ಭೋಪಾಲ್[ಡಿ.03]: ರಾಜಸ್ಥಾನ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಪರಸ್ಪರ ರಾಜಕೀಯ ಕೆಸರೆರಚಾಟ ಮುಂದುವರೆಸಿದ್ದಾರೆ. ಇವೆಲ್ಲದರ ನಡುವೆ ಹನುಮಂತನ ಜಾತಿ ವಿಚಾರವೂ ತಳುಕು ಹಾಕಿತ್ತು. ಸದ್ಯ ಇದಕ್ಕೆ ಸಂಬಂಧಿಸಿದಂತೆ ಜೈನ ಗುರು ಆಚಾರ್ಯ ನಿರ್ಭಯ ಸಾಗರ್ ಅವರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಭೋಪಾಲ್ ನಿಂದ 25 ಕಿ. ಮೀಟರ್ ದೂರದಲ್ಲಿರುವ ಸಮಸ್‌ಗಢ್ ನಲ್ಲಿರುವ ಪಂಚಬಾಲಯತಿ ಜೈನ ಬಸದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹನುಮಂತ ಜೈನ ಧರ್ಮ ಪಾಲಿಸುತ್ತಿದ್ದರು ಎಂದಿದ್ದಾರೆ. ಸದ್ಯ ಇವರ ಹೇಳಿಕೆ ಭಾರೀ ಚರ್ಚೆ ಸೃಷ್ಟಿಸಿದೆ.

ಈ ಕುರಿತಾಗಿ ಮಾತನಾಡಿದ ಆಚಾರ್ಯ ನಿರ್ಭಯ ಸಾಗರ್ ಜೈನ ಧರ್ಮದಲ್ಲಿ ಹನುಮಂತ ಜೈನ ಧರ್ಮ ಪಾಲಿಸುತ್ತಿದ್ದರು ಎಂದು ಬರೆದಿರುವ ಹಲವಾರು ಗ್ರಂಥಗಳಿವೆ. ಜೈನ ಧರ್ಮದಲ್ಲಿ 24 ಕಾಮದೇವರಿದ್ದಾರೆ ಇವರಲ್ಲಿ ಹನುಮಂತ ಕೂಡಾ ಒಬ್ಬರು ಎಂದಿದ್ದಾರೆ.

'ಜೈನ ದರ್ಶನದ ಅನ್ವಯ ಚಕ್ರವರ್ತಿ, ನಾರಾಯಣ, ಪ್ರತಿ ನಾರಾಯಣ, ಬಲದೇವ, ವಾಸುದೇವ, ಕಾಮದೇವ ಹಾಗೂ ತೀರ್ಥಂಕರರ ತಂದೆ ತಾಯಿ ಇವರೆಲ್ಲರೂ ಕ್ಷತ್ರಿಯರಾಗಿದ್ದರು. ಹೀಗೆ ಒಟ್ಟು 169 ಮಹಾಪುರುಷರಿದ್ದರು, ಇವರಲ್ಲಿ ಹನುಮಂತನ ಹೆಸರೂ ಇದೆ. ಇವರೊಬ್ಬ ಕಾಮದೇವ ಆಗಿದ್ದರಿಂದ ಕ್ಷತ್ರಿಯರಾಗಿದ್ದರು. ಆರಂಭದಲ್ಲಿ ಕ್ಷತ್ರಿಯರಾಗಿದ್ದ ಹನುಮಂತ ವೈರಾಗ್ಯ ತಾಳಿ ಕಾಡಿಗೆ ಹೋಗಿ, ಇದಾದ ಬಳಿಕ ದೀಕ್ಷೆ ಸ್ವೀಕರಿಸಿದರು' ಎಂದಿದ್ದಾರೆ ಜೈನ ಗುರುಗಳು.