ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಆತಂಕವೂ ಹೆಚ್ಚಾಗಿದೆ. ಜಿಗ್ನೇಶ್, ಅಲ್ಪೇಶ್, ಹಾರ್ದಿಕ್‌ರಂತಹ ಜಾತಿ ನಾಯಕರು ಕಾಂಗ್ರೆಸ್ ಜೊತೆ ನಿಂತಿದ್ದಾರೆ. ಇವರಲ್ಲಿ ಮುಂಚೂಣಿಯಲ್ಲಿರುವ ಹಾರ್ದಿಕ್ ಪಟೇಲ್ ಅವರ ಲೈಂಗಿಕ ಹಗರಣ ಹೊರಬಂದು ಒಂದಷ್ಟು ಡ್ರಾಮಾ ಕೂಡ ನಡೆದಿದೆ. ಈ ಎಲ್ಲದರ ಬಗ್ಗೆ ‘ಆಜ್‌ತಕ್’ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.
1) ಗುಜರಾತ್ ಚುನಾವಣೆಯಲ್ಲಿ ಎಲ್ಲಾ ಕಣ್ಣಾಮುಚ್ಚಾಲೆಯ ನಂತರ ಕೊನೆಗೂ ರಾಹುಲ್ ಗಾಂಧಿ ಜೊತೆ ಮುಕ್ತವಾಗಿ ಕೈಜೋಡಿಸಿದಿರಿ ಅಲ್ಲವೇ?
ಹಾ:ಮುಕ್ತವಾಗೇನೂ ಬೆಂಬಲ ನೀಡಿಲ್ಲ. ನಾವು ಎತ್ತಿದ್ದ ವಿಷಯಕ್ಕೆ ಕಾಂಗ್ರೆಸಿಗರು ಸಹಮತ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಹಾಗಾಗಿ ಬೆಂಬಲ ನೀಡಿದ್ದೇವೆ. ಇದು ಕೇವಲ ನನ್ನ ನಿರ್ಧಾರವಲ್ಲ. ಗುಜರಾತಿನ ಇಡೀ ಪಟೇಲ್ ಸಮುದಾಯದ ನಿರ್ಧಾರ. ನಮ್ಮ ಮೂಲ ಉದ್ದೇಶ ಏನು ಗೊತ್ತಾ? ಅಹಂಕಾರಿಗಳನ್ನು ಸೋಲಿಸುವುದು. ಕಾಂಗ್ರೆಸ್ ಪಕ್ಷ ನಮಗೆ ಮೀಸಲಾತಿ ನೀಡುವ ಭರವಸೆ ನೀಡಿದೆ. ಅದರಿಂದ ಸಂತೋಷವಾಗಿದೆ. ಹಾಗಾಗಿ ಕೈಜೋಡಿಸಿದ್ದೇವೆ.
2)ಈ ಹಿಂದೆ ನಾನು ಪಟೇಲ್ ಸಮುದಾಯಕ್ಕಾಗಿ ಹೋರಾಡುತ್ತಿದ್ದೇನೆ ಎನ್ನುತ್ತಿದ್ದಿರಿ. ಈಗ ಇಡೀ ಗುಜರಾತಿಗಾಗಿ ಹೋರಾಡುತ್ತಿದ್ದೇನೆ ಎನ್ನುತ್ತಿದ್ದೀರಿ. ಸ್ಪಷ್ಟವಾಗಿ ಹೇಳಿ - ನೀವು ಹೋರಾಟಗಾರನೋ ಅಥವಾ ರಾಜಕಾರಣಿಯೋ?
