ಜೈಪುರ್ (ಮೇ.27): ಹನುಮಂತ ಜಗತ್ತಿನ ಮೊದಲ ಆದಿವಾಸಿ ಎಂದು ಹೇಳುವ ಮೂಲಕ ರಾಜಸ್ತಾನ ಅಲ್ವಾರ್ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ವಿವಾದ ಸೃಷ್ಟಿಸಿದ್ದಾರೆ.  ಆದಿವಾಸಿಗಳನ್ನು ಒಳಗೊಂಡ ಸೈನ್ಯವನ್ನು ಹನುಮಂತ ಕಟ್ಟಿದ್ದು ಅದಕ್ಕೆ ಭಗವಂತ ಶ್ರೀರಾಮ ತರಬೇತಿ ನೀಡಿದ ನಂತರ ದೇಶದ ಬುಡಕಟ್ಟು ಜನರು ಹನುಮಂತನನ್ನು ಆರಾಧ್ಯ ದೈವವಾಗಿ ಪೂಜಿಸಲು ಆರಂಭಿಸಿದರು ಎಂದು ಅಹುಜಾ ಹೇಳಿದ್ದಾರೆ.


ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿ, ಹನುಮಂತನ ವಿರುದ್ಧ ಅಗೌರವ ತೋರಿದ್ದಾರೆ. ಹೀಗಾಗಿ, ತಾನು ಅವರ ಜತೆ ಮಾತನಾಡಿದ್ದಾಗಿ ಎಂದು ಪಕ್ಷದ ಕಚೇರಿಯಲ್ಲಿ ಮಾಧ್ಯಮಕ್ಕೆ ಅಹುಜಾ ಹೇಳಿದ್ದಾರೆ. ಬುಡಕಟ್ಟು ಜನಾಂಗದ ಮೊದಲ ದೇವರು ಹಾಗೂ ಹಿಂದೂವಿನ ದೇವರು ಹನುಮಾನ್ ಜೀ. ಆದರೂ ಬಿಜೆಪಿ ಸಂಸದ ಯಾಕೆ ಅಗೌರವ ತೋರಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದು ದುರದೃಷ್ಟಕರ ಎಂದು ಅಹುಜಾ ಹೇಳಿದ್ದಾರೆ.

ಈ ಹಿಂದೆ ಅಹುಜಾ, ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪ್ರತಿನಿತ್ಯ 5 ಸಾವಿರ ಎಲುಬಿನ ತುಂಡುಗಳು, ಬಳಸಿದ 3 ಸಾವಿರ ಕಾಂಡೋಮ್ ಗಳು, ಗರ್ಭಪಾತ ಮಾಡಲು ಬಳಸಿದ 500 ಚುಚ್ಚುಮದ್ದುಗಳು, 10 ಸಾವಿರ ಸಿಗರೆಟ್ ಗಳು ಕಾಣಸಿಗುತ್ತವೆ ಎಂದು ಹೇಳಿಕೆ ನೀಡಿದ್ದು ಇದು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.