Asianet Suvarna News Asianet Suvarna News

ನಮ್ಮಂಥವರು ಈ ಸಮಾಜದಲ್ಲಿ ಹುಟ್ಟಿದ್ದೇ ಅಪರಾಧ: ಮಲ್ಲಿಕಾ ಘಂಟಿ

ಆಳ್ವಾಸ್ ನುಡಿಸಿರಿಗೆ ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸುವುದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಮಲ್ಲಿಕಾ ಘಂಟಿಯವರೇ ಸ್ಪಷ್ಟನೆ ನೀಡಿದ್ದಾರೆ.  ’ಸುಮ್ನಿರ‌್ರಯ್ಯ, ನಾನೇನು ಮಾಡ್ತಾ ಇದೀನಿ ನಂಗೆ ಗೊತ್ತಿದೆ. ನಾನು ಹೋರಾಟ ಶುರು ಮಾಡಿದಾಗ ನೀವಿನ್ನೂ ಹುಟ್ಟಿರಲಿಲ್ಲ ಅಂತ ಖಡಕ್ಕಾಗಿ ಹೇಳಿ, ನಿಮ್ಮೊಡನಿದ್ದೂ ನಿಮ್ಮಂತೆ ಅಲ್ಲ’ ಎಂದು ಮಲ್ಲಿಕಾ ಘಂಟಿ ತೋರಿಸಿಕೊಟ್ಟರು.

Hampi University vice-chancellor Mallika Ghanti talk about Alva's Nudisiri
Author
Bengaluru, First Published Sep 30, 2018, 11:09 AM IST

ಮೂಡಬಿದ್ರೆ (ಸೆ. 30): ಆಳ್ವಾಸ್ ನುಡಿಸಿರಿ ಅಧ್ಯಕ್ಷತೆ ವಹಿಸುತ್ತಿದ್ದಾರೆ ಎಂದು ಗೊತ್ತಾದಾಗ ಮಲ್ಲಿಕಾ ಘಂಟಿ ವಿರುದ್ಧ ಅನೇಕರು ಸಿಡಿದುಬಿದ್ದರು. ಅಲ್ಲಿಗೇಕೆ ಹೋಗುತ್ತೀರಿ ಅಂತ ಕೂಗಾಡಿದರು. ಈ ಬಗ್ಗೆ ಮಲ್ಲಿಕಾ ಘಂಟಿಯವರು ಕನ್ನಡ ಪ್ರಭದೊಂದಿಗೆ ಮಾತನಾಡಿದ್ದಾರೆ. 

ವೈಯುಕ್ತಿಕವಾಗಿ ನುಡಿಸಿರಿ ಬಗ್ಗೆ ನಿಮ್ಮ ಅನಿಸಿಕೆ ಏನು?
ಶಿಕ್ಷಣ ಸಂಸ್ಥೆಯೊಂದು ಮಾಡುತ್ತಿರುವ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮ. ಕಳೆದ 15 ವರ್ಷದಿಂದ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಬಹುಪಾಲು ಲೇಖಕರು ಭಾಗವಹಿಸಿದ್ದಾರೆ. ನಾನೀಗಾಗಲೇ ಎರಡು ಬಾರಿ ಭಾಗವಹಿಸಿದ್ದೇನೆ. ಇಲ್ಲಿ ನಡೆಯುವ ಗಂಭೀರ ಚರ್ಚೆಗಳು ಗಮನಸೆಳೆಯುವಂತಿರುತ್ತವೆ.

ನುಡಿಸಿರಿಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ವಿರೋಧಿಸುತ್ತಿರುವವರಿಗೆ ಏನು ಹೇಳ್ತೀರಿ?

