Asianet Suvarna News Asianet Suvarna News

ರಾಜ್ಯಾದ್ಯಂತ ಹಂದಿಜ್ವರ ದಿಢೀರ್‌ ಹೆಚ್ಚಳ; 14 ಮಂದಿ ಸಾವು

ರಾಜ್ಯಾದ್ಯಂತ ಹಂದಿಜ್ವರ ದಿಢೀರ್‌ ಹೆಚ್ಚಳ |  ಈ ವರ್ಷದ ಎರಡೇ ತಿಂಗಳಲ್ಲಿ 607 ಪ್ರಕರಣ ದೃಢ; 14 ಮಂದಿ ಸಾವು | ಕಟ್ಟೆಚ್ಚರ ವಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸರ್ಕಾರದ ಸೂಚನೆ

H1N1 case increased; 14 people died across the state
Author
Bengaluru, First Published Mar 3, 2019, 8:15 AM IST

ಬೆಂಗಳೂರು (ಮಾ. 03): ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮಾರಣಾಂತಿಕ ಎಚ್‌1ಎನ್‌1 (ಹಂದಿ ಜ್ವರ) ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ಎರಡೇ ತಿಂಗಳಲ್ಲಿ 607 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 14 ಮಂದಿ ಮೃತಪಟ್ಟಿದ್ದು, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕಳೆದ ಇಡೀ ವರ್ಷ 1733 ಪ್ರಕರಣಗಳು ಮಾತ್ರ ದೃಢಪಟ್ಟಿದ್ದವು. ಈ ಪೈಕಿ 72 ಮಂದಿ ಮೃತಪಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ವರ್ಷದ ಆರಂಭದಲ್ಲೇ ಹಂದಿ ಜ್ವರ ಮರಣ ಮೃದಂಗ ಬಾರಿಸುತ್ತಿದೆ. ಎರಡು ತಿಂಗಳಲ್ಲಿ 607 ಪ್ರಕರಣ ವರದಿಯಾಗಿದ್ದು, ಫೆಬ್ರವರಿ ತಿಂಗಳ 28 ದಿನದಲ್ಲೇ 400 ಪ್ರಕರಣಗಳು ದೃಢಪಟ್ಟಿವೆ. ರಾಜ್ಯ ಡೆತ್‌ ಆಡಿಟ್‌ ಕಮಿಟಿ ವರದಿ ಪ್ರಕಾರ ಈ ಪೈಕಿ 14 ಮಂದಿ ಮೃತಪಟ್ಟಿದ್ದಾರೆ.

ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 141 ಪ್ರಕರಣ ವರದಿಯಾಗಿದ್ದು, ಬಿಬಿಎಂಪಿ ಹೊರತುಪಡಿಸಿ ಬೆಂಗಳೂರು ನಗರ ಭಾಗದಲ್ಲಿ 50 ಪ್ರಕರಣ ದೃಢಪಟ್ಟಿದೆ. ಜನವರಿ ಕೊನೆಯ ವಾರದಲ್ಲಿ 49ರಷ್ಟಿದ್ದ ಪ್ರಕರಣಕ್ಕೆ ಫೆಬ್ರವರಿ ಕೊನೆಯ ವಾರದ ವೇಳೆಗೆ 91 ಪ್ರಕರಣ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದೆ. ರಾಜ್ಯಾದ್ಯಂತ ಪ್ರಕರಣಗಳು ಹಠಾತ್‌ ಹೆಚ್ಚಳ ಕಂಡಿರುವುದರಿಂದ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕರಾದ ಎಸ್‌. ಸಜ್ಜನ್‌ ಶೆಟ್ಟಿ ಪ್ರಕಾರ, ರಾಜ್ಯದಲ್ಲಿ ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪ್ರಕರಣಗಳ ಸಂಖ್ಯೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕಾಯಿಲೆಯನ್ನು ಶೀಘ್ರ ಪತ್ತೆ ಹಚ್ಚಿದರೆ ಗುಣಪಡಿಸಬಹುದು. ಆದರೂ ಮುನ್ನೆಚ್ಚರಿಕೆ ವಹಿಸುವಂತೆ ಶುಕ್ರವಾರ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಸುತ್ತೋಲೆ ರವಾನಿಸಲಾಗಿದೆ ಎಂದು ಹೇಳಿದರು.

ಕಟ್ಟೆಚ್ಚರಕ್ಕೆ ಸೂಚನೆ:

ಕಳೆದ ಎರಡು ಡೆತ್‌ ಆಡಿಟ್‌ ಸಮಿತಿ ಸಭೆಯಲ್ಲೂ ಎಚ್‌1ಎನ್‌1 ಮರಣ ಸಂಖ್ಯೆಯ ಹೆಚ್ಚಾಗುತ್ತಿರುವುದು ದೃಢಪಟ್ಟಿದೆ. ಹೀಗಾಗಿ ಇಲಾಖೆಯು ಕೂಡಲೇ ಕಟ್ಟೆಚ್ಚರ ವಹಿಸುವಂತೆ ಆದೇಶ ಮಾಡಿದೆ. ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕಾಯಿಲೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶ ನೀಡಲಾಗಿದೆ.

ಕಾಯಿಲೆಗಳು ತೀವ್ರವಾಗಿ ಹರಡುತ್ತಿರುವ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ರೋಗದ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು. ರೋಗ ಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಕಾಲಕಾಲಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

ಸರ್ಕಾರದಿಂದ ಎಚ್‌1ಎನ್‌1 ಜಾಗೃತಿ

ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು, ಮೆಟ್ರೋ ನಿಲ್ದಾಣಗಳು, ಪ್ರಾಥಮಿಕ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಚ್‌1ಎನ್‌1 ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಗುತ್ತಿದೆ. ಪ್ರತಿಯೊಬ್ಬ ಶಂಕಿತರಿಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಾರ್ಯಕ್ರಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಎಚ್‌1ಎನ್‌1 ಹೆಚ್ಚಾಗುತ್ತಿರುವ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಜತೆಗೆ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಚ್‌1ಎನ್‌1 ಪ್ರಕರಣಗಳ ವಿವರ

ವರ್ಷ -  ದೃಢಪಟ್ಟಪ್ರಕರಣ -  ಸಾವು

2014-  303-   34

2015-  3,565 - 94

2016-  110 - 0

2017 -  3,260 - 15

2018 -  1733 - 72

2019 -  603 - 14

Follow Us:
Download App:
  • android
  • ios