ಹಾ: ನಾನು ಪಟೇಲರಿಗಾಗಿ ಮಾತ್ರ ಹೋರಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಗುಜರಾತಿಗಳಿಗಾಗಿ ಏಕೆ ಹೋರಾಡಬಾರದು? ನಾನೊಬ್ಬ ಕೃಷಿಕನ ಮಗ. ಕೃಷಿಕರಿಗಾಗಿ ಹೋರಾಡಬಾರದೇ? ನಾನೊಬ್ಬ ನಿರುದ್ಯೋಗಿ. ಹಾಗಿರುವಾಗ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಹೋರಾಡಬಾರದೇ? ಇವತ್ತಿಗೂ ನಾನು ಹೋರಾಟ ಗಾರನೇ ಆಗಿದ್ದೇನೆ. ಆದರೆ, ಅದಕ್ಕೆ ಯಾರಾದರೂ ರಾಜಕೀಯವನ್ನು ಅಂಟಿಸಲು ಬಂದರೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿರುವಷ್ಟು ರಾಜಕಾರಣಿಯೂ ಹೌದು. ನಾನು ರಾಜಕಾರಣವನ್ನು ಕಲಿಯಲೇಬೇಕು. ಏಕೆಂದರೆ, ಈ ಕಳ್ಳರ ಎದುರು ರಾಜಕೀಯ ಗೊತ್ತಿಲ್ಲದೆ ಇದ್ದರೆ ಬದುಕಲು ಸಾಧ್ಯವೇ? ಖಂಡಿತ ರಾಜಕೀಯ ಕಲಿತು ಅವರ ವಿರುದ್ಧ ಹೋರಾಡುತ್ತೇನೆ.
3) ನೀವೇನೋ ಅವರನ್ನು ಕಳ್ಳರು ಎನ್ನುತ್ತೀರಿ. ಆದರೆ,ಬಿಜೆಪಿಯವರು ನಿಮ್ಮನ್ನೇ ಮೂರ್ಖರು ಎನ್ನುತ್ತಿದ್ದಾರೆ. ಕಾಂಗ್ರೆಸಿಗರು ನಿಮಗೆ ಲಾಲಿಪಪ್ ನೀಡಿದ್ದಾರಂತೆ, ನೀವದನ್ನು ತೆಗೆದುಕೊಂಡು ಬುದ್ದು ಆಗಿದ್ದೀರಂತೆ?
ಹಾ: ಅವರು ಮೂರ್ಖ ಎಂದು ಕರೆದಿರುವುದು ನನ್ನನ್ನಲ್ಲ. ಇಡೀ ಪಟೇಲ್ ಸಮುದಾಯವನ್ನು. ಜನರು ಅವರ ನ್ನು ಆರಿಸಿ ಕಳಿಸಿದ್ದು ಇದಕ್ಕೇನಾ? ಬಿಹಾರದ ಒಬ್ಬ ಬಿಜೆಪಿ ನಾಯಕ ಮೋದಿ ಬಗ್ಗೆ ಮಾತನಾಡಿದರೆ ಕೈ ಕಡಿಯುತ್ತೇನೆ ಅನ್ನುತ್ತಾನೆ. ಗುಜರಾತ್ನಲ್ಲಿ ಮೋದಿ ಬಗ್ಗೆ ಮಾತನಾಡಿ ದರೆ ಮೂರ್ಖ ಎನ್ನುತ್ತಾರೆ. ದಾದಾಗಿರಿ ಮಾಡಿ ಎಲ್ಲರ ಬಾಯಿ ಮುಚ್ಚಿಸಬಹುದು ಎಂದು ಇವರೆಲ್ಲ ಅಂದುಕೊಂಡಿದ್ದಾರೆ. ಬಿಜೆಪಿಯ ವರು ಈ ಚುನಾವಣೆಗೆ ಸ್ಪರ್ಧಿಸುವುದಕ್ಕೇ ಅಸಮರ್ಥರಾಗಿದ್ದಾರೆ. ಹಾಗಾಗಿ ಹೆದರಿ ಏನೇನೋ ಹೇಳುತ್ತಿದ್ದಾರೆ. ನಾನು ಬಿಜೆಪಿಗೆ ಸವಾಲು ಹಾಕುತ್ತಿದ್ದೇನೆ. ನೀವು 23 ವರ್ಷದ ಹುಡುಗನ ಸೆಕ್ಸ್ ಸೀಡಿ ತಯಾರಿಸುವ ಬದಲು ಅಭಿವೃದ್ಧಿಯ ಬಗ್ಗೆ ಸೀಡಿ ತಯಾರಿಸಿ.
4) ಅದನ್ನೇ ಕೇಳಬೇಕು ಅಂತಿದ್ದೆ. ಆ ಸೆಕ್ಸ್ ಸೀಡಿ ನಿಜವೇ?