ನನಗೊಂದು ಗುರಿ ಇದೆ. ಆ ಗುರಿ ಮುಟ್ಟಲಿಕ್ಕೆ ನೂರು ದಾರಿಗಳಿವೆ. ನನ್ನ ಗುರಿ ಮುಟ್ಟಲು, ನನ್ನ ಆಶಯ ವ್ಯಕ್ತಪಡಿಸಲು ಇದು ಒಂದು ವೇದಿಕೆ. ಅದರಾಚೆಗೆ ವೇದಿಕೆ ಯಾರು ಮಾಡ್ತಾರೆ ಅನ್ನುವುದೆಲ್ಲ ಇಲ್ಲಿ ಅಪ್ರಸ್ತುತ. ಕೆಲವು ವರ್ಷಗಳ ಹಿಂದೆ ನಡೆದ ಬಂಡಾಯ ಸಮ್ಮೇಳನದಲ್ಲೊಂದು ತೀರ್ಮಾನ ಆಗಿತ್ತು.

ಎಲ್ಲಿ ಯಾರೇ ಕರೆದರೂ ಹೋಗಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬರಬೇಕು ಅಂತ. ಈ ಕಾರಣದಿಂದ ಈಗಾಗಲೇ ಬರಗೂರು, ಸಿದ್ಧಲಿಂಗಯ್ಯ, ಕುಂವೀ, ಕಂಬಾರ, ಚಂಪಾ ಮೊದಲಾದ ಎಲ್ಲ ಲೇಖಕರೂ ಆ ವೇದಿಕೆಯಲ್ಲಿ ಭಾಷಣ ಮಾಡಿದ್ದಾರೆ, ಅಧ್ಯಕ್ಷರೂ ಆಗಿದ್ದಾರೆ. 15 ನೆಯವಳು ನಾನು. ನನ್ನ ಸಂದರ್ಭದಲ್ಲಿ ಅದ್ಯಾಕೆ ವಿವಾದ ಸೃಷ್ಟಿಸುತ್ತಿದ್ದಾರೋ ಗೊತ್ತಿಲ್ಲ.

ಈ ಬೆಳವಣಿಗೆ ಸಾಂಸ್ಕೃತಿಕ ಅಸ್ಪಶ್ಯತೆ ಅನಿಸ್ತಿದೆಯಾ?

ಹೌದು, ನನಗೆ ಈಗ ಅನಿಸ್ತಾ ಇದೆ. ಕಾಲದಿಂದ ಕಾಲಕ್ಕೆ ನಮ್ಮ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಸಲುವಾಗಿ ನಾವೂ ಬದಲಾಗಬೇಕು. ಮಡಿವಂತಿಕೆ ಇರಬಾರದು. ಜಗತ್ತೆಲ್ಲ ಒಂದು ಅಂತ ಹೊರಟವರಿಗೆ ನಮ್ಮ ನಾಡಿನೊಳಗಿನವರನ್ನು ದೂರ ಇಡುವುದು ಅಂದ್ರೇನು ಇದು? ಬುದ್ಧನನ್ನು ಇಟ್ಟುಕೊಂಡು ಬುದ್ಧನ ಮಾತಿನಂತೆ ನಡೆಯಬೇಕು ಅಂತ ಹೇಳ್ತೀವಿ. ಬುದ್ಧ ಮನುಷ್ಯರ ಜೊತೆಗೇ ಇರಲಿಲ್ಲ. ಆತ ರಾಕ್ಷಸರನ್ನು ಹುಡುಕಿಕೊಂಡು ಹೋಗಿ ಅವರನ್ನು ಮನುಷ್ಯರನ್ನಾಗಿ ಮಾಡಿದ.

ನಾವು ಮನುಷ್ಯರ ಜೊತೆಗಿದ್ದುಕೊಂಡು ಮನುಷ್ಯರ ಜೊತೆಗೆ ಬದುಕಲಿಕ್ಕೆ ಆಗಲಿಲ್ಲ ಅಂದರೆ ಬಹುಶಃ ನಾವು ಓದಿನಿಂದ, ಚರಿತ್ರೆಯಿಂದ ಸರಿಯಾಗಿ ತಿಳುವಳಿಕೆ ಪಡೆದುಕೊಂಡಿಲ್ಲವೇನೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಇತ್ತೀಚೆಗೆ ನಮ್ಮ ವಿಚಾರಗಳನ್ನೇ ಮರು ಪರಿಶೀಲನೆ ಮಾಡಬೇಕು ಅನಿಸಲಿಕ್ಕೆ ಹತ್ತಿದೆ.

