ್ಯವಿಲ್ಲ. ಈ ಮಾರ್ಗದಲ್ಲಿ ಸುಮಾರು 20 ಕಡೆಗಳಲ್ಲಿ ಹಳಿಗಳ ಮೇಲೆ ಮಣ್ಣು, ಬಂಡೆ ಕುಸಿತದಿಂದ ಹಾನಿಯಾಗಿದೆ. ರಿಪೇರಿ ಕಾರ್ಯ ಮುಕ್ತಾಯ ಆಗಲು ಕೆಲವು ತಿಂಗಳುಗಳೇ ಬೇಕಾಗಬಹುದು ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಮೂಲಕ ಕೇರಳ, ಉಡುಪಿ ಮತ್ತು ಮಂಗಳೂರು ಕಡೆಗೆ ರೈಲುಗಳು ಸಂಚರಿಸುತ್ತಿವೆ. ಯಶವಂತಪುರ- ಕಣ್ಣೂರು ಎಕ್ಸ್‌ಪ್ರೆಸ್‌, ಕಣ್ಣೂರು - ಯಶವಂತಪುರ ಎಕ್ಸ್‌ಪ್ರೆಸ್‌, ಬೆಂಗಳೂರು- ಕನ್ಯಾಕುಮಾರಿ ಎಕ್ಸ್‌ಪ್ರೆಸ್‌, ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್‌ ಸಂಚಾರವೂ ಪುನರಾರಂಭವಾಗಿದೆ. ಶೋರನೂರ್‌, ತಿರುಪ್ಪೂರು, ಪಾಲಕ್ಕಾಡ್‌ ಮಾರ್ಗವಾಗಿ ಮಂಗಳೂರಿಗೆ ರೈಲು ಸಂಚಾರ ಆರಂಭಿಸಿವೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಎಲ್ಲ ರೈಲುಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ.

ಕೊಡಗಿಗೆ ಆಹಾರ ಸಾಮಗ್ರಿ:  ನೈಋುತ್ಯ ವಿಭಾಗೀಯ ರೈಲ್ವೆಯಿಂದ ಕೊಡಗಿನ ನೆರೆಪೀಡಿತ ಪ್ರದೇಶಗಳಿಗೆ ನೀರಿನ ಬಾಟೆಲ್‌, ಬೆಡ್‌ ಶೀಟ್‌, ಔಷಧ, ಹೊದಿಕೆ ಮತ್ತಿತರ ಅಗತ್ಯ ಆಹಾರ ಸಾಮಗ್ರಿ, ಗೃಹೋಪಯೋಗಿ ವಸ್ತುಗಳನ್ನು ಮಂಗಳವಾರ ಒಂದು ಟ್ರಕ್‌ನಲ್ಲಿ ಕಳುಹಿಸಿಕೊಡಲಾಯಿತು. ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ನೀಡಿದ ಈ ಸಾಮಗ್ರಿಗಳು ಕೆ.ಆರ್‌.ಪುರ ರೈಲ್ವೆ ನಿಲ್ದಾಣದಿಂದ ರವಾನಿಸಲಾಗಿದೆ.

ಪರಿಹಾರ ಸಾಮಗ್ರಿ ಉಚಿತ ಸಾಗಣೆ

ಕೊಡಗು ಹಾಗೂ ಕೇರಳದ ನೆರೆಪೀಡಿತ ಪ್ರದೇಶಗಳಿಗೆ ಸಾರ್ವಜನಿಕರು ಆಹಾರ ಪದಾರ್ಥ, ಮತ್ತಿತರ ಸಾಮಗ್ರಿಗಳನ್ನು ಕಳುಹಿಸಿದರೆ ಅದನ್ನು ರೈಲು / ಟ್ರಕ್‌ನಲ್ಲಿ ಉಚಿತವಾಗಿ ಕಳುಹಿಸಿಕೊಡಲಾಗುವುದು. ಮಾಹಿತಿಗಾಗಿ ದೂ.ಸಂ. 97316 66600 ಸಂಪರ್ಕಿಸಬಹುದು.

Follow Us:
Download App:
  • android
  • ios