ಹಾ: ಏನಾದರೂ ಆಗಿರಲಿ. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯ ಖಾಸಗಿ ವಿಷಯದ ಚರ್ಚೆ ಏಕೆ ಬೇಕು? ಗುಜರಾತಿನ ಬಗ್ಗೆ ಚರ್ಚೆ ಮಾಡಿ. ನಮಗೆ ಸೌರಾಷ್ಟ್ರ, ಉತ್ತರ ಗುಜರಾತ್ನ ಅಭಿವೃದ್ಧಿಬೇಕು. ಜಿಎಸ್ಟಿ ಬಂದ ನಂತರ ಸೂರತ್ನ ವ್ಯಾಪಾರಿಗಳ ಕತೆ ಏನಾಯಿತು ಎಂಬುದರ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಅವರು ಸೀಡಿ ತೋರಿಸುತ್ತಿದ್ದಾರೆ. ಅದರರ್ಥ ಏನೆಂಬುದು ಗುಜರಾತ್ನ ಜನತೆಗೆ ತಿಳಿದಿದೆ.
5) ಆದರೆ, ನಮ್ಮ ದೇಶದ ಜನ ನೈತಿಕತೆಗೆ ಬೆಲೆ ಕೊಡುತ್ತಾರೆ.ಈ ಸೀಡಿ ಬಂದ ನಂತರ ನಿಮಗೆ ನಷ್ಟವಾಗಿದೆಯೇ?
ಹಾ; ಬಹಳ ನಷ್ಟವಾಗಿದೆ! ಸೀಡಿ ಬಿಡುಗಡೆಯಾದ ಎರಡೇ ದಿನಗಳ ನಂತರ ಗಾಂಧಿನಗರದ ಮಾನಸಾದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದೆ. 30 ಸಾವಿರ ಜನ ಸೇರುವ ನಿರೀಕ್ಷೆಯಿತ್ತು, ಆದರೆ 40 ಸಾವಿರ ಜನ ಸೇರಿದ್ದರು! ಬಹಳ ನಷ್ಟವಾಗಿದೆ ನೋಡಿ! ಆ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೂಡ ರದ್ದುಪಡಿಸಿತ್ತು. ನಾನು ಜನರೇ ಬರುವುದಿಲ್ಲ ಅಂದುಕೊಂಡಿದ್ದೆ. ಆದರೆ, ಸೀಡಿಯಿಂದಾಗಿ ಹೆಚ್ಚು ಜನ ಬಂದರು. ಅಂದರೆ ನಮಗೆ ಲಾಭವಾಯಿತೇ ಹೊರತು ನಷ್ಟವಾಗಲಿಲ್ಲ. ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಲ್ಲಿ ಎಷ್ಟೋ ಮಂದಿ ಗೌರವದಿಂದ ನೌಕರಿ ಮಾಡುತ್ತಿರುತ್ತಾರೆ. ಅವರು ತಮ್ಮ ಹೆಂಡತಿ ಜೊತೆ ಹನಿಮೂನ್ಗೆ ಹೋದರೆ ಅಲ್ಲೂ ಕ್ಯಾಮೆರಾ ಇಡುತ್ತೀರಾ? ವರುಣ್ ಗಾಂಧಿಯ ಸೀಡಿ ಬಂತಲ್ಲ, ಅದನ್ನು ಹೇಗೆ ಮುಚ್ಚಿಹಾಕಿಬಿಟ್ಟರು ನೋಡಿ. ಹೆಸರಿಗೆ ಮಸಿ ಬಳಿಯುವುದರಿಂದ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿದ್ದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ಅವಮಾನಕ್ಕೆ ನಾಯಕರು ಹೆದರುವುದಾಗಿದ್ದರೆ ಭಗತ್ ಸಿಂಗ್, ಸರ್ದಾರ್ ಪಟೇಲ್, ಗಾಂಧೀಜಿಯವರು ಮನೆಯಲ್ಲಿ ಕುಳಿತಿರುತ್ತಿದ್ದರು.
6) ಸರ್ದಾರ್ ಪಟೇಲರ ಹೆಸರು ಹೇಳುತ್ತಿದ್ದೀರಿ. ಅವರದೇ ಸಮುದಾಯದವರು ನೀವು. ಸರ್ದಾರ್ ಪಟೇಲರು ಜಾತಿ, ಧರ್ಮ ಮೀರಿ ಬೆಳೆಯಬೇಕು ಎನ್ನುತ್ತಿದ್ದರು. ನೀವು ಜಾತಿಯನ್ನೇ ಹಿಡಿದು ಹೋರಾಡುತ್ತಿದ್ದೀರಿ?