ಕಳೆದ ಸಲ ಬೇರೆ ಸಂದರ್ಭದಲ್ಲಿ ವೈದೇಹಿ ಅವರ ಬಗ್ಗೆಯೂ ಅವಹೇಳನೆಗಳಾಗಿದ್ದವು. ಈಗ ನಿಮ್ಮ ಬಗ್ಗೆ. ಇದು ಏನನ್ನು ಸೂಚಿಸುತ್ತಿದೆ?

ಸಾಹಿತ್ಯ ಸಂದರ್ಭದೊಳಗೆ ಬೆದರಿಕೆ ಒಡ್ಡುವ ಸನ್ನಿವೇಶ ಇದು. ನಾವು ಎಲ್ಲಿ ಹೋಗಬೇಕು, ಹೇಗಿರಬೇಕು, ಎಷ್ಟು ತಗ್ಗಬೇಕು, ಎಷ್ಟು ಬಗ್ಗಬೇಕು ಅನ್ನೋದನ್ನು ಹೇಳಲಿಕ್ಕೆ ಇವರಿಗೆ ಯಾರು ಸ್ವಾತಂತ್ರ್ಯ ಕೊಟ್ಟರು? ವ್ಯಕ್ತಿಗತವಾಗಿ ಆಲೋಚನೆ ಹೇಳಲು ಎಲ್ಲರೂ ಸರ್ವಸ್ವತಂತ್ರರು. ವೈಯುಕ್ತಿಕ ನೆಲೆಯಲ್ಲೇ ನನಗೆ ಆತಂಕ ಅಂತಾದರೆ ನಾನು ಸಾಮಾಜಿಕ ನೆಲೆಯೊಳಗೆ ಹೇಗೆ ನಿರ್ಭಿಡೆಯಿಂದ ಇರಲಿಕ್ಕಾಗುತ್ತೆ. ಸಮ್ಮೇಳನದಲ್ಲಿ ನನ್ನ ಭಾಷಣದ ನಂತರ ಚರ್ಚೆ ಪ್ರಾರಂಭ ಆಗಬೇಕಿತ್ತು. ಅದು ನಿಜವಾದ ಪ್ರಜಾಪ್ರಭುತ್ವ.

ನಾನು ಇನ್ನೂ ಏನೂ ಮಾತನಾಡಿಲ್ಲ. ಒಪ್ಕೊಂಡ ತಕ್ಷಣ ನನ್ನನ್ನು ಅನುಮಾನಿಸುವುದು ಎಷ್ಟು ಸರಿ. ಅವರಿವತ್ತು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಲ್ಲಿಕಾ ಘಂಟಿ ಅವರನ್ನಲ್ಲ. ಮಲ್ಲಿಕಾ ಘಂಟಿ ಅವರನ್ನು ಈಗಾಗಲೇ ಕರೆದಾಗಿದೆ. ನಾನು ಈಗ ಹೋಗ್ತಿರೋದು ಕುಲಪತಿಯಾಗಿ.

ನೀವು ಕುಲಪತಿಯಾಗಲು ಗೌರಿ ಲಂಕೇಶ್ ಕಾರಣ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಅವರಿಗೆ ಅವಮಾನ ಮಾಡಿದ್ದೀರಿ ಅನ್ನುತ್ತಿದ್ದಾರೆ. ಹಾಗಾದರೆ ಮಲ್ಲಿಕಾ ಘಂಟಿ ಅವರಿಗೆ ನಿಜಕ್ಕೂ ಕುಲಪತಿಯಾಗುವ ಅರ್ಹತೆ ಇರಲಿಲ್ವಾ?

