ಚಂಡೀಗಡ್(ಆ.10): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಶಿಸ್ತು ಕಾರ್ಯಾಗಾರ ಹಮ್ಮಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಶಿಸ್ತು, ಸಂಯಮ ಮತ್ತು ಸರಳ ವ್ಯಕ್ತಿತ್ವ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಆದರ್ಶವಾಗಿರಬೇಕು ಎಂದು ಮೋದಿ ಶಿಸ್ತು ಕಾರ್ಯಾಗಾರದಲ್ಲಿ ಸಲಹೆ ನೀಡಿದ್ದರು. ಆದರೆ ಕೆಲವರು ಪ್ರಧಾನಿ ಅವರ ಈ ಸಲಹೆಯನ್ನು ಗಾಳಿಗೆ ತೂರಿ ಅವರಿಗೆ ಅಗೌರವ ತೋರುತ್ತಿರುವುದು ಮಾತ್ರ ವಿಪರ್ಯಾಸ.

ಅದರಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಪರಿಣಾಮ ಆಗುತ್ತಿರುವ ಬದಲಾವಣೆ ಕುರಿತು, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ವಿಶೇಷ ಸ್ಥಾನಮಾನದ ರದ್ದುಗೊಂಡ ಪರಿಣಾಮ ನಮ್ಮ ಯುವಕರು ಕಾಶ್ಮೀರಿ ಯುವತಿಯರನ್ನು ಮದುವೆಯಗಬಹುದು. ಈ ಮೂಲಕ ಹರಿಯಾಣಕ್ಕೆ ಸುಂದರ ಕಾಶ್ಮೀರಿ ಸೊಸೆಯಂದಿರು ಸಿಗಲಿದ್ದಾರೆ ಎಂದು ಖಟ್ಟರ್ ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ.

ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡುತ್ತಿದ್ದ ಮುಖ್ಯಮಂತ್ರಿ  ಮನೋಹರ್ ಲಾಲ್  ಖಟ್ಟರ್, ರಾಜ್ಯದಲ್ಲಿ ಗಂಡು-ಹೆಣ್ಣಿನ ನಡುವಿನ ಅನುಪಾತದಲ್ಲಿ ಕುಸಿತ ಕಂಡಿದ್ದು, ಸಂಪುಟದ ಕೆಲವು ಸಚಿವರು ಬಿಹಾರದಿಂದ ಸೊಸೆಯರನ್ನು ತಂದು ಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರಿನ್ನು ಕಾಶ್ಮೀರದ ಯುವತಿಯರತ್ತಲೂ ಕಣ್ಣು ಹಾಯಿಸಬಹುದು ಎಂದು ಹೇಳಿದ್ದಾರೆ.