ಹಾ: ನಮ್ಮ ದೇಶ ಜಾತಿಗಳಿಂದಲೇ ನಿರ್ಮಾಣವಾಗಿದೆ. ಆದ್ದರಿಂದಲೇ ಇದು ಹಿಂದುಸ್ತಾನ. ಹೆಮ್ಮೆಯಿಂದ ಹೇಳುತ್ತೇನೆ ಮೇರಾ ಭಾರತ್ ಮಹಾನ್. ಜಾತಿಯ ಉಳಿವಿಗಾಗಿ ಹೋರಾಟ ಮಾಡುವುದರಲ್ಲಿ ಏನು ತಪ್ಪಿದೆ? ನಾನೊಬ್ಬ ಪಟೇಲ. ಗುಜರಾತಿನಲ್ಲಿ ಪಟೇಲರಿಗೆ ಶಿಕ್ಷಣ ಸಿಗುತ್ತಿಲ್ಲ, ನೌಕರಿ ಸಿಗುತ್ತಿಲ್ಲ. ಅದಕ್ಕಾಗಿ ಮೀಸಲು ಕೇಳುತ್ತಿದ್ದೇನೆ. ನನ್ನ ಹೆಸರಿನ ಮುಂದೆ ಪಟೇಲ್ ಇದೆ ಅಂದರೆ ಪಟೇಲರಿಗಾಗಿ ಹೋರಾಡುವುದು ನನ್ನ ಜವಾಬ್ದಾರಿ. ಇಷ್ಟಕ್ಕೂ ನಾನು ಶಿಕ್ಷಣ ಹಾಗೂ ನೌಕರಿಯನ್ನು ಪಟೇಲರಿಗೆ ಮಾತ್ರ ಕೊಡಿ ಎಂದು ಕೇಳುತ್ತಿಲ್ಲ.
7) ಗುಜರಾತಿನಲ್ಲಿ ಮುಂದುವರಿದ ಜಾತಿಯವರೆಂದರೆ ಪಟೇಲರು. ಸೂರತ್ನ ವಜ್ರದ ವ್ಯಾಪಾರಿಗಳು, ಅಹಮದಾಬಾದ್ನ ದೊಡ್ಡ ದೊಡ್ಡ ಉದ್ಯಮಿಗಳೆಲ್ಲ ಪಟೇಲರೇ. ಆದರೂ ಪಟೇಲರು ಹಿಂದುಳಿದಿದ್ದಾರೆ ಎಂದು ಹೇಗೆ ಹೇಳುತ್ತೀರಿ? ಬಡವರು ಎಲ್ಲ ಜಾತಿಯಲ್ಲೂ ಇರುತ್ತಾರಲ್ಲವೇ?
ಹಾ: ಜಿಎಸ್ಟಿ, ನೋಟು ಅಮಾನ್ಯೀಕರಣದ ನಂತರ ಈ ವ್ಯಾಪಾರಿಗಳೆಲ್ಲ ಬಾಗಿಲು ಮುಚ್ಚಿಕೊಂಡು ಹಳ್ಳಿಗೆ ಹೋಗಿದ್ದಾರೆ. ವ್ಯಾಪಾರಿಯಾ ಗಬೇಕಾದವರು ಸನ್ಯಾಸಿಯಾಗಿದ್ದಾರೆ, ಸನ್ಯಾಸಿಯಾಗಬೇಕಿದ್ದವರು ವ್ಯಾಪಾರಿಯಾಗಿದ್ದಾರೆ. ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕರೆಂಟೂ ಸಿಗುತ್ತಿಲ್ಲ, ನರ್ಮದೆಯ ನೀರೂ ಸಿಗುತ್ತಿಲ್ಲ. ಯುವಕರು ಕೆಲಸವಿಲ್ಲದೆ ಕುಳಿತಿದ್ದಾರೆ. ಇವರಲ್ಲಿ ಪಟೇಲರೂ ಸಾಕಷ್ಟಿದ್ದಾರೆ. ಅವರಿಗೆ ಮೀಸಲು ಕೊಡಿ ಎಂದು ಕೇಳುತ್ತಿದ್ದೇನೆ.