ಇವತ್ತು ಗೌರಿ ಬದುಕಿಲ್ಲ. ಅಂದಿನ ಮುಖ್ಯಮಂತ್ರಿಗಳು ಬದುಕಿದ್ದಾರೆ. ಹೀಗೆಲ್ಲ ಆರೋಪ ಮಾಡುತ್ತಿರುವವರನ್ನು ಅವರ ಬಳಿ ಕರೆದುಕೊಂಡು ಹೋಗಲಿಕ್ಕೆ ನಾನು ರೆಡಿ ಇದ್ದೀನಿ. ನನ್ನ ಸಲುವಾಗಿ ಓಡಾಡಿದವರು ಮಂಜುಳಾ ಮಾನಸ. ಕುಲಪತಿಯಾಗುವ ಆಸೆ ನನಗಿತ್ತು. ಕನ್ನಡ ವಿವಿಗೆ ಕರೆದಾಗ ಅರ್ಜಿ ಸಲ್ಲಿಸಿದ್ದೆ. ಆಯ್ಕೆ ಸಮಿತಿಯ ಪಟ್ಟಿಯಲ್ಲಿ ನನ್ನ ಹೆಸರು ಬಂದಮೇಲೆ ನಾನು ಹೋಗಿ ಅವತ್ತಿನ ಮುಖ್ಯಮಂತ್ರಿಗಳಲ್ಲಿ ಒಂದು ವಿನಂತಿ ಮಾಡಿಕೊಂಡೆ. ನನಗೊಂದು ಅವಕಾಶ ಕೊಟ್ಟರೆ ನಾನು ಕೆಲಸ ಮಾಡುತ್ತೀನಿ ಅಂತ.

ಈ ಕೆಲಸಕ್ಕಾಗಿ ನಾನು ಯಾರ ಕಡೆಯಿಂದಲೂ ಇನ್‌ಫ್ಲುಯೆನ್ಸ್ ಮಾಡಿಸಿಲ್ಲ. ಇದರಲ್ಲಿ ಎಳ್ಳಷ್ಟೂ ಗೌರಿಯ ಪಾಲಿಲ್ಲ. ನಾನೂ ಗೌರಿ ಆತ್ಮೀಯ ಗೆಳತಿಯರು. ಚಳುವಳಿಯ ದೃಷ್ಟಿಯಿಂದ, ಪತ್ರಿಕೆಯ ದೃಷ್ಟಿಯಿಂದ, ಬರವಣಿಗೆಯ ದೃಷ್ಟಿಯಿಂದ. ನನ್ನಿಂದ ಪತ್ರಿಕೆಗೆ ಲೇಖನಗಳನ್ನು ಅವರು ಬರೆಸುತ್ತಿದ್ದರು. ಅವರ ಜೊತೆಗೆ 20 ವರ್ಷಗಳ ಒಡನಾಟ, ಸ್ನೇಹ. ಆದರೆ ಖಾಸಗಿ ಕೆಲಸಕ್ಕಾಗಿ ನಾನು ಗೌರಿಯನ್ನು ತಿಲಮಾತ್ರವೂ ಬಳಸಿಕೊಂಡಿಲ್ಲ. ಅವರು ಓಡಾಡಿದ್ದು ಬೇರೊಬ್ಬರನ್ನು ಕುಲಪತಿ ಮಾಡುವ ಸಲುವಾಗಿ. ಆ ಹೆಸರು ಈಗ ಅಪ್ರಸ್ತುತ.

ಬಳ್ಳಾರಿ ವಿಶ್ವವಿದ್ಯಾಲಯ ನನ್ನನ್ನು ಹೊರಹಾಕಿದಾಗ ನನಗೋಸ್ಕರ ವರ್ಷಾನುಗಟ್ಟಲೆ ಓಡಾಡಿದವರು ಮರುಳ ಸಿದ್ಧಪ್ಪ, ಬಂಜಗೆರೆ, ಎಸ್.ಜಿ ಸಿದ್ಧರಾಮಯ್ಯಅವರಂಥ ಹಿರಿಯ ಲೇಖಕರು. ಗೌರಿ ಇಲ್ಲೆಲ್ಲೂ ಇರಲಿಲ್ಲ. ಕುಲಪತಿ ಹುದ್ದೆಯನ್ನು ನಾನು ಇಚ್ಚಿಸಿದ್ದು, ಅದಕ್ಕಾಗಿ ವಿನಂತಿಸಿದ್ದು ನಿಜ. ಅದು ತಪ್ಪು ಅಂತ ನನಗನಿಸುತ್ತಿಲ್ಲ. 

