ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಟಿಪ್ಪು ಜಯಂತಿ ಆಚರಿಸುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.ಟ್ವೀಟ್ ಮೂಲಕ ಬಿಜೆಪಿಯ ಹಿಂದುತ್ವ ಸಿದ್ಧಾಂತಕ್ಕೆ ಟಾಂಗ್ ನೀಡಿದ ಸಿಎಂ
ಬೆಂಗಳೂರು: 'ರಾಮನ ಭಕ್ತ ಹನುಮಂತನ ನಾಡಿದು, ಇಲ್ಲಿ ಟಿಪ್ಪು ಜಯಂತಿ ಆಚರಿಸಬೇಕೋ, ಹನುಮ ಜಯಂತಿ ಆಚರಿಸಬೇಕೋ ನಿರ್ಧಿರಿಸಿ,' ಎಂದು ಹುಬ್ಬಳ್ಳಿ ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, 'ಹಿಂದುತ್ವವನ್ನು ಯಾರೂ ಗುತ್ತಿಗೆ ಪಡೆದಿಲ್ಲ,' ಎಂದಿದ್ದಾರೆ.
ಯೋಗಿ ಭಾಷಣಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿಎಂ, 'ಕರ್ನಾಟಕದಲ್ಲಿ ಎಲ್ಲ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಉತ್ತರ ಪ್ರದೇಶ ಸರಕಾರ ಮಾಡುವಂತೆ, ಒಂದು ಜಯಂತಿ ಬಿಟ್ಟು, ಮತ್ತೊಂದನ್ನು ಮಾಡುವುದಿಲ್ಲ. ಬದಲಾಗಿ ಸೇವಾಲಾಲ್ ಜಯಂತಿ, ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ, ಕಿತ್ತೂರು ರಾಣಿ, ಕೆಂಪೇಗೌಡ, ಕೃಷ್ಣ ಜಯಂತಿ ಸೇರಿ ಸುಮಾರು 26 ಜಯಂತಿಗಳನ್ನು ಆಚರಿಸುತ್ತೇವೆ. ಟಿಪ್ಪು ಒಬ್ಬ ಮತಾಂಧ ಎನ್ನುವುದು ಚರಿತ್ರೆಗೆ ಮಾಡುವ ಅವಮಾನ,' ಎಂದು ಯೋಗಿಗೆ ಟಾಂಗ್ ನೀಡಿದ್ದಾರೆ.
ಮತ್ತಷ್ಟು ಹಿಂದೂ ಮಹಾ ಪುರುಷರಿಗೆ ಸರಕಾರ ನೀಡಿರುವ ಗೌರವವನ್ನು ತಮ್ಮ ಟ್ವೀಟಿನಲ್ಲಿ ಉಲ್ಲೇಖಿಸಿರುವ ಸಿದ್ದರಾಮಯ್ಯ, 'ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಿದ್ದೇವೆ. ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಛಾಯಾಚಿತ್ರ ಹಾಕಲು ಆದೇಶ ಹೊರಡಿಸಿದ್ದು ಕಾಂಗ್ರೆಸ್. ಸುಮ್ಮನೆ ಕಣ್ಣು ಮುಚ್ಚಿಕೊಂಡು ಜಾತಿ ಭಾವನೆ, ಧಾರ್ಮಿಕ ಭಾವನೆ ಕೆರಳಿಸಬಾರದು,' ಎಂದು ಬಿಜೆಪಿ ಹಾಗೂ ಯೋಗಿಗೆ ಸಿಎಂ ಬುದ್ಧಿವಾದ ಹೇಳಿದ್ದಾರೆ.