8) ಹೇಗೆ ಮೀಸಲು ಕೊಡಬೇಕು? ಅದಕ್ಕೇನಾದರೂ ಸೂತ್ರವಿದೆಯೇ? ಈಗಾಗಲೇ ಶೇ.50ರಷ್ಟು ಮೀಸಲಾತಿ ಇದೆಯಲ್ಲ?
ಹಾ:ನನಗೆ ಒಂದು ವಿಷಯ ಅರ್ಥವಾಗುತ್ತಿಲ್ಲ. ಏಕೆ ಮೀಸಲನ್ನು ಶೇ.50ಕ್ಕಿಂತ ಹೆಚ್ಚು ಕೊಡಬಾರದು? ಸುಪ್ರೀಂಕೋರ್ಟ್ ನೀಡಿದ್ದು ಕೇವಲ ಆದೇಶ ಮಾತ್ರ. ಕಾಯ್ದೆಯನ್ನೇನೂ ರೂಪಿಸಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ನದೇ ಮೂರು ತೀರ್ಪುಗಳಿವೆ. ಒಂದರಲ್ಲಿ ಮೀಸಲು ಶೇ.50ನ್ನು ಮೀರಬಾರದು ಎಂದು ಹೇಳಲಾಗಿದೆ. ಇನ್ನೊಂದರಲ್ಲಿ, ರಾಜ್ಯಗಳಲ್ಲಿ ಅಂತಹ ಪರಿಸ್ಥಿತಿ ಬಂದರೆ ಶೇ.50ನ್ನು ಮೀರಬಹುದು ಎಂದು ಹೇಳಲಾಗಿದೆ. ಮತ್ತೊಂದರಲ್ಲಿ, ಸಮೀಕ್ಷೆ ನಡೆಸಿ ಸರಿಯಾದ ಅಂಕಿ-ಅಂಶ ತಯಾರಿಸಿ ಮೀಸಲು ನಿಗದಿಪಡಿಸಬೇಕು ಎಂದು ಹೇಳಲಾಗಿದೆ. ನಾನು ಗುಜರಾತ್ನಲ್ಲಿ ಪಟೇಲರ ಸಮೀಕ್ಷೆ ನಡೆಸಿ ಎಂದು ಕೇಳುತ್ತಿದ್ದೇನೆ. ನಂತರ ಎಷ್ಟು ಮೀಸಲು ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ರಾಜ್ಯದಲ್ಲಿ ಬಿಜೆಪಿಯವರು ನೀಡಿದ್ದ ಶೇ.10ರಷ್ಟು ಮೀಸಲಾತಿಯನ್ನು ಹೈಕೋರ್ಟ್ ರದ್ದುಪಡಿಸಿದ್ದು ಏಕೆಂದರೆ ಅದಕ್ಕೂ ಮುನ್ನ ಸರಿಯಾದ
ಸಮೀಕ್ಷೆ ನಡೆಸಿರಲಿಲ್ಲ. ಈಗ ಸರ್ವೇ ನಡೆಸಲಿ. ಅದರಲ್ಲಿ ಪಟೇಲರು ಶ್ರೀಮಂತರು ಎಂಬ ಫಲಿತಾಂಶ ಬಂದರೆ ಮಾರನೇ ದಿನದಿಂದಲೇ ಮೀಸಲಾತಿ ಕೇಳುವುದನ್ನು ನಿಲ್ಲಿಸಿಬಿಡುತ್ತೇನೆ. ಯಾವ ಜಾತಿಯವರು ಎಷ್ಟಿದ್ದಾರೋ ಅವರಿಗೆ ಅಷ್ಟು ಮೀಸಲಾತಿ ಕೊಟ್ಟುಬಿಡಿ. ಸಮಸ್ಯೆ ಇತ್ಯರ್ಥವಾದಂತೆಯೇ.
9) ನೀವು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೀರಾ?
ಹಾ: ಖಂಡಿತ ಬಿಜೆಪಿಯ ವಿರುದ್ಧ ಪ್ರಚಾರ ಮಾಡುತ್ತೇನೆ.