ಗೌರಿಯನ್ನು ಬಂಡವಾಳ ಮಾಡಿಕೊಂಡು ಕೈಗೂಲಿ ಚಳುವಳಿಕಾರರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದಿರಿ. ಅಂಥಾ ವರ್ತನೆ ನಿಜಕ್ಕೂ ಕಂಡುಬಂದಿದೆಯಾ?

ನನಗೆ ಅನಿಸುತ್ತಿದೆ ಇತ್ತೀಚೆಗೆ. ಕಲ್ಬುರ್ಗಿ ಅವರು ಬಹಳ ದೊಡ್ಡ ಸಂಶೋಧಕರು. ಅವರ ಹತ್ಯೆಯಾದಾಗ ನಾವೆಲ್ಲ ಇದೇ ರೀತಿ ಪ್ರತಿಭಟನೆ ಮಾಡಬಹುದಿತ್ತಲ್ಲಾ. ಮಾಡಿದ್ದೀವಿ, ಈ ಪ್ರಮಾಣದಲ್ಲಿ ಮಾಡಿಲ್ಲವಲ್ಲ. ಗೌರಿಯದು ದೊಡ್ಡ ಆಘಾತ, ನಿಜ. ಕಲ್ಬುರ್ಗಿಯವರದೂ ಹೌದಲ್ವಾ. ನಾನು ಬಸವರಾಜ ಕಟ್ಟಿಮನಿ ಅವರಿಂದ ಪ್ರೇರಿತಳಾಗಿ 30 ವರ್ಷಗಳಿಂದ ಚಳುವಳಿ, ಸಂಘಟನೆಗಳಲ್ಲಿ ತಾತ್ವಿಕವಾಗಿ ಇದ್ದವಳು. ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿದ್ದೀನಿ. ಆದರೆ ಇತ್ತೀಚಿನ ತಲೆಮಾರು ಇದೆಯಲ್ಲಾ, ಆ ತಲೆಮಾರಿನ ಬಗ್ಗೆ ನನಗೆ ಪ್ರಶ್ನೆಗಳು ಹುಟ್ಟುತ್ತಿವೆ.

ಕಳೆದ 20 ವರ್ಷಗಳಿಂದೀಚೆಗೆ ನಮ್ಮ ರಾಜ್ಯದಲ್ಲಿ ದೊಡ್ಡ ಸೈದ್ಧಾಂತಿಕ ಚಳುವಳಿಗಳು ಆಗಿಲ್ಲ. ದೊಡ್ಡ ಹೋರಾಟಗಳಿಲ್ಲ. ಈ ಮಧ್ಯದಲ್ಲಿ ಹುಟ್ಟಿದವರಿಗೆ ಚಳುವಳಿಗಳು, ಚಳುವಳಿ ಹುಟ್ಟು ಹಾಕಿದವರ ಸಂಕಟಗಳು, ಅವರ ನೋವು, ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿ ಅವರು ಕಳೆದುಕೊಂಡ ವಿಷಯಗಳು ಗೊತ್ತಿಲ್ಲ. ಅವರು ನಮ್ಮ ಬಗ್ಗೆ ಮಾತನಾಡಬಾರದು ಅಂತಲ್ಲ. ಮಾತಾಡಬೇಕು. ಆದರೆ ಯಾವುದರ ಬಗ್ಗೆ ಮಾತನಾಡಬೇಕು? ಚರಿತ್ರೆ ಬಗ್ಗೆ ಅರಿವಿಲ್ಲದೇ, ನಮ್ಮ ಹೋರಾಟಗಳ ಬಗ್ಗೆ ಜ್ಞಾನವಿಲ್ಲದೇ ನಮ್ಮ ಶಕ್ತಿಯನ್ನು ಅದ್ಹೇಗೆ ಅನುಮಾನಿಸುತ್ತಾರೆ ಅವರು? ಒಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾದ ಅಂದ ಕೂಡಲೇ ಇಡೀ ಶಕ್ತಿಯನ್ನೇ ಅನುಮಾನಿಸೋದಾ? ಇದು ಬಹುಶಃ ಜನರೇಶನ್ ಗ್ಯಾಪ್‌ನಿಂದಲೂ ಆಗಿರಬಹುದು.

ಅಷ್ಟಕ್ಕೂ ಎಡಪಂಥೀಯ ಜಗತ್ತಿನಲ್ಲಿ ಏನು ನಡೆಯುತ್ತಿದೆ? ಅವರವರಲ್ಲೇ ಜಗಳ/ಕಚ್ಚಾಟ/ ಒಗ್ಗಟ್ಟಿಲ್ಲದ ಸ್ಥಿತಿ ಯಾಕೆ ನಿರ್ಮಾಣವಾಗಿದೆ?

ಅದು ಎಲ್ಲರೊಳಗೂ ಇದೆ. ಬರೀ ಎಡಪಂಥೀಯರಲ್ಲಿ ಮಾತ್ರ ಅಲ್ಲ. ಹಿಂದೆ ಗಂಭೀರ ವ್ಯಕ್ತಿಗಳು, ಅನಂತಮೂರ್ತಿ, ಕಾರ್ನಾಡರಂಥ ಹೆಚ್ಚು ಜ್ಞಾನವಂತರು ಇದರಲ್ಲಿದ್ದರು. ಇವತ್ತು ಹಾಗಲ್ಲವಲ್ಲ. ಈ ಯುವ ಜನಾಂಗ ತಲ ಸ್ಪರ್ಶಿಯಾಗಿ ಓದಿಲ್ಲ. ಜೊತೆಗೆ ಸಾಮಾಜಿಕ ಬಿಕ್ಕಟ್ಟುಗಳಿಗೆ ನೇರ ಮುಖಾಮುಖಿಯಾಗಲು ಸಾಧ್ಯವಿಲ್ಲದಂತೆ ಫೇಸ್‌ಬುಕ್ ಬಂದಿದೆ.

ಫೇಸ್ ಇಲ್ಲದ ಫೇಸ್‌ಬುಕ್ ಅದು. ವ್ಯಕ್ತಿಗಳನ್ನು ಯಾರೂ ನೋಡೋದೆ ಇಲ್ವಲ್ಲಾ. ಜನರನ್ನು ನೋಡಿದಾಗ ಪ್ರೀತಿ, ದ್ವೇಷ ಹುಟ್ಟುತ್ತೆ. ಇವತ್ತು ಮುಖವನ್ನೇ ನೋಡದೇ ನಾವು ಮಾತಾಡ್ತೀವಿ. ದ್ವೇಷ, ಪ್ರೀತಿ ಮಾಡಲಿಕ್ಕೂ ಕಾರಣಗಳಿರಬೇಕು. ಇವತ್ತು ಕಾರಣಗಳಿಲ್ಲದೇ ನಾವು ದ್ವೇಷ, ಪ್ರೀತಿ ಮಾಡಲಿಕ್ಕೆ ಹೊರಟೀವಿ. ಎರಡೂ ಬಹಳ ದೊಡ್ಡ ಅಪಾಯಗಳು.

 ಪರಸ್ಪರ ಈ ಅಪನಂಬಿಕೆ ಹುಟ್ಟಲು ಏನು ಕಾರಣ?

ಸಾಮಾಜಿಕ ಜಡತ್ವ ಇರಬಹುದು ಅನಿಸುತ್ತೆ. ಮುನ್ನಡೆಸುವಂಥಾ ಹಿರಿಯರ ದೊಡ್ಡ ಪಡೆಯಿಲ್ಲ ಅನಿಸುತ್ತಿದೆ ನನಗೆ. ಯುವಕರೂ ಹಿರಿಯರ ಮಾತುಗಳನ್ನು ಕೇಳಲು ತಯಾರಿಲ್ಲ. ನಮಗೆ ಆಗ ಹೇಳುವವರಿದ್ದರು. ನಾವು ಕೇಳ್ತಾ ಇದ್ವಿ. ಆದರೆ ಇವತ್ತು ಕೇಳುವ ಪರಂಪರೆಯೇ ಹೋಗಿದೆಯಲ್ಲಾ. ಅವರು ತಮ್ಮ ನಾಲ್ಕು ದಿನದ ಅನುಭವದಿಂದ ಇಡಿಯಾಗಿ ನಮ್ಮನ್ನು ಗ್ರಹಿಸುವುದು ಇದೆಯಲ್ಲಾ, ಬಹುಶಃ ಅದು ಈ ಅಪನಂಬಿಕೆಗೆ ಕಾರಣ ಇರಬಹುದು ಅನ್ನುವ ಅನುಮಾನ ನನಗೆ.

ನುಡಿಸಿರಿಯಂಥ ಸಾರ್ವಜನಿಕರು ಸೇರುವ ಸಮ್ಮೇಳನಗಳಲ್ಲಿ ಭಾಗವಹಿಸುವುದು ಕೂಡ ಜನಪರವಾದ ಮಾರ್ಗವಲ್ಲವೇ?

ನುಡಿಸಿರಿಯಲ್ಲಿ ಅತ್ಯಂತ ಕಟುವಾಗಿ ಮಾತನಾಡಿದವರನ್ನೂ ಯಾರೂ ವಿರೋಧಿಸಿದ ಉದಾಹರಣೆ ಇಲ್ಲವಲ್ಲ? ಚಂಪಾ ಅವರು ತಮಗೆ ಅನಿಸಿದ್ದನ್ನು ಹೇಳಿ ಬಂದರು. ಅವರ ಮಾತಿಗೆ ಯಾರೂ ಅಡ್ಡಿ ಮಾಡಿಲ್ಲ. ನನಗೆ ಆಹ್ವಾನ ಕೊಡುವ ಹೊತ್ತಿನಲ್ಲೂ ಅವರು ಹೀಗೇ ಮಾತನಾಡಬೇಕು ಅಂತೇನೂ ಹೇಳಿಲ್ಲ. ಈವರೆಗೂ ಆ ಥರದ ಮಾತುಗಳು ಬಂದಿಲ್ಲ.

ಯಾವ್ಯಾವ ಗೋಷ್ಠಿಗಳು ಇರಬೇಕು ಅಂತ ಅವರು ನಮ್ಮ ಜೊತೆಗೇ ಚರ್ಚೆ ಮಾಡುತ್ತಾರೆ. ನಾನು ನನ್ನ ಅಭಿಪ್ರಾಯಗಳನ್ನು ಮಂಡಿಸುತ್ತೇನೆ.  ಉಳಿದ ವಿಚಾರಗಳ ಬಗ್ಗೆ ಹೇಳುವ ಹಕ್ಕು ನನಗಿರುವುದಿಲ್ಲ. ಅದು ಸಂಘಟಕರಿಗೆ ಬಿಟ್ಟಿದ್ದು. ಇನ್ನೊಂದು ವಿಚಾರ. ಸಾಮಾಜಿಕ ಬಿಕ್ಕಟ್ಟನ್ನು ಸರಿಪಡಿಸುವುದು ಸಾಹಿತ್ಯದ ಉದ್ದೇಶಗಳಲ್ಲೊಂದು.

ನಮ್ಮ ಬರವಣಿಗೆ ವಿವಿಧ ಮಾಧ್ಯಮಗಳ ಮೂಲಕ ಜನರನ್ನು ತಲುಪಬೇಕು. ಹೋರಾಟದ ಮಾತು ಬಂದಾಗ ನಮ್ಮೊಳಗೇ ನಾಯಕತ್ವ ಇರಬೇಕು ಅನ್ನುವ ಮನಸ್ಥಿತಿಯಿಂದ ಚಳುವಳಿಗಳು ನಾಶವಾಗುತ್ತವೆ. ನಮ್ಮ ದೇಶದ ಚಳುವಳಿಗಳ ದೊಡ್ಡ ದುರಂತ ಇದೇ. ನಾನು ಬಹು ನಾಯಕತ್ವದಲ್ಲಿ ನಂಬಿಕೆ ಇಟ್ಟವಳು. ಇವತ್ತಿನ ಕಾಲಕ್ಕೆ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಅನ್ನುವುದನ್ನು ನಾವು ಒಂದೆಡೆ ಕುಳಿತು ಚರ್ಚಿಸಬೇಕು. ಆದರೆ ಕುಳಿತುಕೊಳ್ಳುವ ವ್ಯವಧಾನ ಯಾರಿಗೂ ಇಲ್ವಲ್ಲಾ.

ಕತ್ತಲೆಯನ್ನು ಓಡಿಸಲಿಕ್ಕೆ ಸಣ್ಣ ಹಣತೆ ಸಾಕು ಅಂತ ಬಾಯಲ್ಲಿ ಹೇಳ್ತೀವಿ. ಆದರೆ ಪರಸ್ಪರ ಮುಖ ನೋಡಿಕೊಂಡು ದೀಪ ಹಚ್ಚಲಿಕ್ಕೇ ತಯಾರಿಲ್ವಲ್ಲ ನಾವು..ಹಚ್ಚಿದ ಮೇಲೆ ಕತ್ತಲೆ ಓಡುತ್ತೆ. ಒಂದು ಸಮ್ಮೇಳನದ ಸರ್ವಾಧ್ಯಕ್ಷತೆ ಇಷ್ಟೆಲ್ಲ ಚರ್ಚೆಗೆ ಒಳಪಡುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಬಹಳ ಸರಳವಾಗಿ ಆಹ್ವಾನವನ್ನು ಸ್ವೀಕರಿಸಿದ್ದೆ. ಆದ್ರೆ ಇದು ಎಲ್ಲೆಲ್ಲೋ ಹೋಗಿ, ಕುಲಪತಿಗಿರಿಯನ್ನೇ ಅನುಮಾನಿಸುತ್ತಿದೆಯಾ.. ಒಂದರ್ಥದಲ್ಲಿ ನಮ್ಮಂಥವರು ಈ ಸಮಾಜದೊಳಗೆ ಹುಟ್ಟಿದ್ದೇ ಅಪರಾಧ. ಓದಿದ್ದು ದೊಡ್ಡ ಅಪರಾಧ.

ಓದಿ ಮಾತಾಡ್ತಾ ಇರುವುದು ಇನ್ನೂ ಘೋರ ಅಪರಾಧ. ಆದರೆ ನನಗೆ ನನ್ನ ನಂಬಿಕೆಗಳಲ್ಲಿ ಖಚಿತತೆ ಇದೆ. ಸಮ್ಮೇಳನಾಧ್ಯಕ್ಷೆಯಾದ ಕೂಡಲೇ ನಾನೇನು ದೊಡ್ಡ ಮನುಷ್ಯಳಾಗಲ್ಲ. ನಾನು ಬೇಡ ಅಂದರೆ ಇನ್ನೊಬ್ಬರು ಅಧ್ಯಕ್ಷರಾಗುತ್ತಾರೆ. ಸಮ್ಮೇಳನಗಳು ನಡೆದೇ ನಡೆಯುತ್ತವೆ. ಅವು ನಿಲ್ಲಲ್ಲ. ಅಷ್ಟು ಜನರನ್ನು ಸೇರಿಸ್ತಾರಲ್ಲ. ಅಲ್ಲಿನ ಯುವ ಸಮುದಾಯ ನಮ್ಮ ಮಾತು ಕೇಳಿ ಸಮಾಜದಲ್ಲಿ ಏನಾದರೊಂದು ಪರಿವರ್ತನೆ ತರಬಹುದಲ್ಲಾ ಎಂಬ ದೂರದ ನಿರೀಕ್ಷೆ ನನ್ನದು.

Follow Us:
Download App:
  • android
  • ios